ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರುವ ಕನಸಿದ್ದರೆ ಬಿಟ್ಟು ಬಿಡಿ: ಡಾ. ಪುರುಷೋತ್ತಮ ಬಿಳಿಮಲೆ
ಉಡುಪಿ: ಸಂವಿಧಾನದ 8ನೇ ಪರಿಚ್ಛೇದಕ್ಕೆ ಒಂದು ಭಾಷೆ ಸೇರಿದರೆ, ಅದರಿಂದ ಸಿಗಬಹುದಾದ ಪ್ರಯೋಜಗಳನ್ನು ಸರ್ಕಾರ ಒಂದೊಂದಾಗಿ ಕಡಿತಗೊಳಿಸುತ್ತಿದೆ. ಒಂದು ಭಾಷೆಯನ್ನು 8ನೇಪರಿಚ್ಛೇದಕ್ಕೆ ಸೇರಿಸಿ ಗಟ್ಟಿಗೊಳಿಸುವ ಬದಲು ಅದನ್ನು ನಿರ್ಜಿವಗೊಳಿಸುವ ಪ್ರಯತ್ನ
ಆಗುತ್ತಿದೆ ಎಂದು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದ ಮುಖ್ಯಸ್ಥ, ಜಾನಪದ ತಜ್ಞ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 40 ಲಕ್ಷ ಯುವಕರು ಚೀನಾಕ್ಕೆ ಯುವಜನರ ಕೌಶಲಾಭಿವೃದ್ಧಿಯನ್ನು ವೃದ್ಧಿಸುವ ಉದ್ದೇಶದಿಂದ ಭಾರತ ಸರ್ಕಾರವು 2020ರ
ವೇಳೆಗೆ 40 ಲಕ್ಷ ಯುವಕರನ್ನು ಚೀನಾ ದೇಶಕ್ಕೆ ಕಳುಹಿಸಲು ಚಿಂತನೆ ನಡೆಸಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರವೇ 40 ಲಕ್ಷ ಯುವಕರನ್ನು ಚೀನಾಕ್ಕೆ ಕಳುಹಿಸುತ್ತಿರುವಾಗ ನಾವು ಏನನ್ನು ಬ್ಯಾನ್ ಮಾಡಬೇಕು ಎಂದು ಪ್ರಶ್ನಿಸಿದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತುಳು ಸೇರಿದಂತೆ ಐದು ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಡ ಹಾಕಲಾಯಿತು. ಆದರೆ ಆಗ ತುಳು ಹೊರತುಪಡಿಸಿ ಉಳಿದ ನಾಲ್ಕು ಭಾಷೆಗಳನ್ನು ಮಾತ್ರ ಸೇರಿಸಲಾಯಿತು. ತುಳು ಭಾಷೆಯ ಅಂಗೀಕಾರಕ್ಕೆ ಬೇಕಾದ ಮಸೂದೆಯನ್ನು ತಯಾರಿಸಿ ಸಂಸತ್ತಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಸಂಸತ್ತಿನಲ್ಲಿ ತುಳುವಿನ ಪರವಾಗಿ ಮಾತನಾಡುವವರು ಯಾರು ಇರಲಿಲ್ಲ. ಕರ್ನಾಟಕದ 28 ಸಂಸದರ ಪೈಕಿ ಮಂಗಳೂರಿನ ಸಂಸದರು ಬಿಟ್ಟರೆ ಉಳಿದವರಿಗೆ ತುಳುವಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದು ನನ್ನ ರಾಜ್ಯದ ಭಾಷೆ ಎಂದು ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿಮಾತನಾಡುವ ಚೈತನ್ಯವೂ ಅವರಿಗೆ ಇರಲಿಲ್ಲ. ಹಾಗಾಗಿ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಮಸೂದೆ ಬಿದ್ದು ಹೋಯಿತು ಎಂದರು. ಆ ಬಳಿಕ ಪ್ರಧಾನಿ ವಾಜಪೇಯಿ ಸಣ್ಣ ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ
ಉದ್ದೇಶದಿಂದ ಸಮಿತಿಯೊಂದನ್ನು ರಚಿಸಿದರು. ಈಗ 140 ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಲು ತಯಾರಾಗಿ ನಿಂತಿವೆ. ಅಂದು ಐದರಲ್ಲಿ ಒಂದು ಭಾಷೆ ಆಗಿದ್ದಾಗ ತುಳು ಬಿದ್ದು ಹೋಯಿತು. ಈಗ 140 ಭಾಷೆಗಳಲ್ಲಿ ತುಳು ಒಂದಾಗಿ ಉಳಿದಿದೆ. ಆದ್ದರಿಂದ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರುವ ಸಾಧ್ಯತೆಯನ್ನು ಸದ್ಯಕ್ಕೆ ಮರೆತುಬಿಡಿ. ನಮ್ಮ ರಾಜಕಾರಣಿಗಳು,ಅಕಾಡೆಮಿಯವರು ಜನರ ವೋಟಿಗಾಗಿ ತುಳುವನ್ನು 8ನೇ ಪರಿಚ್ಛೇದಕ್ಕೆ ಕೂಡಲೇ ಸೇರಿಸುತ್ತೇವೆ ಎನ್ನುತ್ತಾರೆ. ಅದು ಅವರ ಕರ್ತವ್ಯ ಕೂಡ. 140 ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ನಾನು ಪ್ರಧಾನಿ ಮಂತ್ರಿ ಆದರೂ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉತ್ತರ ಭಾರತದಲ್ಲಿ ಬ್ರಿಡ್ಜ್, ಮೈಥಿಲಿ, ರಾಜಸ್ಥಾನಿ ಸೇರಿದಂತೆ ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರದ ಅನೇಕ ಸಣ್ಣ ಭಾಷೆಗಳಿವೆ. ಈ ಭಾಷೆಗಳಿಗೆ ಹೋಲಿಸಿದರೆ ಮೊದಲಿನಿಂದಲೂ ಅತ್ಯಂತ ಹೆಚ್ಚು ಕೆಲಸಗಳು ತುಳುವಿನಲ್ಲಿ ಆಗುತ್ತಿದೆ. ಪಣಿಯಾಡಿ,ಪೊಳಿಲಿ, ಗೋವಿಂದ ಪೈ, ಸೇಡಿಯಾಪು ಕೃಷ್ಣಭಟ್ ಮೊದಲಾದ ಮಹಾನೀಯರು ತುಳು ಭಾಷೆಗೆ ಹಾಕಿಕೊಟ್ಟ ಬುನಾದಿ. ಅಲ್ಲದೆ ವಿದೇಶಿ ಸಂಶೋಧಕರು ತುಳು ಭಾಷೆಯಲ್ಲಿ ಅಧ್ಯಯನ ಮಾಡಿ
ತುಳುವಿಗೆ ಅಂತರರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿದ್ದಾರೆ. ತುಳುವಿಗೆ ದೊರೆದ ಈ ಭಾಗ್ಯ ದೇಶದ ಬೇರ್ಯಾವುದೇ ಭಾಷೆಗೆ ಸಿಕ್ಕಿಲ್ಲ. ಇದಕ್ಕೆ ನಾವೆಲ್ಲರೂ ಹೆಮ್ಮೆಪಡಬೇಕು. ನಮ್ಮ ಭಾಷೆಯ ಬಗ್ಗೆ ನಾವು ಹೆಮ್ಮೆ ಪಡದೇ ಹೋದರೆ ನಮ್ಮ ಭಾಷೆಗಳು ಸಾಯುತ್ತವೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನೂತನ ಶಿಕ್ಷಣ ನೀತಿಯನ್ನು ಬೇರೆ ಭಾಷೆಯಲ್ಲಿ ಜಾರಿಗೊಳಿಸಿಲ್ಲ. ಕೇವಲ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಜಾರಿಗೊಳಿಸಿದೆ. ಮುಂದಿನ 50ರಿಂದ 70 ವರ್ಷಗಳ ವರೆಗೆ ನನ್ನ ದೇಶದ ಶಿಕ್ಷಣ ಪದ್ಧತಿಯನ್ನು ನಿಯಂತ್ರಿಸಲಿರುವ ಶಿಕ್ಷಣ ಪದ್ಧತಿ ಏನೆಂಬುವುದನ್ನು ಮಾತೃಭಾಷೆಯಲ್ಲಿ ಓದಿ ತಿಳಿದುಕೊಳ್ಳುವ ಅವಕಾಶವೇ ಇಲ್ಲ. ಹಾಗಾದರೆ ಮಾತೃಭಾಷೆಗಿರುವ ಗೌರವ ಏನು ಎಂದು
ಪ್ರಶ್ನಿಸಿದ ಅವರು, ಮೊದಲು ಶಿಕ್ಷಣ ನೀತಿಯನ್ನು ಆಯಾಯ ಭಾಷೆಗಳಲ್ಲಿ ಜಾರಿಗೆ ತರಬೇಕು. ಬಳಿಕ ಮೂರು ತಿಂಗಳ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಈಗಿನ ಯುವಜನಾಂಗ ಪಡೆದುಕೊಳ್ಳುತ್ತಿರುವ ಜ್ಞಾನದಲ್ಲಿ ಭಾಷೆ ಹಾಗೂ ತತ್ವಶಾಸ್ತ್ರ ಸಾಯುತ್ತಿದೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ತರ್ಕಶಾಸ್ತ್ರ ನಶಿಸುತ್ತಿದೆ. ಈ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿಲ್ಲ. ಯಾವ ದೇಶ ತತ್ವಶಾಸ್ತ್ರ ಹಾಗೂ ತರ್ಕಶಾಸ್ತ್ರವನ್ನು ಸಾಯಿಸುತ್ತದೆಯೋ ಅದನ್ನು ಅತ್ಯುತ್ತಮ ಮನುಷ್ಯನನ್ನು ಸೃಷ್ಟಿಸಲಾರದು ಎಂದು ಅಭಿಪ್ರಾಯಪಟ್ಟರು. ಪ್ರಶಸ್ತಿ ಸಮಿತಿಯ ಸದಸ್ಯೆ, ಜಾನಪದ ವಿದ್ವಾಂಸೆ ಡಾ. ಇಂದಿರಾ ಹೆಗ್ಡೆ ಮಾತನಾಡಿ, ಸರ್ಕಾರ ಬದಲಾದಂತೆ ಅಕಾಡೆಮಿಗಳ ಪದಾಧಿಕಾರಿಗಳ ಅಧಿಕಾರಿ ಮೊಟಕು ಗೊಳಿಸುವುದು ಸರಿಯಲ್ಲ. ಇದಕ್ಕೆ ನೇರವಾಗಿ ಬರಹಗಾರರು ಬಲಿಯಾಗುತ್ತಿದ್ದಾರೆ. ಹಾಗಾಗಿ ಅಕಾಡೆಮಿಯ ಪದಾಧಿಕಾರಿಗಳನ್ನು ಒಂದು ಸೀಮಿತ ಅವಧಿಗೆ ನೇಮಕ ಮಾಡಬೇಕು. ಅಂತಹ ನಿಯಮವನ್ನು ಜಾರಿಗೊಳಿಸುವ ಅಗತ್ಯವಿದೆ. ಅದಕ್ಕೆ ಬರಹಗಾರರು ಒತ್ತಡ ಹಾಕಬೇಕು ಎಂದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶ್ನ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್
ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಪ್ರೊ. ಯದುಪತಿ ಗೌಡ, ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿದರು. ಪೃಥ್ವಿರಾಜ್ ಕವತ್ತಾರ್ ವಂದಿಸಿದರು. ವಿದ್ಯಾಲತಾ ಕಾರ್ಯಕ್ರಮ ನಿರೂಪಿಸಿದರು.
|
|
|