ಗೋ ಕಳ್ಳತನವಾದರೆ ಬೆತ್ತಲೆ ಪ್ರಕರಣ ಮರುಕಳಿಸಬಹುದು -ಯಶಪಾಲ್ ಸುವರ್ಣ

ಪ್ರತೀ ವರ್ಷದಂತೆ ಈ ವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿಯ ಗ್ರಾಮೀಣ ಪ್ರದೇಶಗಳಲ್ಲಿ ಗೋಗಳ್ಳತನದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಇದಕ್ಕೆ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದೆ. ಸರಕಾರದ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದರೆ ಜಿಲ್ಲೆಯಲ್ಲಿ 2005ರ ತೀವ್ರತರವಾದ ಹೋರಾಟಗಳು ಮತ್ತೆ ಮರುಕಳಿಸಬಹುದು ಎಂದು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಐಷಾರಾಮಿ ಹೊಟೇಲಿನಲ್ಲಿ ಮಲಗಿ ಬೆಳಗ್ಗೆ ಗ್ರಾಮಗಳಿಗೆ ಹೋಗಿ ಮನವಿ ಸ್ವೀಕರಿಸಿ ಪ್ರಚಾರಗಿಟ್ಟಿಸಿಕೊಳ್ಳುವ ಬದಲು ನಿಜವಾದ ಜನಪರ ಕಾಳಜಿ ಇದ್ದರೆ ಕರಾವಳಿಗೆ ಬಂದು ಇಲ್ಲಿನ ಹೈನುಗಾರರ ಸಮಸ್ಯೆಗಳನ್ನು ಆಲಿಸಲಿ. ಇಲ್ಲಿ ಹಸು ಸಾಕಿಕೊಂಡಿರುವವರು ರಾತ್ರಿ ಹೊತ್ತು ಭಯದಲ್ಲೇ ಬದುಕುವಂತಾಗಿದೆ. ಮಾರಕಾಸ್ತ್ರಗಳೊಂದಿಗೆ ಗೋವುಗಳನ್ನು ದರೋಡೆ ಮಾಡುತ್ತಿರುವ ದುಷ್ಕರ್ಮಿಗಳಿಗೆ ರಾಜಕೀಯ ಪಕ್ಷಗಳ ಬಹಿರಂಗ ಬೆಂಬಲವಿದ್ದು, ಅವರ ಪರವಾಗಿ ರಾಜಾರೋಷವಾಗಿ ಲಾಬಿ ನಡೆಸುವಷ್ಟು ನೀಚತನಕ್ಕೆ ಇಲ್ಲಿನ ರಾಜಕಾರಣಿಗಳು ಇಳಿದಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಮಾತಿಗಿಂತ ತೆರೆಯ ಮರೆಯಲ್ಲಿ ಕೆಲಸ ಮಾಡುವ ಕಾಂಗ್ರೆಸ್ ಪುಡಾರಿಗಳ ಮಾತೇ ಹೆಚ್ಚು ನಡೆಯುತ್ತಿದೆ.

ಗೋರಕ್ಷಣೆಗಾಗಿ ಒಂದಷ್ಟು ಯುವಕರು ಮುಂದಾದರೆ ಅವರ ಮೇಲೆ ಗೂಂಡಾ ಕಾಯ್ದೆ ಹಾಕಿ ಸುಮ್ಮನಾಗಿಸುವ ಕೆಲಸ ನಡೆಯುತ್ತಿದೆ. ದನಗಳ್ಳರು ಒಂದು ವರ್ಗಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕಾಗಿ ಇಡೀ ವ್ಯವಸ್ಥೆ ಇಂದು ದನಗಳ್ಳರ ಪರವಾಗಿ ನಿಂತಂತೆ ಕಾಣುತ್ತಿದೆ. ಹಿಂದೂ ಸಮಾಜವನ್ನು ಈಗ ಕಾಡುತ್ತಿರುವ ಹತಾಶೆ ಮುಂದಿನ ದಿನದಲ್ಲಿ ಉಗ್ರ ಹೋರಾಟದ ರೂಪ ಪಡೆದುಕೊಂಡರೆ ಅದು ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು. ಪೊಲೀಸ್ ಇಲಾಖೆಗೆ ಶಾಂತಿ ಸುವ್ಯವಸ್ಥೆಯ ಕಾಳಜಿ ಇದ್ದರೆ ಕೂಡಲೆ ಅಕ್ರಮ ಕಸಾಯಿ ಖಾನೆಗಳನ್ನು ಪತ್ತೆ ಹಚ್ಚಿ ಮುಚ್ಚಬೇಕು.

ಗೋಸಾಗಾಟದಲ್ಲಿ ಸಕ್ರಿಯರಾಗಿರುವ ದರೋಡೆಕೋರರನ್ನು ಬಂಧಿಸಿ ಗಡಿಪಾರು ಮಾಡಬೇಕು. ಗೋರಕ್ಷಣೆಯ ಸಂದರ್ಭದಲ್ಲಿ ಸುಳ್ಳು ಕೇಸುಗಳಿಗೆ ಗುರಿಯಾದ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈ ಬಿಟ್ಟು ಆ ಯುವಕರ ಸಮಾಜಪರ ಚಟುವಟಿಕೆಗಳಿಗೆ ಸಹಕಾರ ನೀಡಬೇಕು. ಪ್ರತೀಗ್ರಾಮ ಸರಹದ್ದುಗಳಲ್ಲೂ ಪೊಲೀಸ್ ನಾಕಬಂದಿಯನ್ನು ಬಿಗಿಗೊಳಿಸಬೇಕು. ಇಲಾಖೆಯೊಳಗೆ ಇದ್ದುಕೊಂಡು ಕಳ್ಳರು ನೀಡುವ ಲಂಚಕ್ಕೆ ಕೈಯೊಡ್ಡುವ ಬ್ರಷ್ಟ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಬೇಕು.

ರಾಜ್ಯ ಸರಕಾರ ಪೊಲೀಸ್ ಇಲಾಖೆಯ ಕಾರ್ಯದಲ್ಲಿ ಹಸ್ತಕ್ಷೇಪ ಮಾಡದೆ ಅವರಿಗೆ ಸ್ವತಂತ್ರವಾಗಿ ಕಾರ್ಯಾಚರಿಸಲು ಬಿಡಬೇಕು. ಸನ್ಮಾನ್ಯ ಯಡಿಯೂರಪ್ಪ ಅವರ ಸರಕಾರವಿದ್ದ ಸಮಯದಲ್ಲಿ ಮಂಡಿಸಿದ್ದ ಗೋಹತ್ಯಾ ನಿಷೇದ ವಿಧೇಯಕವನ್ನು  ಜಾರಿಗೊಳಿಸಬೇಕು. ಗೋಹತ್ಯೆಯನ್ನು ತಡೆಯಲು ಹೋದ ಹಲವಾರು ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಕಾರ್ಯಕರ್ತರು ಮೈ ಮೇಲೆ ಕೇಸುಗಳನ್ನು ಹಾಕಿಕೊಂಡು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ.

ಇಷ್ಟೆಲ್ಲಾ ಹೋರಾಟದ ಬಳಿಕವೂ ಗೋಹತ್ಯೆಯ ಪ್ರಮಾಣ ಕಡಿಮೆಯಾಗಿಲ್ಲ.ಸೂಕ್ತ ಕಾನೂನು ಇಲ್ಲದ ಕಾರಣ ದುಷ್ಕರ್ಮಿಗಳು   ಗೋ ಕಳ್ಳತನದ ಬಗ್ಗೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಗಳು ಗಂಭೀರ ಕ್ರಮ ಕೈಗೊಳ್ಳದೇ ಹೋದರೆ 2003ರಿಂದ 2005ರವರೆಗೆ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಪ್ರಕ್ಷುಬ್ಧ ವಾತಾವರಣ ಮತ್ತೆ ತಲೆ ಎತ್ತಬಹುದು ಇದಕ್ಕೆ ಇಲಾಖೆ ಅವಕಾಶ ಮಾಡಿಕೊಡಬಾರದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!