ಹುಬ್ಬಳ್ಳಿ: ರೈಲು ನಿಲ್ದಾಣದಲ್ಲಿ ಸ್ಫೋಟ, ಓರ್ವ ಗಂಭೀರ
ಹುಬ್ಬಳ್ಳಿ: ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ವಿಜಯವಾಡ ರೈಲಿನಲ್ಲಿ ಅನುಮಾನಾಸ್ಪದವಾಗಿ ರಟ್ಟಿನ ಬಾಕ್ಸ್ ಬಿಟ್ಟು ಹೋಗಲಾಗಿತ್ತು. ಬಾಕ್ಸನ್ನು ಅಧಿಕಾರಿಗಳಿಗೆ ತೋರಿಸಲು ಹುಸೇನ್ ಸಾಬ್ ಮಕಾನವಾಲೆ ಫ್ಲಾಟ್ ಫಾರಂ ನಂಬರ್ 1ಕ್ಕೆ ತೆಗೆದುಕೊಂಡು ಬಂದಿದ್ದಾರೆ. ಈ ವೇಳೆ ಬಾಕ್ಸ್ ನಲ್ಲಿದ್ದ ಟಿಫನ್ ಡಬ್ಬ ತೆರೆಯುತ್ತಿದ್ದಂತೆ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.
ಸ್ಫೋಟದಿಂದ ಫ್ಲಾಟ್ಫಾರಂನಲ್ಲಿರುವ ಗಾಜು ಪುಡಿ ಪುಡಿಯಾಗಿದ್ದು, ಹುಸೇನ್ ಸಾಬ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಹುಸೇನ್ ಸಾಬ್ ಮಂಟೂರು ರಸ್ತೆಯ ನಿವಾಸಿ. ಬಾಕ್ಸ್ ಮೇಲೆ ಕೋಲ್ಹಾಪುರದ ಶಾಸಕರ ಹೆಸರಿತ್ತು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಹಾನಗರ ಪೊಲೀಸ್, ಡಿಸಿಪಿ, ರೈಲ್ವೇ ಪೊಲೀಸರು ಶ್ವಾನದಳದ ಜೊತೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಸ್ಫೋಟಕಕ್ಕೆ ಬಳಸಿದ ವಸ್ತುವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡಿರುವ ಯುವಕ ಹುಸೇನ್ ರಟ್ಟಿನ ಡಬ್ಬದಲ್ಲಿಯ ಬಾಕ್ಸ್ ತೆಗೆಯುತ್ತಿದ್ದಂತೆ ಸ್ಫೋಟಗೊಂಡಿದ್ದು, ನಿಲ್ದಾಣದಲ್ಲಿದ್ದ ನೂರಾರು ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ.