ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ..??

ಚಳಿಗಾಲದಲ್ಲಿ ಚರ್ಮ ಒಡೆಯುವುದೇಕೆ? ಇದಕ್ಕೆ ಪ್ರಮುಖ ಕಾರಣ ಗಾಳಿ ಒಣಗಿರುವುದು. ಅಷ್ಟು ಚಳಿಯಲ್ಲಿ ಗಾಳಿ ಒಣಗುವುದಾದರೂ ಹೇಗೆ? ಹೆಚ್ಚಿನವರಿಗೆ ಅರ್ಥವಾಗದ ಪ್ರಶ್ನೆ ಇದು. ನಮ್ಮ ತ್ವಚೆ ಆರೋಗ್ಯಕರವಾಗಿರಬೇಕೆಂದರೆ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಗಾಳಿಯಲ್ಲಿರುವ ಆರ್ದ್ರತೆ ಅಥವಾ ನೀರಿನ ಪಸೆ ಒಳಬರಬೇಕು. ಚಳಿಗಾಲದಲ್ಲಿ ಸೂರ್ಯನ ಕಿರಣಗಳು ನೆಲದಲ್ಲಿದ್ದ ನೀರನ್ನು ಬೇಸಿಗೆಯಷ್ಟು ವೇಗವಾಗಿ ಆವಿ ಮಾಡಲಾರದು. ಇದೇ ಗಾಳಿಯಲ್ಲಿ ಆರ್ದ್ರತೆಯ ಕೊರತೆಯಾಗಲು ಕಾರಣ. ಚಳಿ ಹೆಚ್ಚಿದ್ದಷ್ಟೂ ನೀವು ಆವಿಯಾಗುವ ಗತಿಯೂ ನಿಧಾನವಾಗುತ್ತಾ ಹೋಗುತ್ತದೆ. ಚಳಿಗಾಲದಲ್ಲಿ ಬಟ್ಟೆ ಬೇಗನೇ ಒಣಗದಿರಲೂ ಇದೇ ಕಾರಣ.

ಚಳಿಗಾಲದಲ್ಲಿ ತ್ವಚೆಯ ರಕ್ಷಣೆ…. ಹಾಗಾಗಿ ಚಳಿಗಾಲದಲ್ಲಿ ತ್ವಚೆಗೆ ಆರ್ದ್ರತೆಯ ಆಭಾವವುಂಟಾಗಿ ಹೊರಪದರ ತೀವ್ರವಾಗಿ ಒಣಗಿ ಬಿರುಕು ಬಿಡತೊಡಗುತ್ತದೆ. ಮುಖ, ಕುತ್ತಿಗೆ, ಮೊಣಗಂಟಿನ ಮೇಲೆ ಮೊದಲಾದ ಕಡೆಗಳಲ್ಲಿ ಚರ್ಮ ಕೆಂಪಗಾಗತೊಡಗುತ್ತದೆ. ವಿಶೇಷವಾಗಿ ಸೂಕ್ಷ್ಮಸಂವೇದಿ ತ್ವಚೆ ಹೊಂದಿರುವವರಿಗೆ ಈ ತೊಂದರೆ ಹೆಚ್ಚು ಕಾಡುತ್ತದೆ. ಚರ್ಮ ಕೆಂಪಗಾಗಿದೆ ಎಂದರೆ ಇಲ್ಲಿ ಉರಿಯೂತವುಂಟಾಗಿದೆ ಎಂದೇ ಅರ್ಥ .

ಈ ಸ್ಥಿತಿಗೆ ಕೇವಲ ಚಳಿಯೊಂದೇ ಕಾರಣವಲ್ಲ, ಬದಲಿಗೆ ಬ್ಯಾಕ್ಟೀರಿಯಾ ನಿವಾರಕ ಸೋಪು, ಪ್ರಬಲ ಡಿಟರ್ಜೆಂಟ್ ಅಥವಾ ರಾಸಾಯನಿಕ ಆಧಾರಿತ ಮಾರ್ಜಕಗಳೂ ಆಗಿವೆ,. ಚಳಿಗಾಲದ ತೊಂದರೆ ನಿವಾರಿಸಲೆಂದೇ ಮಾರುಕಟ್ಟೆಯಲ್ಲಿ ಹಲವಾರು ಪ್ರಸಾದನಗಳಿವೆ. ಚಳಿಗಾಲಕ್ಕೆ ಎಂದು ಸೂಚ್ಯವಾಗಿ ಸೂಚಿಸಲು ಇವುಗಳ ಹಿಂದೆ ‘ಕೋಲ್ಡ್’ ಎಂಬ ಪದ ಸೇರಿಸಿದರೆ ಆಯ್ತು, (ಉದಾ. ಕೋಲ್ಡ್ ಕ್ರೀಂ) ಇವು ಚಳಿಗಾಲದ ಬಳಕೆಗೆ ಎಂದು ತಿಳಿದು ಕೊಳ್ಳಬಹುದು. ಆದರೆ ಚರ್ಮದ ಆರೈಕೆಗೆ ಕೇವಲ ಪ್ರಸಾದನಗಳ ಬಳಕೆ ಮಾತ್ರವೇ ಸಾಕಾಗುವುದಿಲ್ಲ, ಬದಲಿಗೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದೂ ಅವಶ್ಯವಾಗಿದೆ.ಹೌದು ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ದೊಡ್ಡ ಸವಾಲಾಗಿ ಪರಿಣಮಿಸುವುದು ಸುಳ್ಳಲ್ಲ ಹಾಗಾಗಿ ಇಂದಿನ ಲೇಖನದಲ್ಲಿ ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದೆ.

ಸನ್ ಸ್ಕ್ರೀನ್… ಬಿಸಿಲಿಗೆ ಹೋಗುವ ಸಂದರ್ಭದಲ್ಲಿ ಸನ್ ಸ್ಕ್ರೀನ್ ಉಪಯೋಗಿಸಿ. ಬಿಸಿಲಿಗೆ ತ್ವಚೆ ಒಡ್ಡುವ ಯಾವುದೇ ಸಮಯದಲ್ಲಿ, ಚಳಿಗಾಲವೇ ಆಗಿರಲಿ, ಬೇಸಿಗೆಯೇ ಇರಲಿ, ಸೂರ್ಯನ ಅತಿನೇರಳೆ ಕಿರಣಗಳ ವಿರುದ್ದ ರಕ್ಷಣೆ ಒದಗಿಸುವ ಸನ್ ಸ್ಕ್ರೀನ್ ಪ್ರಸಾಧನವನ್ನು ತಪ್ಪದೇ ಬಳಸಬೇಕು. ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮಸಂವೇದಿಯಾಗಿದ್ದರಂತೂ ಈ ಕ್ರೀಂ ಅನಿವಾರ್ಯ. ಈ ಪ್ರಸಾಧನದ ಲೇಪನವಿಲ್ಲದೇ ಬಿಲಿಸಿಗೆ ಒಡ್ಡಿದ ತ್ವಚೆ ಶೀಘ್ರವೇ ಕಪ್ಪಗಾಗುತ್ತದೆ ಹಾಗೂ ಇನ್ನಷ್ಟು ಘಾಸಿಗೊಳ್ಳುತ್ತದೆ. ಹಾಗಾಗಿ ಮನೆಯಿಂದ ಹೊರಗೆ ಬಿಸಿಲಿಗೆ ಹೋಗುವ ಯಾವುದೇ ಸಂದರ್ಭ ಎದುರಾದರೂ ಸನ್ ಸ್ಕ್ರೀನ್ ಹಚ್ಚಿಕೊಂಡೇ ಹೋಗಬೇಕು. ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನಿಮ್ಮ ಆಹಾರಕ್ರಮದ ಬಗ್ಗೆ ಗಮನವಿರಲಿ…. ತ್ವಚೆಯ ಆರೈಕೆಯನ್ನು ಹೊರಗಿನಿಂದ ವಹಿಸುವಷ್ಟೇ ಕಾಳಜಿಯನ್ನು ಒಳಭಾಗದಿಂದಲೂ ವಹಿಸುವುದು ಅಗತ್ಯವಾಗಿದೆ. ಆರೋಗ್ಯಕರ ತ್ವಚೆ ಎಂದರೆ ಕೇವಲ ಹೊರನೋಟಕ್ಕೆ ಕಾಣುವ ಹೊರಪದರವೊಂದೇ ಅಲ್ಲ, ಬದಲಿಗೆ ಚರ್ಮದ ಆಳದಲ್ಲಿರುವ ತೈಲಗ್ರಂಥಿಗಳು, ಕೂದಲ ಬುಡ ಮೊದಲಾದವೂ ಅಷ್ಟೇ ಆರೈಕೆಯನ್ನು ಬಯಸುತ್ತವೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಅಲ್ಲದೇ ಗಾಳಿಯಲ್ಲಿ ಇತರ ಸಮಯಕ್ಕಿಂತಲೂ ಹೆಚ್ಚು ವಿಧದ ವೈರಸ್ಸುಗಳು ತೇಲಾಡಿಕೊಂಡು ಬರುವ ಕಾರಣ ಹಲವು ವಿಧದ ಸೋಂಕುಗಳು ಎದುರಾಗುತ್ತವೆ. ಈ ಸೋಂಕುಗಳನ್ನು ಎದುರಿಸಲು ನಮ್ಮ ಆಹಾರದಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್ ಇರಬೇಕು. ಈ ಅಂಶ ಹೆಚ್ಚಿರುವ ಕ್ಯಾರೆಟ್, ಬೆರ್ರಿ ಹಣ್ಣುಗಳು, ಬೀಟ್ರೂಟ್,ಸೊಪ್ಪುಗಳನ್ನು,ಮೂಲಂಗಿ ಮೊದಲಾದವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು ಹಾಗೂ ಈ ಮೂಲಕ ತ್ವಚೆಯನ್ನು ಘಾಸಿಗೊಳಗಾಗುವುದರಿಂದ ರಕ್ಷಣೆ ನೀಡುವ ಜೊತೆಗೇ ಆರೋಗ್ಯಕರ ಹಾಗೂ ಕಾಂತಿಯುಕ್ತವಾಗಿರಿಸಲೂ ಸಾಧ್ಯವಾಗುತ್ತದೆ.

ಸೌಮ್ಯತೆಯಿಂದ ನೇವರಿಸಿ…
ನಿಮ್ಮ ತ್ವಚೆಯನ್ನು ಸೌಮ್ಯತೆಯಿಂದ ನೇವರಿಸಿಕೊಳ್ಳುವುದು ಎಲ್ಲಾ ಸಮಯದಲ್ಲಿ ಅಗತ್ಯವಾದರೂ ಚಳಿಗಾಲದಲ್ಲಿ ಹೆಚ್ಚು ಅವಶ್ಯವಾಗಿದೆ. ಏಕೆಂದರೆ ಈ ಸಮಯದಲ್ಲಿ ತ್ವಚೆ ಅತಿ ಸೂಕ್ಷ್ಮಸಂವೇದಿಯಾಗಿರುತ್ತದೆ ಹಾಗೂ ತ್ವಚೆಗೆ ಕೊಂಚವೂ ಒರಟಾಗಿ ಸ್ಪರ್ಶಿಸಿದರೆ ಇಲ್ಲಿ ಉರಿ ಉಂಟಾಗಬಹುದು ಹಾಗೂ ಹೊರಪದರ ಸುಲಭವಾಗಿ ಹರಿಯಬಹುದು. ಹಾಗಾಗಿ ಪ್ರತಿದಿನವೂ ನಿಮ್ಮ ತ್ವಚೆಯನ್ನು ಸ್ವಚ್ಖಗೊಳಿಸುವ (cleanse)ಕ್ರಿಯೆಯನ್ನು ಅತಿ ಜಾಗರೂಕತೆಯಿಂದ ನಿರ್ವಹಿಸಬೇಕು. ಉಳಿದ ಸಮಯದಂತೆ ಚಳಿಗಾಲದಲ್ಲಿ ತ್ವಚೆಯನ್ನು ಹೆಚ್ಚಿನ ಘರ್ಷಣೆಯಿಂದ ಉಜ್ಜಬಾರದು, ಏಕೆಂದರೆ ಕೊಂಚ ಹೆಚ್ಚಿನ ಒತ್ತಡವೂ ಹೊರಪದರವನ್ನು ಸಡಿಲಿಸಿ ತ್ವಚೆಯನ್ನು ಘಾಸಿಗೊಳಿಸಬಹುದು. ಹಾಗಾಗಿ ಉಜ್ಜುವ ಬದಲು ಮೃದುವಾದ ದಪ್ಪನೆಯ ಟವೆಲ್ಲಿನಿಂದ ಒತ್ತಿಕೊಂಡು ಒರೆಸಿಕೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!