ಸರಕಾರದ ಸೌಲಭ್ಯಗಳು ಜನರಿಗೆ ಸುಲಭವಾಗಿ ದೊರೆಯುವಂತಾಗಬೇಕು : ಐವನ್ ಡಿಸೋಜಾ

ಉಡುಪಿ: ನಮ್ಮದು ನಿಜವಾದ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಹೊಂದಿರುವ ದೇಶ ಆಗಬೇಕಾದರೆ, ಸರ್ಕಾರದ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು.ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜಹೇಳಿದರು.

ಇಂಡಿಯನ್‌ ಕ್ರಿಶ್ಚಿಯನ್‌ ಯೂನಿಯನ್‌ ಒಕ್ಕೂಟದ ವತಿಯಿಂದ ನಗರದ ಮಿಷನ್‌ ಕಂಪೌಂಡ್‌ನ ಸಿಎಸ್‌ಐ ಬಾಲಕರ ವಸತಿ ಶಾಲೆ (ಸ್ನೇಹಾಲಯ)ಯಲ್ಲಿ, ಶನಿವಾರ ನಡೆದ ಸಾರ್ವಜನಿಕ ಜನ ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾನೂನು ಸರಳ ಮಾಡಿದರೆ ಜನರಿಗೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ತಲುಪುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಸರ್ಕಾರ ಜನರ ಮನೆ ಬಾಗಿಲಿಗೆ ಹೋಗಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಪಿಂಚಣಿ ಅದಾಲತ್, ಕಂದಾಯ ಅದರ ಮೊದಲಾದವುಗಳನ್ನು ನಡೆಸುತ್ತಿದೆ. ಆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದರು.

ಸರಕಾರಿ ಅಧಿಕಾರಿಗಳು ರಜಾ ದಿನಗಳಲ್ಲಿಯೂ ಜನರೊಂದಿಗೆ ಇದ್ದು ಕೆಲಸ ಮಾಡಿದರೆ ಸರಕಾರದ ಯೋಜನೆಗಳು ಜನರಿಗೆ ತಲುಪಿದಂತಾಗುತ್ತದೆ ಮತ್ತು ಸರಕಾರಕ್ಕೂ ಒಳ್ಳೆಯ ಹೆಸರು ಬರಲು ಸಾಧ್ಯವಾಗುತ್ತೆ. ಸರಕಾರಿ ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು. ಜನಸಂಪರ್ಕ ಸಭೆಯಲ್ಲಿ ಕೇವಲ ಭರವಸೆ ಕೊಡದೆ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಐವಾನ್ ಡಿಸೋಜಾ ಕರೆ ನೀಡಿದರು.

ಕುಂದಾಪುರ ಉಪವಿಭಾಗಾಧಿಕಾರಿ ಎಸ್‌.ಎಸ್‌. ಮಧುಕೇಶ್ವರ್‌ ಮಾತನಾಡಿ, ಬ್ರಿಟಿಷರ ಕಾಲದಲ್ಲಿದ್ದ ಜನವಿರೋಧಿ ಆಡಳಿತ ಇಂದು ಜನ ಸ್ನೇಹಿ ಆಗಿದೆ. ಅಂದು ಅಧಿಕಾರಿಗಳಿಗೆ ಹೆದರುವ ಪರಿಸ್ಥಿತಿ ಇತ್ತು. ಆದರೆ ಈಗ ಅಂತಹ ಪರಿಸ್ಥಿತಿಯಿಲ್ಲ. ಅಧಿಕಾರಿಗಳು ಜನರಿಗೆ ಸೇವೆ ಒದಗಿಸುವ ಮನೋಭಾವ ಹೊಂದಿದ್ದಾರೆ. ಎಲ್ಲರಿಗೂ ಸಮಾನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗಿದೆ. ಈ ಕಾನೂನು ಚೌಕಟ್ಟಿನಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.ಮುಖ್ಯಮಂತ್ರಿ ಪರಿಹಾರ ನಿಧಿ, ವಿಧವಾ ವೇತನ ಸಹಿತ ಇನ್ನಿತರ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಐವನ್ ಡಿಸೋಜ ರವರು ಹಸ್ತಾಂತರಿಸಿದರು.

ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್‌.ಆರ್‌. ಲಮಾಣಿ, ಅಲ್ಪಸಂಖ್ಯಾರಅಭಿವೃದ್ಧಿ ನಿಗಮದ ಅಧಿಕಾರಿ ಕಿಶೋರ್‌ ಪುತ್ರನ್‌, ಆರೋಗ್ಯ ಇಲಾಖೆಯ ಡಾ. ಸುರೇಂದ್ರ
ಬಾಳ್ಕರ್‌, ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌, ಉಡುಪಿ ಎಡಿಎಲ್‌ಆರ್‌ನಎ.ಎಸ್‌. ಮಂಜುನಾಥ್‌, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್‌, ಉಡುಪಿತಾಲ್ಲೂಕು ಪಂಚಾಯಿತಿ ಇಒ ಕೆ. ರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ರಾಜ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಲಕ್ಷ್ಮೀಕಾಂತ್‌ ಮೊದಲಾದವರು ಜನಸ್ಪಂದನಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಒಕ್ಕೂಟದ ಅಧ್ಯಕ್ಷ ಸುನೀಲ್‌ ಕಬ್ರಾಲ್‌ ಶಿರ್ವ, ರೊನಾಲ್ಡ್‌ ಮನೋಹರ್‌ ಕರ್ಕಡ, ತಾಪಂಸದಸ್ಯೆ ಡಾ. ಸುನೀತಾ ಶೆಟ್ಟಿ, ವೆರೋನಿಕಾ ಕರ್ನೇಲಿಯೊ ಉಪಸ್ಥಿತರಿದ್ದರು.ಇಂಡಿಯನ್ ಕ್ರಿಶ್ಚನ್ ಯೂನಿಯನ್ ಸಂಘಟನೆಯ ಉಪಾಧ್ಯಕ್ಷ ಮೆಲ್ವಿನ್ ಡಿಸೋಜಾ ಸ್ವಾಗತಿಸಿದರೆ, ಕಾರ್ಯದರ್ಶಿ ಚಾರ್ಲ್ಸ್ ಆ೦ಮ್ಲಾರ್ ಧನ್ಯವಾದ ಸಮರ್ಪಿಸಿದರು. ಜಂಟಿಕಾರ್ಯದರ್ಶಿ ಸ್ಟೀವನ್‌ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.ಸಂಘಟನೆಯ ಪದಾಧಿಕಾರಿಗಳಾದ ಡಿಯೋನ್ ಡಿಸೋಜಾ, ಶೀಲಾ ಸೋನ್ಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 350 ಕ್ಕೂ ಅಧಿಕ ಸಾರ್ವಜನಿಕರು ಜನಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದರು.

Leave a Reply

Your email address will not be published. Required fields are marked *

error: Content is protected !!