ಗುಡ್ ಫ್ರೈಡೇ: ಶಿಲುಬೆ ಆಶೀರ್ವಾದ ಮತ್ತು ರಕ್ಷಣೆಯ ಪ್ರತೀಕ

ವಿಶ್ವದಾದ್ಯಂತ ಕೊರೋನಾ ಹಾವಳಿ ವಿಸ್ತರಿಸುತ್ತಿದ್ದು, ಇದರ ನಡುವೆ ಕ್ರೈಸ್ತ ಬಾಂಧವರಿಗೆ ಇಂದು ಮಹತ್ವದ ದಿನ. ಇಂದು ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ. ಇಂದಿನ ದಿನವನ್ನು ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶೇಷ ಲೇಖನವನ್ನು “ಉಡುಪಿ ಟೈಮ್ಸ್” ಪ್ರಕಟಿಸುತ್ತಿದೆ. 


ಉಡುಪಿ : ಇಂದು ಶುಭ ಶುಕ್ರವಾರ. ಕ್ರೈಸ್ತರಿಗೆ ಇಂದು ಮಹತ್ವದ ದಿನ. ಕಲ್ವಾರಿ ಬೆಟ್ಟದ ಮೇಲೆ ಯೇಸು ಕ್ರಿಸ್ತರು ಮನುಕುಲದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ದಿನ. ಈ ದಿನ ಯೇಸು ಕ್ರಿಸ್ತರು 2020 ವರ್ಷಗಳ ಹಿಂದೆ ಯಾತನೆ ಪಟ್ಟು ಶಿಲುಬೆಗೆರಿಸಲ್ಪಟ್ಟು ಮರಣ ಹೊಂದಿದ ಸ್ಮರಣೆಯನ್ನು ಕ್ರೈಸ್ತರು ಮಾಡುತ್ತಾರೆ. ಯೇಸು ಕ್ರಿಸ್ತರು ಕಷ್ಟ, ಹಿಂಸೆ ಹಾಗೂ ಶಿಲುಬೆಯ ಮರಣವನ್ನು ಅನುಭವಿಸಿ, ಪಾಪವನ್ನು, ಸಾವನ್ನು ಜಯಿಸಿದ ದಿನವಿದು. ಇಂದು ಎಲ್ಲ ಕ್ರೈಸ್ತರು ಉಪವಾಸವಿದ್ದು, ಶುದ್ಧ ಮನಸ್ಸಿನಿಂದ ದೇವರ ಪ್ರೀತಿಯನ್ನು ಧ್ಯಾನಿಸುತ್ತಾ, ಈ ಶುದ್ಧ ದಿನದ ಪಾವಿತ್ರ್ಯತೆಯನ್ನು ಕಾಪಾಡುತ್ತಾರೆ. ಇಂದು ದುಃಖಿಸುವ ದಿನವಲ್ಲ. ಬದಲಾಗಿ ದೇವರ ಪ್ರೀತಿಯನ್ನು ನೆನೆಯುವ ದಿನ. ಯೇಸು ಕ್ರಿಸ್ತರನ್ನು ಸಮಾಧಿ ಮಾಡಿದ ದಿನ. ಮಾತ್ರವಲ್ಲ ಮರಣವನ್ನು ಜಯಿಸಿ ಕ್ರೈಸ್ತರಿಗೆ ಸ್ವರ್ಗೀಯ ಜೀವನದ ಭರವಸೆ ನೀಡುವ ದಿನ.


 ಶಿಲುಬೆಯ ಮರಣವು ಚಾರಿತ್ರಿಕವಾಗಿ ಪರ್ಷಿಯಾದಲ್ಲಿ ಪ್ರಾರಂಭವಾಯಿತು. ಆದರೆ ರೋಮನ್ನರ ಆಳ್ವಿಕೆಯ ಸಮಯದಲ್ಲಿ ಶಿಲುಬೆಯ ಮರಣವು ಅತಿ ಕ್ರೂರವಾಗಿತ್ತು. ಅಲೆಕ್ಸಾಂಡರ್  ದೊರೆಯು ಸುಮಾರು ಮೂರು ಸಾವಿರ ಅಪರಾಧಿಗಳನ್ನು ಶಿಲುಬೆಯ ಮರಣ ನೀಡಿದ್ದು ಚರಿತ್ರೆಯಲ್ಲಿ ಉಲ್ಲೇಖವಾಗಿದೆ. ಸೆನೆಕ್ ಎಂಬ ತತ್ವಜ್ಞಾನಿ ತಿಳಿಸಿದ ಪ್ರಕಾರ, ಆ ಕಾಲದಲ್ಲಿ ಪ್ರಚಲಿತವಿರುವ ಮೂರು ರೀತಿಯ ಮರಣದ ವಿಧಾನಕ್ಕಿಂತ ಶಿಲುಬೆಯ ಮರಣವು ಅತಿ ಘೋರವಾಗಿತ್ತು. ಇಂತಹ ಮರಣವು ಕೇವಲ ಅಪರಾಧಿ ಕೈದಿಗಳಿಗೆ ಮಾತ್ರ ಸೀಮಿತವಾಗಿತ್ತು.ಇಂತಹ ಶಿಲುಬೆಯ ಹಾದಿಯನ್ನು ನಿರಪರಾಧಿ ಏಸು ಕ್ರಿಸ್ತರು ಮಾನವ ಕುಲವನ್ನು ಪಾಪದಿಂದ ವಿಮೋಚನೆಗೊಳಿಸಲು ಸ್ವೀಕರಿಸಿದರು.


ಏಸುವಿಗೆ ಶಿಲುಬೆಯ ಮರಣವನ್ನು ಯೋಜಿಸಿದ ವಿವಿಧ ಇಸ್ರೇಲಿನ ಪಂಗಡಗಳಾದ ಯಹೂದಿಗಳ, ನ್ಯಾಯ ಸ್ಥಾಪಕರ, ಧರ್ಮಶಾಸ್ತ್ರಗಳ ಪ್ರಕಾರ ಶಿಲುಬೆಯ ಮರಣವು ಅವಮಾನದ, ಸೋಲಿನ, ನಿರಾಸೆ ಹಾಗೂ ಶಿಕ್ಷೆಯ ಸಂಕೇತವೆಂದು ಮನಗಂಡಿದ್ದರು. ಆದರೆ ಯೇಸು ಕ್ರಿಸ್ತರಿಗೆ ಈ ಶಿಲುಬೆಯ ಮರಣದ ಮುಖಾಂತರ ಪ್ರೀತಿ, ಕರುಣೆ, ಕ್ಷಮೆ, ತ್ಯಾಗ, ನಂಬಿಕೆ, ವಿಶ್ವಾಸ ಮತ್ತು ಭರವಸೆಗಳ ಪ್ರತಿರೂಪವಾಗಿ ಮಾರ್ಪಟ್ಟಿತ್ತು. ಯೇಸು ಕ್ರಿಸ್ತರು ತನ್ನ ಪ್ರಾಣವನ್ನು ಧಾರೆ ಎರೆದಿದ್ದು, ಆವರ ಮೌಲ್ಯಗಳನ್ನು ನವ ಸಮಾಜದ ನಿರ್ಮಾಣ ಮಾಡಲಿಕ್ಕಾಗಿ. ಈ ಮುಖಾಂತರ ಶಿಲುಬೆಯ ಮರಣವು ಕ್ರೈಸ್ತ ಜೀವನವನ್ನು ಪರಿಪೂರ್ಣಗೊಳಿಸುತ್ತದೆ. ಏಕೆಂದರೆ ಅವಮಾನದ ಚಿಹ್ನೆಯಾದ ಶಿಲುಬೆಯು, ಯೇಸುಕ್ರಿಸ್ತರ ಮರಣದ ಪರಿಣಾಮ ಆಶೀರ್ವಾದದ ಚಿಹ್ನೆಯಾಗಿ ಮತ್ತು ರಕ್ಷಣೆಯ ಚಿಹ್ನೆಯಾಗಿ ರೂಪಾಂತರಿಸಿತು.


 ಶಿಲುಬೆಯು ಕ್ರೈಸ್ತ ಧರ್ಮದ ಭಕ್ತಿ ವಿಶ್ವಾಸದ ಸಂಕೇತ. ಭರವಸೆಯ ದೇವರ ಅನುಗ್ರಹದ ಪ್ರತೀಕ. ಶಿಲುಬೆಯ ಮೇಲೆ ಬೆಲೆ ತೆತ್ತು ಮನುಕುಲಕ್ಕೆ ರಕ್ಷಣೆ ಸಾರಿದ ದಿನವೇ ಈ ಶುಭ ಶುಕ್ರವಾರ. ಯೇಸು ಕ್ರಿಸ್ತರು ತನ್ನ ಮರಣದಿಂದ ಮನುಕುಲಕ್ಕೆ ಆಜ್ಞಾಪಿಸುವುದೆಂದರೆ  ‘ನಾನು ಶಿಲುಬೆಯಲ್ಲಿ ನನ್ನ ಎರಡು ಕರಗಳನ್ನು ಮರದ ತೊಲೆಗೆ ಚಾಚಿದಂತೆ, ನೀವೂ ಸಹ ನಿಮ್ಮ ಕರಗಳನ್ನು ನಿಮ್ಮ ನೆರೆಕರೆಯವರ ನೆರವಿಗಾಗಿ, ದುಃಖದಲ್ಲಿ ಸಂತೈಸಲು, ಬಡವರಿಗಾಗಿ ದಾನವಾಗಿ, ಶತ್ರುಗಳಿಗೆ ಪ್ರೀತಿಯ ಆಲಿಂಗನದ ಚಿಲುಮೆಯಾಗಿ ಚಾಚಬೇಕು. ಈ ಮೂಲಕ ಯೇಸು ಕ್ರಿಸ್ತರ ಸಂದೇಶದಿಂದ ನಾವೆಲ್ಲರೂ ಪ್ರೇರಿತರಾಗಿ ನೈಜ ಮಾನವೀಯತೆಯಿಂದ ಜೀವಿಸೋಣ.

ವಂ. ಫಾ. ಅನಿಲ್ ಡಿಕೋಸ್ಟಾ 

ಪ್ರಾಂಶುಪಾಲರು, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ.  [email protected]

Leave a Reply

Your email address will not be published. Required fields are marked *

error: Content is protected !!