ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ನ ಮಹಾಸಭೆ
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ 2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು 05-09-2019 ರಂದು ರಮಾ ಲಕ್ಷ್ಮೀನಾರಾಯಣ ಸಭಾಭವನ, ಎಮ್ಮೆಕೆರೆ, ಪಾಂಡೇಶ್ವರ, ಮಂಗಳೂರು ಇಲ್ಲಿ ಜರಗಿತು.
ಫೆಡರೇಶನ್ ಮಹಾಸಭೆಗೆ 55 ಬಿ ವರ್ಗದ ಸದಸ್ಯರು ಮತ್ತು 1091 ಸಿ ವರ್ಗದ ಸದಸ್ಯರು ಮತ್ತು ಸರಕಾರದ ಪ್ರತಿನಿಧಿಗಳು ಹಾಜರಿದ್ದರು. ಮಹಾಸಭೆಯಲ್ಲಿ ಆರಂಭದಲ್ಲಿ ಆಗಮಿಸಿರುವ ಎಲ್ಲಾ ಸದಸ್ಯರನ್ನು ಅಧ್ಯಕ್ಷರಾದ ಯಶ್ಪಾಲ್ ಸುವರ್ಣರವರು ಗೌರವಪೂರ್ವಕವಾಗಿ ಸ್ವಾಗತಿಸಿ, ಸದಸ್ಯರಿಗೆ ಸಂಸ್ಥೆಯ ಚಟುವಟಿಕೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ಫೆಡರೇಶನಿನ 2018-19 ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಹಾಸಭೆಯ ಮುಂದಿಟ್ಟರು.
ಮಹಾಸಭೆಯ ನೋಟೀಸಿನಲ್ಲಿ ನೀಡಿರುವ ವಿಷಯ ಸೂಚಿಯಂತೆ ಕಾರ್ಯಕ್ರಮವನ್ನು ಮುಂದುವರಿಸಿ, ಈಗಾಗಲೇ ಮಾಡಿರುವ ಫೆಡರೇಶನ್ ಚಟುವಟಿಕೆಗಳ ಬಗ್ಗೆ ಮತ್ತು ಮುಂದಕ್ಕೆ ಕೈಗೊಳ್ಳುವ ಯೋಜನೆಗಳ ಬಗ್ಗೆ ಸದಸ್ಯರಿಗೆ ವಿವರಣೆಯನ್ನು ನೀಡಿ ಎಲ್ಲಾ ವಿಷಯಗಳ ಬಗ್ಗೆ ಸದಸ್ಯರ ಸರ್ವಾನುಮತದ ಮಂಜೂರಾತಿಯನ್ನು ಪಡೆಯಲಾಯಿತು. ಅಧ್ಯಕ್ಷರು ಸಂಸ್ಥೆಯು ನೂತನವಾಗಿ ಪ್ರಾರಂಭಿಸಿರುವ ಬ್ಯಾಂಕಿಂಗ್ ವಿಭಾಗದಲ್ಲಿ ಖಾತೆಯನ್ನು ತೆರೆಯುವ ಮುಖಾಂತರ ಸಂಸ್ಥೆಯ ವ್ಯವಹಾರದಲ್ಲಿ ಕೈಜೋಡಿಸುವಂತೆ ಸರ್ವ ಸದಸ್ಯರನ್ನು ವಿನಂತಿಸಿಕೊಂಡರು.
ಸಭೆಯಲ್ಲಿ ಹಾಜರಿದ್ದ ಸದಸ್ಯರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಆಡಳಿತ ಮಂಡಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರತ್ಯೇಕ ಸಚಿವಾಲಯ ತೆರೆದಿರುವುದಕ್ಕೆ ಸರ್ವ ಸದಸ್ಯರು ಸಂತೋಷ ವ್ತಕ್ತಪಡಿಸಿದರು. ಫೆಡರೇಶನ್ನ ಮಲ್ಪೆ ಮತ್ತು ಮಂಗಳೂರು ಶಾಖೆಯ ಬ್ಯಾಂಕಿಂಗ್ ವಿಭಾಗದಲ್ಲಿ ಸದಸ್ಯ ಗ್ರಾಹಕರ ಅನುಕೂಲಕ್ಕಾಗಿ ಇ-ಸ್ಟ್ಯಾಂಪಿಂಗ್ ಸೌಲಭ್ಯವನ್ನು ಪ್ರಾರಂಭಿಸಿದ್ದು, ಇದರ ಪ್ರಯೋಜನವನ್ನು ಸದಸ್ಯರು ಮತ್ತು ಸದಸ್ಯೇತರರು ಪಡೆದುಕೊಳ್ಳುವಂತೆ ವಿನಂತಿಸಲಾಯಿತು.
ಕೇಂದ್ರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿಯ ಮೀನುಗಾರರಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ಜೀವ ಸತ್ವವುಳ್ಳ ಮೀನಿನ ಸ್ವಾದವನ್ನು ಒಳನಾಡಿನ ಮೀನು ಪ್ರಿಯರಿಗೆ ಉಣಬಡಿಸುವ ಉದ್ದೇಶದಿಂದ ಒಳನಾಡಿನ ಕೆಲವೊಂದು ಆಯ್ದ ಕೇಂದ್ರಗಳಲ್ಲಿ ಮತ್ಸ್ಯ ಕ್ಯಾಂಟಿನ್ ಆರಂಭಿಸುವ ಬಗ್ಗೆ ನಿರ್ಧರಿಸಲಾಯಿತು. ಫೆಡರೇಶನಿನ ಸದಸ್ಯರಿಗೆ ಸಂಸ್ಥೆಯ ವ್ಯವಹಾರದಲ್ಲಿ ಪಾಲ್ಗೊಳುವರೇ ಅನುಕೂಲವಾಗುವಂತೆ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸರಕಾರದ ನಿವೇಶನದಲ್ಲಿ ಪ್ರಧಾನ ಕಚೇರಿಯ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವುದು ಸೂಕ್ತವೆಂದು ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದಿನ ಈ ಸಭೆಯಲ್ಲಿ ಮೀನುಗಾರಿಕಾ ಬಂದರು ಮತ್ತು ಮುಜರಾಯಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೀನುಗಾರಿಕಾ ಸಚಿವರು ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು. ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಶ್ರೀ ಕೆ.ಗಣೇಶ್ ಮೀನುಗಾರಿಕಾ ಉಪನಿರ್ದೇಶಕರು ಉಡುಪಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಂದಿನ ಈ ಸಭೆಯ ವೇದಿಕೆಯಲ್ಲಿ ಫೆಡರೇಶನಿನ ಗೌರವಾನ್ವಿತ ಅಧ್ಯಕ್ಷರಾದ ಯಶ್ಪಾಲ್ ಎ. ಸುವರ್ಣ, ಉಪಾಧ್ಯಕ್ಷರಾದ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ಕುಮಾರ್, ಬಿ.ಕೆ ಸಲೀಂ ಸಹಕಾರ ಸಂಘಗಳ ಉಪನಿಬಂಧಕರು ಮಂಗಳೂರು, ಪ್ರವೀಣ್ ನಾಯ್ಕ್ ಸಹಕಾರ ಸಂಘಗಳ ಉಪನಿಬಂಧಕರು ಉಡುಪಿ, ಶ್ರೀ ಕೆ ಗಣೇಶ್ ಮೀನುಗಾರಿಕಾ ಉಪನಿರ್ದೇಶಕರು ಉಡುಪಿ, ತಿಪ್ಪೆಸ್ವಾಮಿ ಮೀನುಗಾರಿಕಾ ಉಪನಿರ್ದೇಶಕರು ಮಂಗಳೂರು ಶ್ರೀಮತಿ ಸುಶ್ಮಿತಾ ರಾವ್ ಮೀನುಗಾರಿಕಾ ಸಹಾಯಕ ನಿರ್ದೇಶಕರು ಶ್ರೇಣಿ-1 ಮಂಗಳೂರು, ಮತ್ತು ಮೋಹನ್ ಬೆಂಗ್ರೆ ನವೀನ್ಚಂದ್ರ, ನಿತಿನ್ ಕುಮಾರ್, ಕಿಶೋರ್ ಸುವರ್ಣ ಮಲ್ಪೆ ಹಾಗೂ ಫೆಡರೇಶನಿನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.