ಬಿಸಿಯೂಟಕ್ಕೆ ರೊಟ್ಟಿ,ಉಪ್ಪು ಪ್ರಕರಣ: ಬಂಧಿತ ಪತ್ರಕರ್ತನ ಬೆಂಬಲಕ್ಕೆ ನಿಂತ ಗ್ರಾಮಸ್ಥರು

ಉತ್ತರ ಪ್ರದೇಶ: ಮಿರ್ಜಾಪುರ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ರೊಟ್ಟಿ ಜತೆ ಉಪ್ಪು ನೀಡಿದ ಪ್ರಕರಣ ಬಯಲಿಗೆಳೆದ ಪತ್ರಕರ್ತನನ್ನು ಬಂಧಿಸಲಾಗಿದ್ದು, ಆಕ್ರೋಶಗೊಂಡ ಸಿಯುರಿ ಗ್ರಾಮಸ್ಥರು ಹಾಗೂ ಶಾಲೆಯ ಅಡುಗೆಯವರು ವರದಿಗಾರನ ಬೆಂಬಲಕ್ಕೆ ನಿಂತಿದ್ದಾರೆ.

ಪತ್ರಕರ್ತ ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಶಾಲೆಯ ಮುಖ್ಯ ಶಿಕ್ಷಕ ಮುರಾರಿ ಲಾಲ್ ಎಲ್ಲವನ್ನೂ ಉದ್ದೇಶಪೂರ್ವಕವಾಗಿ ಮಾಡಿದರು. ಅವರ ಉದಾಸೀನತೆಯಿಂದಾಗಿ ಮಕ್ಕಳಿಗೆ ಕೇವಲ ಉಪ್ಪು ಮತ್ತು ರೊಟ್ಟಿ ಬಡಿಸಲಾಗುತ್ತಿದೆ ಎಂದು ಅಡುಗೆ ಕೆಲಸದ ರುಕ್ಮಿಣಿ ದೇವಿ ಅವರು ಹೇಳುತ್ತಾರೆ. ಅಲ್ಲದೆ ಹಲವು ಸಂದರ್ಭಗಳಲ್ಲಿ ಮಕ್ಕಳಿಗೆ  ಕೇವಲ ಅರ್ಧ ರೊಟ್ಟಿ ನೀಡಿದ್ದೇವೆ ಎನ್ನುತ್ತಾರೆ.

ಪತ್ರಕರ್ತ ಪ್ರಮೋದ್ ಕುಮಾರ್ ಜೈಸ್ವಾಲ್ ಅವರು ಬಿಸಿ ಊಟಕ್ಕೆ ರೊಟ್ಟಿ ಜೊತೆ ಉಪ್ಪು ನೀಡಿದ್ದನ್ನು ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪತ್ರಕರ್ತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.ಗ್ರಾಮದ ಪ್ರಧಾನ ಪ್ರತಿನಿಧಿ ರಾಜ್‌ಕುಮಾರ್ ಪಾಲ್ ವಿರುದ್ಧವೂ ಕೇಸ್ ದಾಖಲಿಸಿ ಬಂಧಿಸಲಾಗಿದೆ. 

ಪತ್ರಕರ್ತ ಪವನ್ ಜೈಸ್ವಾಲ್ ಹಾಗೂ ರಾಜ್ ಕುಮಾರ್ ಪಾಲ್ ಬಂಧನವನ್ನು ಖಂಡಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದಾರೆಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಗುರುವಾರ ಮಿರ್ಜಾಪುರ ಜಿಲ್ಲೆಯ ಪ್ರಾಥಮಿಕ ಶಾಲೆಗೆ ಹೊಸ ಶಿಕ್ಷಕರ ಜತೆ ಶಿಕ್ಷಾ ಮಿತ್ರರು ಆಗಮಿಸಿದ್ದು, ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ತರಗತಿಯಲ್ಲೇ ಕಾದು ಕುಳಿತಿದ್ದರು. ಆದರೆ, ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿ ಯಾವುದೇ ವಿದ್ಯಾರ್ಥಿಗಳು ತರಗತಿಗೆ ಆಗಮಿಸಲಿಲ್ಲ.

ಮಧ್ಯಾಹ್ನದ ಬಿಸಿಯೂಟಕ್ಕೆ ಉಪ್ಪು ರೊಟ್ಟಿ ನೀಡುವ ಶಾಲೆಯೆಂದೇ ಕುಖ್ಯಾತಿ ಪಡೆದಿರುವ ಈ ಶಾಲೆಯಲ್ಲಿ ಗುರುವಾರ ವಿವಿಧ ಬಗೆಯ ಆಹಾರ ತಯಾರಿಸಲಾಗಿತ್ತು. ಆದರೆ, ಊಟ ಮಾಡಲು ವಿದ್ಯಾರ್ಥಿಗಳೇ ಇಲ್ಲದಂತಾಯಿತು.

Leave a Reply

Your email address will not be published. Required fields are marked *

error: Content is protected !!