ರಕ್ಷಣಾ ಇಲಾಖೆಗೆ 1 ಕೋಟಿ ಮೊತ್ತ ದೇಣಿಗೆ ನೀಡಿ ಮಾದರಿಯಾದ ಮಾಜಿ ಸೈನಿಕ

ನವದೆಹಲಿ: ಬೇರೆಯವರಿಗೆ ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡುವ ಕಾಲದಲ್ಲಿ ಭಾರತೀಯ ವಾಯುಪಡೆಯ ಮಾಜಿ ಸಿಬ್ಬಂದಿಯೊಬ್ಬರು ಭಾರತೀಯ ರಕ್ಷಣಾ ಇಲಾಖೆಗೆ ₹1 ಕೋಟಿ ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದ ಈ ವ್ಯಕ್ತಿಯ ಹೆಸರು ಸಿಬಿಆರ್ ಪ್ರಸಾದ್‌. ಇವರಿಗೆ ಈಗ 74 ವರ್ಷ ವಯಸ್ಸು. ಭಾರತೀಯ ವಾಯುಪಡೆಯಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪ್ರಸಾದ್ ಅಷ್ಟೊಂದು ಮೊತ್ತವನ್ನು ದೇಣಿಗೆಯಾಗಿ ನೀಡಿದ್ದು ಯಾಕೆ ಎಂಬುವುದನ್ನು ವಿವರಿಸಿದ್ದು ಹೀಗೆ…
‘ನಾನು 20 ವರ್ಷದವನಿದ್ದಾಗ ಭಾರತೀಯ ವಾಯುಪಡೆ ಸೇರಿದೆ. ಅಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಈ ನಡುವೆ ರೈಲ್ವೆ ಇಲಾಖೆ ಉತ್ತಮವಾದ ಕೆಲಸವೊಂದನ್ನು ನೀಡುವುದಾಗಿ ಹೇಳಿದ್ದರಿಂದ ನಾನು ವಾಯುಪಡೆಯನ್ನು ತೊರೆದು ಬಂದೆ. ದುರಾದೃಷ್ಟವಶಾತ್ ನನಗೆ ಆ ಕೆಲಸ ಸಿಗಲಿಲ್ಲ. ಜೀವನೋಪಾಯಕ್ಕಾಗಿ ಯಾವುದಾದರೊಂದು ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಆಗ ನಾನು ಚಿಕ್ಕದಾಗಿ ಕೋಳಿ ಫಾರ್ಮ್‌ ಆರಂಭಿಸಿದೆ. ಅದು ನನ್ನ ಕೈ ಹಿಡಿಯಿತು.
ನಾವು ಬರುವಾಗ ಏನು ತಂದಿಲ್ಲ ಹಾಗೆ ಹೋಗುವಾಗಲೂ ಏನು ತೆಗೆದುಕೊಂಡು ಹೋಗುವುದಿಲ್ಲ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಇನ್ನೊಬ್ಬರಿಗೆ ಸಹಾಯ ಮಾಡಬೇಕು. ಜೇಬಿನಲ್ಲಿ ₹5 ಇಟ್ಟುಕೊಂಡು ಮನೆಯಿಂದ ಹೊರಬಂದ ನಾನು ಇಂದು 500 ಎಕರೆ ಜಮೀನು ಹೊಂದಿದ್ದೇನೆ. ಇದಕ್ಕೆಲ್ಲ ನನ್ನ ಪರಿಶ್ರಮವೇ ಕಾರಣ.
ನಾನು ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಕೋಯಂಬತ್ತೂರಿನ ಅಧಿಕಾರಿ ಜಿಡಿ ನಾಯ್ಡು ಕಾರ್ಯಕ್ರಮವೊಂದರ ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರು ಆ ಕಾರ್ಯಕ್ರಮದಲ್ಲಿ ‘ನಮ್ಮದು ಮಹಾನ್ ದೇಶ. ನಮ್ಮ ಕುಟುಂಬದ ಜವಾಬ್ದಾರಿಗಳು ಮುಗಿದ ನಂತರ ನಾವು ಸಮಾಜಕ್ಕೆ ಸಹಾಯ ಮಾಡಬೇಕೆಂದು ನಮ್ಮ ಋಷಿಮುನಿಗಳು ಹೇಳಿದ್ದಾರೆ’ ಎಂದಿದ್ದರು. ಅವರ ಆ ಮಾತುಗಳೇ ನನಗೆ ಪ್ರೇರಣೆ. ನಾನು ಜುಲೈ15 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ₹1.8 ಕೋಟಿ ಮೊತ್ತದ ಚೆಕ್ ನೀಡಿದೆ.
ನಾನು ಮೂವತ್ತು ವರ್ಷದಿಂದ ಮಾಡಿದ ಸಂಪಾದನೆಯಲ್ಲಿ ನನ್ನ ಮಕ್ಕಳಿಗೆ, ಹೆಂಡತಿಗೆ ತಲಾ ಒಂದು ಪ್ರತಿಶತದಷ್ಟು ಅಂದರೆ ಮೂವರಿಗೂ ತಲಾ 5 ಎಕರೆ ಜಮೀನು ನೀಡಿದ್ದೇನೆ. ದೇಣಿಗೆ ನೀಡಿದ್ದರ ಬಗ್ಗೆ ಅವರಿಗೆ ಯಾವುದೇ ಆಕ್ಷೇಪವೂ ಇಲ್ಲ. ಅಷ್ಟೇ ಅಲ್ಲದೆ ನಾನು ಚಿಕ್ಕವನಿದ್ದಾಗ ಒಲಿಂಪಿಕ್‌ ಪದಕ ಗೆಲ್ಲುವ ಕನಸನ್ನು ಕಂಡಿದ್ದೆ. ಆದರೆ ಆ ಕನಸು ನನಸಾಗಿಲ್ಲ. ಕಳೆದ 20 ವರ್ಷಗಳಿಂದ ನಾನು ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ. 50 ಎಕರೆ ಜಮೀನಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸಿರುವೆ. ಇನ್ನೂ 50 ಎಕರೆ ಪ್ರದೇಶದಲ್ಲಿ ಇನ್ನೊಂದು ಕ್ರೀಡಾ ವಿಶ್ವವಿದ್ಯಾನಿಲಯದ ನಿರ್ಮಾಣದಲ್ಲಿ ತೊಡಗಿದ್ದೇನೆ. ಒಂದು ಹುಡುಗಿಯರಿಗೆ ಮತ್ತೊಂದು ಹುಡುಗರಿಗಾಗಿ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಆರಂಭಿಸುವುದು ನನ್ನ ಗುರಿ.

ನಾವು ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರೆ ಮರಳಿ ಸಮಾಜಕ್ಕೆ ಏನಾದರು ಕೊಡುಗೆಯನ್ನು ನೀಡಬೇಕು. ಅದಕ್ಕಾಗಿಯೇ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಸಾದ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!