ಅತೃಪ್ತರಿಗೆ ಬಿಗ್ ರಿಲೀಫ್ – ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ

ನವದೆಹಲಿ: ವಿಶ್ವಾಸ ಮತಯಾಚನೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸುವ ಮೂಲಕ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಈ ವೇಳೆ ರಾಜೀನಾಮೆ ಅಂಗೀಕಾರಕ್ಕೆ ದಿನ ನಿಗದಿ ಪಡಿಸದ ಕೋರ್ಟ್ ನಿರ್ದಿಷ್ಟ ಸಮಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರ ಮಾಡಿ ಎಂದು ಸ್ಪೀಕರ್ ಅವರಿಗೆ ಆದೇಶ ನೀಡಿದೆ.
ನಾಳೆ ವಿಶ್ವಾಸಮತಯಾಚನೆ ಮಾಡಬಹುದು. ಆದ್ರೆ ರಾಜೀನಾಮೆ ನೀಡಿರುವ 15 ಶಾಸಕರು ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ರಾಜೀನಾಮೆ ಅಂಗೀಕರಿಸಿಲ್ಲ ಅಂತ ಸ್ಪೀಕರ್ ವಿರುದ್ಧ 15 ಅತೃಪ್ತ ಶಾಸಕರು ಸಲ್ಲಿಸಿರೋ ಅರ್ಜಿಯ ಬಗ್ಗೆ ಮಂಗಳವಾರ ಸುಮಾರು 212 ನಿಮಿಷ ವಿಚಾರಣೆ ನಡೆದರೂ, ತೀರ್ಪು ಪ್ರಕಟವಾಗಿರಲಿಲ್ಲ. ಅರ್ಜಿದಾರರು, ಸಿಎಂ, ಸ್ಪೀಕರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಕೀಲರು ಸುದೀರ್ಘವಾಗಿ ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ್ದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ದೀಪಕ್ ಗುಪ್ತಾ ಹಾಗೂ ಜಸ್ಟೀಸ್ ಅನಿರುದ್ಧ್ ಬೋಸ್ ಅವರಿದ್ದ ತ್ರಿಸದಸ್ಯ ಪೀಠದ ಎದುರು ಮುಕುಲ್ ರೋಹಟಗಿ – ಅಭಿಷೇಕ್ ಸಿಂಘ್ವಿ – ರಾಜೀವ್ ಧವನ್ ನಡುವೆ ಅಕ್ಷರಶಃ ವಾಗ್ಯುದ್ಧವೇ ನಡೆದಿತ್ತು. ಸುಮಾರು 3 ಗಂಟೆ 45 ನಿಮಿಷಗಳ ವಾದ ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತೀರ್ಪನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿತ್ತು.
ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ ಏನಾಗಿತ್ತು: ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ
10 ಶಾಸಕರು ಜುಲೈ 10ರಂದೇ ರಾಜೀನಾಮೆ ನೀಡಿದ್ದಾರೆ. ಆರ್ಟಿಕಲ್ 190 ಮತ್ತು ಶೆಡ್ಯೂಲ್ 10ರ ನಡುವೆ ವ್ಯತ್ಯಾಸ ಇದ್ದು ಸ್ಪೀಕರ್ ನಿರ್ಧಾರವನ್ನು ಕೋರ್ಟ್ ಪ್ರಶ್ನಿಸಬಹುದು. ಅನರ್ಹತೆ ಬಾಕಿ ಇರೋದು ರಾಜೀನಾಮೆ ಸ್ವೀಕಾರಕ್ಕೆ ಅಡ್ಡಿಯಾಗಬಾರದು. ಉಮೇಶ್ ಜಾಧವ್ ಮೇಲೆ ಅನರ್ಹತೆ ದೂರು ಇದ್ದರೂ ರಾಜೀನಾಮೆ ಅಂಗೀಕರಿಸಲಾಗಿತ್ತು. ಅದೇ ರೀತಿ ಎಲ್ಲ ಶಾಸಕರು
ಅದೇ ರೀತಿ ಎಲ್ಲ ಶಾಸಕರು ರಾಜೀನಾಮೆಯನ್ನು ಅಂಗೀಕರಿಸಬೇಕು. ಈ ವಿಚಾರದಲ್ಲಿ ಸ್ಪೀಕರ್ ದ್ವಂದ್ವ ನೀತಿಯನ್ನು ಹೊಂದಿದ್ದಾರೆ. ಶಾಸಕರು ಅನರ್ಹ ಮಾಡುವಂತಹ ತಪ್ಪು ಏನು ಮಾಡಿದ್ದಾರೆ? ಅನರ್ಹತೆಗೊಳಿಸಲು ಯಾವುದೇ ಕಾರಣ ಇಲ್ಲ. ನಮ್ಮ ಕಕ್ಷಿದಾರರ ಮೇಲೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಸದನದ ಹೊರಗಿನ ಸಭೆಯಲ್ಲಿ ಭಾಗಿಯಾಗುತ್ತಿಲ್ಲ. ವಿಧಾನಸಭಾ ಕಲಾಪಕ್ಕೆ ಹಾಜರಾಗುವಂತೆ ಒತ್ತಡ ಹಾಕುವುದು ಸರಿಯೇ?
ನನ್ನ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ಭಾಗಿಯಾಗಿಲ್ಲ. ರಾಜೀನಾಮೆ ನೀಡಿದ ಬಳಿಕ ವಿಪ್ ಜಾರಿಯಾದ್ರೆ ಅನರ್ಹಗೊಳಿಸಲು ಹೇಗೆ ಸಾಧ್ಯ? ಪಕ್ಷಾಂತರ ನಮ್ಮ ಉದ್ದೇಶ ಅಲ್ಲ, ಸರ್ಕಾರದಿಂದ ಹೊರಬರುವುದು ನಮ್ಮ ಉದ್ದೇಶವಾಗಿದೆ. ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಡವಿಟ್ ಮೂಲಕವೇ ಹೇಳಿದ್ದಾರೆ. ಹೀಗಿರುವಾಗ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುವುದು ಸರಿಯೇ?

ನಾನು ಅನರ್ಹತೆ ಪ್ರಕರಣ ಕೈ ಬಿಡುವಂತೆ ಹೇಳಿಲ್ಲ. ಇಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಅನಹರ್ತತೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆರ್ಟಿಕಲ್ 191/2 ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಈ ಹಕ್ಕನ್ನು ತಡೆಯಲು ಸ್ಪೀಕರ್ ಅವರಿಗೆ ಸಾಧ್ಯವಿಲ್ಲ. ಶಾಸಕರು ಇಷ್ಟಪಟ್ಟಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರ್ವ ಸ್ವತಂತ್ರರು. ಎಲ್ಲ ಶಾಸಕರು ನಿಯಮಬದ್ಧವಾಗಿಯೇ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಈ ಕೂಡಲೇ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮುಕುಲ್ ರೋಹಟಗಿ ವಾದ ಮಂಡಿಸಿದ್ದರು.

ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ:
ಸ್ಪೀಕರ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಕೆಲವರನ್ನು ವಿಚಾರಣೆಗೂ ಕೂಡ ಕರೆದಿದ್ದಾರೆ. ಆದರೆ ಅವರು ವಿಚಾರಣೆಗೆ ಬಂದಿಲ್ಲ. ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರಕ್ಕೆ ಸಂಬಂಧ ಇಲ್ಲ ಎನ್ನುವುದು ತಪ್ಪು. ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧವಿದೆ. ರಾಜೀನಾಮೆಗಿಂತ ಮುಂಚೆಯೇ ಅನರ್ಹತೆಯ ದೂರು ಸಲ್ಲಿಕೆಯಾಗಿದೆ. ವಿಪ್ ಉಲ್ಲಂಘಿಸಿದರೆ ಅದು ಅನರ್ಹತೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ರಾಜೀನಾಮೆ ಅನರ್ಹತೆ ಬಗ್ಗೆ ನಿರ್ಧಾರಕೈಗೊಳ್ಳುವ ಅಧಿಕಾರ ಸ್ವೀಕರ್ ಅವರಿಗೆ ಇದೆ. ವಿಪ್ ಉಲ್ಲಂಘನೆ ಮಾಡಿದರೆ ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರವನ್ನು ಸ್ಪೀಕರ್ ಹೊಂದಿದ್ದಾರೆ.

ನಿಯಮದ ಪ್ರಕಾರ ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಬೇಕು. ಖುದ್ದು ಹಾಜರಾಗದೇ ರಾಜೀನಾಮೆ ನೀಡಿದರೆ ಆರ್ಟಿಕಲ್ 190ರ ಅನ್ವಯ ಆಗಲ್ಲ. ವಿಚಾರಣೆಗೂ ಕೂಡ ಶಾಸಕರು ಖುದ್ದು ಹಾಜರಾಗಬೇಕು. ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಪೂರ್ಣ ಮಾಡಬೇಕಾಗಿರುವ ಕಾರಣ ಒಂದೇ ರಾತ್ರಿಯಲ್ಲಿ ವಿಚಾರಣೆ ಮುಗಿಸಲು ಸಾಧ್ಯವಿಲ್ಲ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಾಸಕರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಜುಲೈ 11ರಂದು 15 ಶಾಸಕರಲ್ಲಿ 11 ಮಂದಿ ಖುದ್ದು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಉಳಿದ ನಾಲ್ವರು ಇದೂವರೆಗೂ ಬಂದಿಲ್ಲ.

ಫೆಬ್ರವರಿಯಲ್ಲಿ ಇಬ್ಬರು ಶಾಸಕರ ಅನರ್ಹತೆ ವಿಚಾರಣೆ ಪ್ರಕ್ರಿಯೆ ಶುರುವಾಗಿದೆ. ಜುಲೈ 6ರಂದು ಶಾಸಕರು ರಾಜೀನಾಮೆ ನೀಡಲು ಹೋದಾಗ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಶಾಸಕರು ಮೊದಲು ಸ್ಪೀಕರ್ ಬಳಿ ಸಮಯ ಕೇಳಿರಲಿಲ್ಲ. ಅನರ್ಹತೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಹಲವು ಅನರ್ಹತೆ ಪ್ರಕರಣಗಳನ್ನು ಪರಿಶೀಲಿಸಿ ತೀರ್ಪು ನೀಡಬೇಕಿದೆ. ಹಾಗಾಗಿ ತಡವಾಗ್ತಿದೆ. ನಾನು ಬಹಳ ಗಟ್ಟಿಯಾಗಿ ಶಾಸಕರು ಅನರ್ಹರಾಗುತ್ತಾರೆಂದು ಹೇಳುತ್ತೇನೆ. ಇವತ್ತಲ್ಲ ನಾಳೆ ಅನರ್ಹತೆ ಆಗಲೇಬೇಕು. ಅನರ್ಹತೆ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗ ಆಗಬಾರದು. ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣವನ್ನು ಸ್ಪೀಕರ್ ಇತ್ಯರ್ಥ ಮಾಡುತ್ತಾರೆ. ಶುಕ್ರವಾರ ನೀಡಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದರು.

ಸಿಎಂ ಪರ ವಕೀಲ ರಾಜೀವ್ ಧವನ್ ಅವರ ವಾದ:
ಸ್ಪೀಕರ್ ಕಣ್ಣುಮುಚ್ಚಿಕೊಂಡು ಕುಳಿತಿಲ್ಲ. ಶಾಸಕರು ಆಸೆ, ಆಮಿಷಗಳಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸ್ಪೀಕರ್ ಅವರಿಗೆ ನೀಡಲಾಗಿದೆ. 11 ಮಂದಿ ಶಾಸಕರು ಮುಂಬೈಗೆ ತೆರಳುವ ಬದಲು ಸ್ಪೀಕರ್ ಬಳಿ ಹೋಗಬೇಕಿತ್ತು. ಇದೊಂದು 11 ಜನರ ಬೇಟೆಯ ತಂಡವಾಗಿದೆ. ಗುಂಪು ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ರಾಜೀನಾಮೆ ಬಳಿಕ 10 ಶಾಸಕರು ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಶೀಘ್ರ ರಾಜೀನಾಮೆ ಅಂಗೀಕಾರವಾದರೆ ಸಂವಿಧಾನ ವಿರೋಧಿ ಆಗುತ್ತದೆ. ಹಾಗಾಗಿ ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ಪ್ರಶ್ನೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇರಲಿಲ್ಲ. ಈಗಲೂ ಇಲ್ಲ.ಸ್ಪೀಕರ್ ಅಧಿಕಾರವನ್ನು 10ನೇ ಶೆಡ್ಯೂಲ್ ಜೊತೆಗೆ ಓದಬೇಕು. ಸಂವಿಧಾನದ 190ನೇ ವಿಧಿಯನ್ನು 10ನೇ ಶೆಡ್ಯೂಲ್ ಪ್ರಕಾರ ಅರ್ಥೈಸಿಕೊಳ್ಳಬೇಕಿದೆ. ಸ್ಪೀಕರ್ ಅವರಿಗೆ ವಿಚಾರಣೆ ನಡೆಸಲು ಸಮಯಾವಕಾಶದ ಅಗತ್ಯವಿದೆ. ಇದೆಲ್ಲವೂ ರಾಜಕೀಯ ಪ್ರೇರಿತವಾಗಿದ್ದು, ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದೆ. ಹೀಗಾಗಿ ವಿಧಿ 190 ಮತ್ತು ಶೆಡ್ಯೂಲ್ 10ನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕಕ್ಕೆ ಮಾರಕ. ಇಂತಹ ಬೆಳವಣಿಗೆಯಿಂದ ಪ್ರಜಾಪ್ರಭುತ್ವದ ಬುಡ ಅಲುಗಾಡುತ್ತಿದೆ.

ಶಾಸಕರ ರಾಜೀನಾಮೆಗಳಿಗೆ ಕಾರಣಗಳೇ ಇಲ್ಲ. ಶಾಸಕರು ನೀಡುವ ಕಾರಣಗಳು ಸ್ಪೀಕರ್ ಅವರಿಗೆ ತೃಪ್ತಿಯಾದ್ರೆ ಮಾತ್ರ ರಾಜೀನಾಮೆ ಸಾಂವಿಧಾನಿಕವಾಗಲಿದೆ. 10 ರಿಂದ 13 ಶಾಸಕರು ರಾಜೀನಾಮೆ ನೀಡಲು ಸರ್ಕಾರ ಕೆಡವಲು ಬೇಟೆಗೆ ಹೊರಟಿದ್ದಾರೆ. ರಾಜಕೀಯ ಆಟದಲ್ಲಿ ಕೋರ್ಟ್ ಮಧ್ಯಪ್ರವೇಶಕ್ಕೆ ಶಾಸಕರು ಬಯಸಿದ್ದಾರೆ ಎಂದು ತಮ್ಮ ವಾದದಲ್ಲಿ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!