ದಕ್ಷಿಣ ಭಾರತದ ಮೊದಲ ಭಾರತ್ ಬೆನ್ಜ್ ಸ್ಟೇಜ್ ಕ್ಯಾರಿಯೆಜ್ ಬಸ್ ಬಿಡುಗಡೆ
ಮೂಲ್ಕಿ : ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಖ್ಯಾತ ವಾಹನಗಳ ತಯಾರಿಕಾ ಸಂಸ್ಥೆ ಭಾರತ್ ಬೆನ್ಜ್ ನ ಮೊದಲ ಸ್ಟೇಜ್ ಕ್ಯಾರಿಯೆಜ್ (ರೂಟ್ ಬಸ್) ಬಸ್ ಇಂದು ಮುಲ್ಕಿ ಕೊಲ್ನಾಡ್ ನ ಭಾರತ್ ಬೆನ್ಜ್ ಕಚೇರಿಯಲ್ಲಿ ಬಿಡುಗಡೆಗೊಂಡಿತು.
ವಿಶೇಷ ತಾಂತ್ರಿಕ ಶೈಲಿಯ ನವನವೀನ ಮೂವತ್ತಾರು ಸೀಟುಗಳುಳ್ಳ ಈ ಬಸ್ ನ ಮೊದಲ ಗ್ರಾಹಕ ಉದ್ಯಮಿ ಮತ್ತು ಮೂಕಾಂಬಿಕಾ ಬಸ್ಸುಗಳ ಮಾಲಕ ಕಿಶನ್ ಹೆಗ್ಡೆ ಕೊಳ್ಕೆಬೈಲ್. ಭಾರತ್ ಬೆಂಜ್ ನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಅಧಿಕಾರಿಗಳು ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರಿಗೆ ವಾಹನದ ಕೀ ಯನ್ನು ನೀಡುವುದರೊಂದಿಗೆ ನೂತನ ವಾಹನವನ್ನು ಹಸ್ತಾಂತರಿಸಿದರು.
ಇಂದಿನಿಂದ ಮೂಕಾಂಬಿಕಾ ಹೆಸರಿನ ಈ ಬಸ್ ಮಣಿಪಾಲ – ಉಡುಪಿ – ಮಂಗಳೂರು ಮಾರ್ಗವಾಗಿ ಜನರ ಸೇವೆಗೆ ಲಭ್ಯವಿದೆ. ಇಂದು ಸಂಜೆ 5.30ಕ್ಕೆ ಮಣಿಪಾಲ ಉಡುಪಿ ಮಾರ್ಗವಾಗಿ ಮಂಗಳೂರಿಗೆ ಪ್ರಥಮ ಪ್ರಯಾಣವನ್ನು ಆರಂಭಿಸಲಿದೆ ಎಂದು ಉದ್ಯಮಿ ಮತ್ತು ಮೂಕಾಂಬಿಕಾ ಬಸ್ ನ ಮಾಲಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್ ತಿಳಿಸಿದ್ದಾರೆ.
ಭಾರತ್ ಬೆನ್ಜ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ರವರನ್ನು ಶಾಲು ಹೊದಿಸಿ ಕಂಪನಿಯ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಭಾರತ್ ಬೆನ್ಜ್ ನ ಅಧಿಕಾರಿಗಳಾದ ರಿತೇಶ್ ಪಿರೇರಾ, ಚೇತನ್ ಪ್ರಭು, ಶ್ರೀಧರ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.