ರಾಜ್ಯದ ದೇವಾಲಯಗಳಲ್ಲಿ ಇ-ಹುಂಡಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ರಾಜ್ಯದ ಎಲ್ಲ ದೇವಾಲಯಗಳ ಹುಂಡಿಯಲ್ಲಿ
ಸಂಗ್ರಹವಾಗುವ ಮೊತ್ತವನ್ನು ಅತ್ಯಂತ ನಿಖರವಾಗಿ ಎಣಿಕೆ ಮಾಡುವ ಇ- ಹುಂಡಿ ವ್ಯವಸ್ಥೆಯನ್ನು ಇಗರ್ವನೆನ್ಸ್ ಇಲಾಖೆ ಮೂಲಕ ಜಾರಿಗೊಳಿಸಲಾಗುವುದು ಎಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಶುಕ್ರವಾರ, ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ ಪರಿಶೀಲಿಸಿ ಮಾತನಾಡಿದರು.
ದೇವಾಲಯದ ಹುಂಡಿಗಳಲ್ಲಿ ಭಕ್ತರು ಹಣ ಹಾಕಿದ ಕೂಡಲೇ, ಹಾಕಿದ ಹಣದ ನಿರ್ದಿಷ್ಟ
ಮೊತ್ತವನ್ನು ತೋರಿಸುವ ಹುಂಡಿಗಳನ್ನು ಅಳವಡಿಸಲು ಇ-ಹುಂಡಿ ವ್ಯವಸ್ಥೆ
ಜಾರಿಗೊಳಿಸಲಾಗುತ್ತಿದ್ದು, ಹಣ ಮಾತ್ರವಲ್ಲದೇ ಹುಂಡಿಯಲ್ಲಿ ಹಾಕುವ ಚಿನ್ನಾಭರಣಗಳ
ತೂಕವನ್ನೂ ಸಹ ಇದರಲ್ಲಿ ಪರೀಕ್ಷಿಸಬಹುದಾಗಿದ್ದು, ಹುಂಡಿಯಲ್ಲಿ ಸಂಗ್ರಹವಾಗುವ ಮೊತ್ತ ನೇರವಾಗಿ ಸಂಬಂದಪಟ್ಟ ದೇವಾಲಯದ ಬ್ಯಾಂಕ್ ಖಾತೆಗೆ ಜಮೆ ಆಗಲಿದ್ದು, ಇದರಿಂದ ಭಕ್ತರು ನೀಡಿದ ಮೊತ್ತವನ್ನು ಅತ್ಯಂತ ಪಾರದರ್ಶಕವಾಗಿ ದೇಗುಲದ ಅಭಿವೃಧ್ದಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದು ಸಚಿವರ ಶ್ರೀನಿವಾಸ ಪೂಜಾರಿ ಹೇಳಿದರು.


ರಾಜ್ಯದ ದೇವಾಲಯಗಳ ಕಾಮಗಾರಿಗಳ ಕುರಿತಂತೆ ಅಗತ್ಯ ಯೋಜನೆ ರೂಪಿಸಲು ಮತ್ತು
ತಾಂತ್ರಿಕ ಅನುಮೋದನೆ ನೀಡಲು ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗವನ್ನು ತೆರೆಯಲು ಹಾಗೂ ಮುಜರಾಯಿ ಇಲಾಖೆಯಲ್ಲಿ 1000 ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ದೇವಾಲಯಗಳಲ್ಲಿ ವಿವಿಧ ಸೇವೆಗಳಿಗಾಗಿ ನೀಡುವ ರಸೀದಿಯನ್ನು ಏಕರೂಪದ ತಂತ್ರಾಂಶದ ಮೂಲಕ ನಿರ್ವಹಣೆ ಮಾಡಲು ನಿರ್ಧರಿಸಿದ್ದು, ಈಗಾಗಲೇ ಕೊಲ್ಲೂರು ಮುಂತಾದ ದೇವಾಲಯಗಳಲ್ಲಿ ಈ ವ್ಯವಸ್ಥೆ ಇದ್ದು, ಇದನ್ನು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಅಳವಡಿಸಲಾಗುವುದು ಎಂದು ಸಚಿವರು ಹೇಳಿದರು.

ಮುಜರಾಯಿ ಇಲಾಖೆಯಲ್ಲಿ 2 ಕೋಟಿ ವರೆಗಿನ ನಿರ್ಮಾಣ ಕಾಮಗಾರಿಗೆ ಮತ್ತು 1 ಕೋಟಿ
ವರೆಗಿನ ಇತರೆ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡು ಕುರಿತಂತೆ ಪರಿಶೀಲಿಸಲಾಗುವುದು ಮತ್ತು 25 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ ಬಿ ವರ್ಗದ ದೇವಸ್ಥಾನಗಳನ್ನು ತಕ್ಷಣವೇ ಎ ವರ್ಗಕ್ಕೆ ಸೇರ್ಪಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದ ಎ ವರ್ಗದ ದೇವಾಲಯಗಳ ಮೂಲಕ ಗೋ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿದ್ದು, ಪ್ರಾಯೋಗಿಕವಾಗಿ ಕೊಲ್ಲೂರು ಮತ್ತು ಮಂದಾರ್ತಿ ದೇವಾಲಯಗಳ ಮೂಲಕ ಗೋ ಸಂರಕ್ಷಣೆ ಕೇಂದ್ರಗಳನ್ನು ಆರಂಭಿಸಿ ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ, ಸದ್ರಿ ದೇವಾಲಯಗಳು ತಮ್ಮ ಆರ್ಥಿಕ ಸಂಪನ್ಮೂಲಗಳಿಂದ ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಮಾಡಬೇಕಾಗುತ್ತದೆ, ಈ
ಕುರಿತಂತೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಅಗತ್ಯ ಭೂಮಿಯನ್ನು ಗುರುತಿಸುವಂತ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಧಿಸೂಚಿತ ದೇವಾಲಯಗಳ ಪಟ್ಟಿ ಪರಿಷ್ಕರಣೆ, ದೇವಾಲಯಗಳಲ್ಲಿ ಸಿಸಿಟಿವಿ ಅಳವಡಿಕೆ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರವೀಣ್ ಬಿ ನಾಯಕ್ ಹಾಗೂ ವಿವಿಧ ದೇವಾಲಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!