ಬಂದರು ಇಲಾಖೆ ಕಾಮಗಾರಿಗಳ ಸ್ಥಳ ಪರಿಶೀಲನೆ:ಸಚಿವ ಕೋಟ

ಉಡುಪಿ: ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಬಂದರು ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ವಿಳಂಬವಾಗಿದ್ದು, ಈ ಬಗ್ಗೆ ರಾಜ್ಯಮಟ್ಟದ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಮೀನುಗಾರಿಕೆ
ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೀನುಗಾರಿಕಾ, ಬಂದರು ಮತ್ತು
ಒಳನಾಡು ಜಲಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೊಡೇರಿಯಲ್ಲಿ 33 ಕೋಟಿ ರೂ ವೆಚ್ಚದ ಬ್ರೇಕ್ ವಾಟರ್ ಕಾಮಗಾರಿ ಜನವರಿ ಅಂತ್ಯದ ಒಳಗೆ ಮುಗಿಯಬೇಕಿತ್ತು, ಆದರೆ ಇದುವರೆಗೂ ಶೇ.20 ರಷ್ಟು ಕಾಮಗಾರಿ ಮಾತ್ರ ಮುಗಿದಿದ್ದು, ಇದುವರೆಗೂ ಪ್ರಗತಿ ಕಾಣದ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವ ಪೂಜಾರಿ, ಸದ್ರಿ ಕಾಮಗಾರಿ ವಿಳಂಬಕ್ಕ ಕಾರಣಗಳ ಕುರಿತು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುವುದಾಗಿ ಮತ್ತು ಸದ್ರಿ ಕಾಮಗಾರಿ ನಿರ್ವಹಿಸದೆ ಇರುವ ಗುತ್ತಿಗೆದಾರರ ಲೈಸೆನ್ಸ್ ರದ್ದು ಮತ್ತು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವ ಕುರಿತಂತೆ ವರದಿ ನೀಡುವಂತೆ ಸೂಚಿಸಿದರು.
ಕೋಡಿ ಕನ್ಯಾನದಲ್ಲಿ ಡ್ರೆಜ್ಜಿಂಗ್ ಮಾಡದೇ ಇರುವುದರಿಂದ ಮೀನುಗಾರಿಕಾ ಬೋಟ್‍ಗಳ
ಸಂಚಾರಕ್ಕೆ ಅಡಚಣೆಯಾಗಿದ್ದು, ಈ ಪ್ರದೇಶದಲ್ಲಿ ಡ್ರೆಜ್ಜಿಂಗ್ ನಡೆಸಲು ಸಿ.ಆರ್.ಝಡ್ ನ
ನಿಯಮಗಳನ್ವಯ ಅಗತ್ಯ ಅನುಮತಿ ಪಡೆದು ಶೀಘ್ರದಲ್ಲಿ ಕಾಮಗಾರಿ ಆರಂಭಿಸುವಂತೆ ತಿಳಿಸಿದ ಸಚಿವರು, ಯಾವುದೇ ಕಾಮಗಾರಿ ಆರಂಭಕ್ಕೆ ಮುನ್ನ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದು ಕಾಮಗಾರಿಗಳನ್ನು ಮಾಡಿ, ಇದರಿಂದ ಸಕಾಲದಲ್ಲಿ ಕಾಮಗಾರಿ ಮುಕ್ತಾಯವಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮಲ್ಪೆ 3 ನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಅಗತ್ಯ ಸಣ್ಣಪುಟ್ಟ ಕಾರ್ಯಗಳನ್ನು ಪೂರ್ಣಗೊಳಿಸಿ, ಸಪ್ಟೆಂಬರ್ ಅಂತ್ಯದೊಳಗೆ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸುವಂತೆ ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮರವಂತೆಯಲ್ಲಿ ಕೇರಳ ಮಾದರಿಯ 45 ಕೋಟಿ ರೂ ವೆಚ್ಚದ ಹೊರ ಬಂದರು ನಿರ್ಮಾಣ ಕಾಮಗಾರಿಯ ಮೊದಲ ಹಂತ ಪೂರ್ಣಗೊಂಡಿದ್ದು, ಸದ್ರಿ ಕಾಮಗಾರಿ ಮೀನುಗಾರರಿಗೆ ಅನುಪಯುಕ್ತವಾಗಿದ್ದು, 2ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುವುದಾಗಿ ಸಚಿವ ಪೂಜಾರಿ ತಿಳಿಸಿದರು. ಕಡಲ್ಕೊರೆತ, ತಡೆಗೋಡೆ ನಿರ್ಮಾಣ ಮುಂತಾದ ತುರ್ತು ಕಾಮಗಾರಿಗೆ ಜಿಲ್ಲೆಯಲ್ಲಿರುವ ಅನುದಾನದ ಕುರಿತು ಮಾಹಿತಿ ಪಡೆದ ಸಚಿವರು ಈವರೆಗೆ ಬಂದಿರುವ ಅರ್ಜಿಗಳ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮೀನುಗಾರರಿಗೆ 170 ಕೆ.ಎಲ್. ಸೀಮೆಎಣ್ಣೆ ವಿತರಿಸಲಾಗುತ್ತಿತ್ತು. ಆದರೆ ಜಿಲ್ಲೆಯಲ್ಲಿ 4000 ಕ್ಕೂ ಅಧಿಕ ನಾಡದೋಣಿ ಮೀನುಗಾರರು ಇರುವುದರಿಂದ ಹೆಚ್ಚುವರಿ 300 ಲೀಟರ್ ಸೀಮೆಎಣ್ಣೆ ಹೆಚ್ಚಳಕ್ಕೆ ಪ್ರಸ್ಥಾವನೆ ಸಲ್ಲಿಸುವುದಾಗಿ ತಿಳಿಸಿದ ಸಚಿವರು, 300 ಲೀಟರ್ ಸೀಮೆಎಣ್ಣೆ ದಾಸ್ತಾನು ಹಾಗೂ ಇತರ ವ್ಯವಸ್ಥೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಮೀನುಗಾರರ ಉಳಿತಾಯ ಯೋಜನೆಯ ಹಣ ಸಕಾಲದಲ್ಲಿ ಪಾವತಿ ಮಾಡುವ ಬಗ್ಗೆ, ಏಕರೂಪದ ಸಂಕಷ್ಠ ಪರಿಹರ ನಿಧಿ ವಿತರಣೆ ಬಗ್ಗೆ, ನಾಡದೋಣಿಗಳ ಎಂಜಿನ್ ಸಬ್ಸಿಡಿ, ಮತ್ಸ್ಯಾಶ್ರಯ ಯೋಜನೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ರೀತಿ ವಿಳಂಬ ಮಾಡದೆ, ಪರಸ್ಪರ ಸಮನ್ವಯದಿಂದ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಬಂದರು ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸಚಿವ ಪೂಜಾರಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ,
ಜಿಲ್ಲಾಧಿಕಾರಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬಂದರು, ಒಳನಾಡು ಜಲ ಸಾರಿಗೆ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!