ಫ್ರೆಂಡ್ಸ್ ಗಾರ್ಡನ್ ಬಾಲ ಗಣೇಶೋತ್ಸವ:ರಜತ ಮಹೋತ್ಸವ

ಫ್ರೆಂಡ್ಸ್ ಗಾರ್ಡನ್ ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿ ಆರೂರುತೋಟ ಉದ್ಯಾವರ ಇದರ ರಜತ ಮಹೋತ್ಸವದ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 2 ರಿಂದ 4 ರವರೆಗೆ ಆರೂರುತೋಟ ಸಂಪಿಗೆನಗರ ಉದ್ಯಾವರದಲ್ಲಿ ನಡೆಯಲಿದೆ ಎಂದು ರಜತ ಮಹೋತ್ಸವದ ಅಧ್ಯಕ್ಷರಾದ ಯೋಗೀಶ್ ಎಸ್ ಕೋಟ್ಯಾನ್ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಸೆಪ್ಟೆಂಬರ್ 2 ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಶ್ರೀ ಗಣೇಶನ ವಿಗ್ರಹ ಆಗಮನವಾಗಲಿದ್ದು, 10.30ಕ್ಕೆ  ಶ್ರೀ ದೇವರ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಬಳಿಕ ವಿವಿಧ ಪೂಜಾ ವಿಧಿಗಳು ನಡೆಯಲಿವೆ. ರಜತ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ಸಂಜೆ 8 ಗಂಟೆಗೆ ‘ಹಸಿರೇ ಉಸಿರು’ ಪರಿಸರ ಜಾಗೃತಿಯ ಮೂಲಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ವೈ.ಎನ್. ಶೆಟ್ಟಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಶೇಖರ್ ಸಹಿತ ವಿವಿಧ ಅತಿಥಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹೕೆರಂಜೆ ಯಕ್ಷ ಬಳಗ ಇವರಿಂದ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷಗಾನ ‘ಕುಶಲವ’ ಪ್ರದರ್ಶನವಾಗಲಿದೆ.
ಮಂಗಳವಾರ ಬೆಳಿಗ್ಗೆ 108 ತೆಂಗಿನಕಾಯಿ ಗಣಯಾಗ ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಲಿದೆ. ಸಂಜೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ವಿಶ್ವದಾಖಲೆಯ ತನುಶ್ರೀ ಪಿತ್ರೋಡಿ ಮತ್ತು ಕನ್ನಡ ಕೋಗಿಲೆ ಖ್ಯಾತಿಯ ಲಿಖಿತ್ ಕರ್ಕೇರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸಭಾ ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಸಹಿತ ವಿವಿಧ ಅತಿಥಿಗಳು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ನಮ್ಮ ಕಲಾವಿದೆರ್ ಬೆದ್ರ ಇವರಿಂದ ಉಲಾಯಿ ಪಿದಾಯಿ ತುಳು ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ ಎಂದು ಸಂಘಟಕರು ತಿಳಿಸಿದರು.
ಬುಧವಾರ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ವಿಸರ್ಜನಾ ಮೆರವಣಿಗೆಯೂ ಆರು ತೋಟ ಅಶ್ವತ್ಥ ಕಟ್ಟೆಯಿಂದ ಹೊರಟು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಕೆರೆಗೆ ಆಗಮಿಸಿ ವಿಸರ್ಜನಾ ಪೂಜೆಯೊಂದಿಗೆ ಜಲಸ್ತಂಭನ ಮಾಡಲಾಗುವುದು ಎಂದು ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಜತ್ತನ್ನ, ಹರೀಶ್ ಸೌಂದರ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!