ನಿಂಬೆಹಣ್ಣು ಹಿಡಿದುಕೊಂಡು ದೇವರ ದರ್ಶನ ಮಾಡಿದರೆ ದೇವರು ರಕ್ಷಣೆ ಮಾಡುವನೇ ? ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯ
ಉಡುಪಿ: ಸರ್ಕಾರದಲ್ಲಿದ್ದು ಎಲ್ಲಾ ತಪ್ಪುಗಳನ್ನು ಮಾಡಿದ್ದು ಸಚಿವ ಹೆಚ್.ಡಿ.ರೇವಣ್ಣ. ಇದೀಗ ಸರ್ಕಾರವನ್ನು ದೇವರು ರಕ್ಷಿಸಬೇಕು ಅಂದರೆ ಆಗಲ್ಲ ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ರೇವಣ್ಣ ಅವರ ಟೆಂಪಲ್ ರನ್ ಅನ್ನು ಟೀಕಿಸಿದ ಕೋಟ, ಸರ್ಕಾರದಲ್ಲಿ ದೂರುಗಳೆಲ್ಲಾ ಇರುವುದೇ ರೇವಣ್ಣ ಅವರ ಮೇಲೆ. ಶಾಸಕರ ಅತೃಪ್ತಿಗೆ, ಸರ್ಕಾರ ಬಿದ್ದು ಹೋಗುವುದಕ್ಕೆ ರೇವಣ್ಣ ಕಾರಣ. ಈಗ ಎಡ, ಬಲಗೈಯಲ್ಲಿ ನಾಲ್ಕು, ನಾಲ್ಕೂ ನಿಂಬೆಹಣ್ಣು ಹಿಡಿದುಕೊಂಡು ದೇವರ ದರ್ಶನ ಮಾಡಿದರೆ ದೇವರು ಕೂಡಾ ಅವರ ರಕ್ಷಣೆಗೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಅತೃಪ್ತ ಶಾಸಕರು ಸರ್ಕಾರದ ಒಟ್ಟು ನೀತಿಯನ್ನು ವಿರೋಧಿಸಿದ್ದಾರೆ. ಇದೇ ಸರ್ಕಾರ ಮುಂದುವರಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಅದಕ್ಕೂ ಮೊದಲು ಸರ್ಕಾರದ ವಿಶ್ವಾಸ ಕಳೆದುಕೊಂಡಿದ್ದೇವೆ ಎಂಬುದನ್ನು ಪ್ರಚಾರ ಮಾಡಿದ್ದಾರೆ ಎಂದರು. ಇನ್ನು ಸರ್ಕಾರ ಬಹುಮತ ಕಳೆದು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಎಲ್ಲಾ ಲಕ್ಷಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರ ಬಹುಮತ ಕಳೆದುಕೊಂಡಿದೆ. ಇದು ಸರ್ಕಾರ ನಡೆಸುವವರಿಗೂ ಅರ್ಥವಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಮುಖ್ಯಮಂತ್ರಿ ನಾಳೆ ರಾಜೀನಾಮೆ ಕೊಡಲಿ. ವ್ಯವಸ್ಥೆಯ ದೃಷ್ಟಿಯಿಂದ ನಾಳೆ ಸಿಎಂ ವಿದಾಯ ಭಾಷಣ ಮಾಡುವುದೇ ಒಳ್ಳೆಯದು. ರಮೇಶ್ ಕುಮಾರ್ ಆದರ್ಶ ರಾಜಕಾರಣ, ರಾಜಧರ್ಮವನ್ನು ನಮಗೆಲ್ಲಾ ಹೇಳಿಕೊಟ್ಟವರು. ನಾಳೆ ಎಲ್ಲವನ್ನೂ ಮುಗಿಸುತ್ತೇನೆ ಎಂದು ಅವರೇ ಭರವಸೆ ನೀಡಿದ್ದಾರೆ. ಸ್ಪೀಕರ್ ರಾಜಧರ್ಮವನ್ನು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು