ಜಿಲ್ಲಾಆಸ್ಪತ್ರೆ ಮೇಲ್ದರ್ಜೆಗೆ 250ಬೆಡ್ವ್ಯವಸ್ಥೆ:ರಾಮುಲು
ಉಡುಪಿ: ‘ಉಡುಪಿ ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್ಗಳಿಗೆ ಶೀಘ್ರ ಮೇಲ್ದರ್ಜೆಗೆ ಏರಿಸಲು ಬದ್ಧನಾಗಿದ್ದೇನೆ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದರು.
ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲು ಬಂದಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವ ಇತ್ತು. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿಬಂದಿದ್ದು, ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆ ಪಡೆದು, ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಹಿಂದೆ, ಕೆಪಿಎಸ್ಸಿ ಮೂಲಕ ವೈದ್ಯರ ನೇಮಕಾತಿ ನಡೆಯುತ್ತಿತ್ತು. ಈಗ ವೈದ್ಯರ ನೇಮಕಾತಿ ಅಧಿಕಾರವನ್ನು ಡಿಎಚ್ಒ ಹಾಗೂ ಸರ್ಜನ್ಗಳಿಗೆ ನೀಡಲಾಗಿದೆ. ಸ್ಥಳೀಯ ವೈದ್ಯರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆಯೂ ಸೂಚಿಸಲಾಗಿದೆ ಎಂದರು.
ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ವೈದ್ಯರು ಹಾಗೂ ಸಿಬ್ಬಂದಿ ಕೊರತೆ, ಸೌಲಭ್ಯಗಳು ಸಮರ್ಪಕವಾಗಿ ಸಿಗದ ಪರಿಣಾಮ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಸಮನಾಗಿ ಸರ್ಕಾರಿ ಆಸ್ಪತ್ರೆಗಳಲ್ಲೂ ಸೌಲಭ್ಯಗಳು ಸಿಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದು, ಸಮಸ್ಯೆಗಳನ್ನು ಅರಿಯುವ ಯತ್ನ ಮಾಡುತ್ತಿದ್ದೇನೆ ಎಂದರು.
‘ಪ್ರಚಾರಕ್ಕಾಗಿ ರಾತ್ರಿ ವಾಸ್ತವ್ಯ ಮಾಡುತ್ತಿಲ್ಲ. ವೈದ್ಯರು ಹಾಗೂ ಸಿಬ್ಬಂದಿಗೆ ಭಯದ ವಾತಾವರಣ ಮೂಡಬೇಕು. ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ವಾಸ್ತವ್ಯ ಮಾಡುತ್ತಿದ್ದೇನೆ’ ಎಂದರು.
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡುವ ವೈದ್ಯರಿಗೆ ಶೇ 30ರಷ್ಟು ಪ್ರೋತ್ಸಾಹ ಧನ ನೀಡುತ್ತಿದೆ. ಇದರಿಂದ ವೈದ್ಯರ ಸಮರ್ಪಕ ಸೇವೆ ಜನರಿಗೆ ಲಭ್ಯವಾಗಲಿದೆ ಎಂದರು.
ಆಸ್ಪತ್ರೆಗಳ ಭೇಟಿ ವೇಳೆ ವೈದ್ಯರ ಕೊರತೆ, ಸ್ವಚ್ಛತೆ, ಮೂಲಸೌಕರ್ಯದ ಸಮಸ್ಯೆಗಳು ಗಮನಕ್ಕೆ ಬರುತ್ತಿದ್ದು, ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದರು.ಬಳಿಕ ಜಿಲ್ಲಾ ಆಸ್ಪತ್ರೆಯ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಊಟ, ಔಷಧ, ವೈದ್ಯರು ನಿಯಮಿತವಾಗಿ ಭೇಟಿನೀಡುತ್ತಿದ್ದಾರೆಯೇ ಎಂದು ರೋಗಿಗಳಿಂದ ಮಾಹಿತಿ ಪಡೆದರು.ರಾಮುಲು ಅವರು ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿ, ಶನಿವಾರ ಬೆಳಿಗ್ಗೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
‘₹17,500 ವೇತನ’
ರಾಜ್ಯ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶುಶ್ರೂಷಕಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಲ್ಯಾಬ್ ಟೆಕ್ನಿಷಿಯನ್ಗಳಿಗೆ ₹ 17,500 ವೇತನ ಕೊಡಲು ನಿರ್ಧರಿಸಲಾಗಿದೆ. ವೇತನ ಹೆಚ್ಚಳಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆಯೂ ಸಿಕ್ಕಿದ್ದು, ಶೀಘ್ರವೇ ವೇತನ ಪರಿಷ್ಕರಣೆ ಆದೇಶ ಹೊರಬೀಳಲಿದೆ. ಜತೆಗೆ ಹೆಚ್ಚಿನ ಸಿಬ್ಬಂದಿಯ ನೇಮಕಾತಿಯೂ ನಡೆಯಲಿದೆ ಎಂದರು.
‘ವರ್ಗಾವಣೆಗೆ ಆದೇಶ’
ಸಕಲೇಶಪುರ ತಾಲ್ಲೂಕಿನ ಎಲಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿರುವ ದಿವ್ಯಲತಾ ಉಡುಪಿ ಜಿಲ್ಲಾ ಆಸ್ಪತ್ರೆಗೆ ತಾಯಿಯನ್ನು ದಾಖಲಿಸಿದ್ದರು. ತಾಯಿಯ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಆರೈಕೆ ಮಾಡುವುದು ಕಷ್ಟವಾಗಿದೆ. ಸಕಲೇಶಪುರದಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಉಡುಪಿ ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಮಾಡಬೇಕು ಎಂದು ಸಚಿವ ಶ್ರೀರಾಮುಲು ಬಳಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಸರ್ಜನ್ ಅವರಿಂದ ಹುದ್ದೆ ಖಾಲಿ ಬಗ್ಗೆ ಮಾಹಿತಿ ಪಡೆದು ಕೂಡಲೇ ವರ್ಗಾವಣೆ ಆದೇಶ ಮಾಡಿಸುವುದಾಗಿ ಭರವಸೆ ನೀಡಿದರು.