ಮಹಾರಾಷ್ಟ್ರ;ಬಿಜೆಪಿ, ಎನ್ ಸಿ ಪಿ ಮಿಲನ ದೇವೇಂದ್ರರಿಗೆ ಒಲಿದ ಸಿಎಂ ಕುರ್ಚಿ
ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಯ ಬಿಕ್ಕಟ್ಟಿಗೆ ಹೊಸ ತಿರುವು ಸಿಕ್ಕಿದ್ದು, ಶಿವಸೇನೆ ಹಾಗೂ ಕಾಂಗ್ರೆಸ್ಸಿಗೆ ಟಕ್ಕರ್ ಕೊಟ್ಟು ಮತ್ತೆ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಆದ ಈ ಬೆಳವಣಿಗೆ ಎಲ್ಲರನ್ನು ಅಚ್ಚರಿಗೊಳಿಸಿದೆ. ಬಿಜೆಪಿ ಹಾಗೂ ಎನ್ಸಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡಲಿದೆ. ಮುಖ್ಯಮಂತ್ರಿಯಾಗಿ ಮತ್ತೆ ದೇವೇಂದ್ರ ಫಡ್ನವಿಸ್ ಪದಗ್ರಹಣ ಮಾಡಿದ್ದು, ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅವರು ಪ್ರಮಾಣವಚಣ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಇಂದು ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ಪದಗ್ರಹಣ ಮಾಡಿದ್ದಾರೆ.
ಶುಕ್ರವಾರ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿ ನಡುವಿನ ಚರ್ಚೆಗಳು ಕೊನೆ ಹಂತ ತಲುಪಿದ್ದು, ಇಂದು ಎನ್ಸಿಪಿ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆಗೆ ಸಜ್ಜಾಗಿದೆ. ಈ ಹಿಂದೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಸಿಎಂ ಆಗಲು ಅಜಿತ್ ಪವಾರ್ ಒಮ್ಮತ ಸೂಚಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಜೆಪಿ ಜೊತೆ ಕೈಮಿಲಾಯಿಸಿ ಈಗ ಉಪಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.
ಹೆಚ್ಚು ಸ್ಥಾನ ಗೆದ್ದ ಬಿಜೆಪಿ ಜೊತೆ ಕೈಜೊಡಿಸಿ ಸರ್ಕಾರ ಮಾಡಲು ಶಿವಸೇನೆ ಹೆಚ್ಚು ಬೇಡಿಕೆಗಳನ್ನು ಮುಂದಿಟ್ಟಿತ್ತು. ಸಿಎಂ ಸ್ಥಾನ ನಮಗೆ ಬಿಟ್ಟುಕೊಡಬೇಕು, ಸಚಿವ ಸಂಪುಟದಲ್ಲಿ ಸಮವಾಗಿ ಸ್ಥಾನಗಳನ್ನು ಹಂಚಬೇಕು ಎಂದು ಪಟ್ಟು ಹಿಡಿದಿತ್ತು. ಆದರೆ ಇದಕ್ಕೆ ಬಿಜೆಪಿ ಒಪ್ಪಿರಲಿಲ್ಲ. ಇತ್ತ ಕಾಂಗ್ರೆಸ್ ಹೇಗಾದರೂ ಶಿವಸೇನೆ, ಎನ್ಸಿಪಿ ವಿಶ್ವಾಸಗಳಿಸಿ ಸರ್ಕಾರ ರಚನೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿತ್ತು. ಆದರೆ ಈಗ ಈ ಎಲ್ಲಾ ಪ್ರಯತ್ನಕ್ಕೂ ನೀರೆರಚಿದಂತೆ ಆಗಿದ್ದು, ಸದ್ದಿಲ್ಲದೆ ಬಿಜೆಪಿ ಎನ್ಸಿಪಿ ಜೊತೆ ಕೈ ಮಿಲಾಯಿಸಿ ದೇವೇಂದ್ರ ಫಡ್ನವಿಸ್ ಸಿಎಂ ಆಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಚುನಾವಣೆಯಲ್ಲಿ 288 ಸೀಟ್ನಲ್ಲಿ ಬಿಜೆಪಿ 105 ಸ್ಥಾನ, ಶಿವಸೇನೆ 56 ಸ್ಥಾನ, ಎನ್ಸಿಪಿ 54 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು