ಅವೈಜ್ಞಾನಿಕ ಬೆಳಕು ಮೀನುಗಾರಿಕೆ ನಿಲ್ಲಿಸಲು ಗಡುವು

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವೈಜ್ಞಾನಿಕ ಬೆಳಕು ಮೀನುಗಾರಿಕೆ ಮತ್ತು ಬುಲ್‌ಟ್ರಾಲ್‌ ಮೀನುಗಾರಿಕೆಗೆ ನಿಷೇಧ ಹೇರಿದ್ದರೂ ಸಹ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಈ ಮೀನುಗಾರಿಕೆ ನಡೆಯುತ್ತಿದ್ದು, ಇದರ ವಿರುದ್ಧ ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ನಾಡದೋಣಿ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವಾರದೊಳಗೆ ಈ ಸಮಸ್ಯೆಯನ್ನು ಪರಿಹಾರ ಮಾಡಬೇಕು. ಇಲ್ಲದಿದ್ದರಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಡದೋಣಿ ಮೀನುಗಾರರ ಸಂಘದ ಬೈಂದೂರು ವಲಯದ ಅಧ್ಯಕ್ಷ ಆನಂದ ಖಾರ್ವಿ, ಈಗ ಅಕ್ರಮ ಮೀನುಗಾರಿಕೆ ಹಾವಳಿ ಹೆಚ್ಚಾಗಿದೆ. ಸರ್ಕಾರ ಆದೇಶಗಳನ್ನು ದಿಕ್ಕರಿಸಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಇದರಲ್ಲಿ ಹೊರರಾಜ್ಯದ ಬಂಡವಾಳ ಶಾಹಿಗಳು ಶಾಮೀಲಾಗಿದ್ದು, ಬಲತ್ಕಾರವಾಗಿ ಅಕ್ರಮ ಮೀನುಗಾರಿಕೆ
ಮಾಡುತ್ತಿದ್ದಾರೆ ಎಂದು ದೂರಿದರು.

ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಅಕ್ರಮ ಮೀನುಗಾರಿಕೆಯಿಂದ ನಾವು ಸಂಕಷ್ಟವನ್ನು ಎದುರಿಸುವಂತಾಗಿದೆ. ಸರ್ಕಾರ, ಜಿಲ್ಲಾಡಳಿತ ಹಾಗೂ ಇಲಾಖೆ ಅಕ್ರಮ ಮೀನುಗಾರಿಕೆ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ, ನಮ್ಮನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರದ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಈ ಬಗ್ಗೆ ಸಚಿವರು, ಡಿಸಿಗೂ ಮನವಿ ಸಲ್ಲಿಸಿದರು ಪ್ರಯೋಜನ ಆಗಿಲ್ಲ.
ಈ ಬಾರಿ ಮೀನುಗಾರಿಕೆ ಆರಂಭವಾಗಿದ್ದೇ ವಿಳಂಬ. ಅದರ ನಡುವೆ ಅಕ್ರಮ ಮೀನುಗಾರಿಕೆ ಹಾವಳಿಯಿಂದ ನಾಡದೋಣಿ ಮೀನುಗಾರರಿಗೆ ಮೀನುಗಳೇ
ಸಿಗುತ್ತಿಲ್ಲ. ಬರೀ ಕೈಯಲ್ಲಿ ವಾಪಸ್ಸು ಬರಬೇಕಾದ ಸ್ಥಿತಿ ಎದುರಾಗಿದೆ.
ಬುಲ್‌ಟ್ರಾಲ್‌ನವರು ನಮ್ಮ ಹೊಟ್ಟೆ ಪಾಡಿಗೆ ಕಲ್ಲು ಹಾಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ನಿಷೇಧಿತ ಬುಲ್‌ಟ್ರಾಲ್‌ ಮೀನುಗಾರಿಕೆ ಬೇರೆ ಬಂದರುಗಳಲ್ಲಿ ನಿಯಂತ್ರಣ ಬಂದಿದ್ದರೂ ಮಲ್ಪೆ ಬಂದರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಮೀನುಗಾರಿಕೆ ಇಲಾಖೆ ತಡೆಯೊಡ್ಡುವ ಕೆಲಸ ಮಾಡುತ್ತಿಲ್ಲ. ಬುಲ್‌ಟ್ರಾಲ್‌ಗೆ ಪರ್ಸಿನ್‌ ಬೋಟ್‌ನವರು ಬೆಂಬಲ ನೀಡುತ್ತಿದ್ದು, ಇದು ನಮಗೆ ದೊಡ್ಡ ಸವಾಲಾಗಿದೆ. 50 ಸಾವಿರ ನಾಡದೋಣಿ ಮೀನುಗಾರರ ಕುಟುಂಬ ಬೀದಿಗೆ ಬಂದಿದೆ. ಸರ್ಕಾರ ಕಾನೂನು ಜಾರಿಗೊಳಿಸಿದರೆ ಮಾತ್ರ ಸಾಲದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ
ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾಡದೋಣಿ ಮೀನುಗಾರರ ಸಂಘದ ಪದಾಧಿಕಾರಿಗಳಾದ ಚಂದ್ರಕಾಂತ್‌
ಕರ್ಕೇರ, ಮಂಜು ಬಿಲ್ಲವ, ಪ್ರವೀಣ್‌ ಶ್ರಿಯಾನ್‌, ಲಕ್ಷ್ಮೀನಾರಾಯಣ, ಸುರೇಶ್‌ ಖಾರ್ವಿ ಇದ್ದರು.

Leave a Reply

Your email address will not be published. Required fields are marked *

error: Content is protected !!