ಹರಿಹರ: ಆರೋಗ್ಯ ಮಾತೆ ಪುಣ್ಯಕ್ಷೇತ್ರಕ್ಕೆ ‘ಕಿರು ಬಸಿಲಿಕ’ ಸ್ಥಾನ


ಹರಿಹರ : ಇತಿಹಾಸ ಪ್ರಸಿದ್ಧ ಮತ್ತು ಕರ್ನಾಟಕದ ಹೃದಯ ಭಾಗದಲ್ಲಿರುವ ಹರಿಹರದ ಆರೋಗ್ಯ ಮಾತೆಯ ಪುಣ್ಯ ಕ್ಷೇತ್ರಕ್ಕೆ ಕಥೋಲಿಕ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ರವರು ಸೆ. 18 ರಂದು “ಕಿರು ಬಸಿಲಿಕ” ಎಂಬ ಸ್ಥಾನಮಾನ ನೀಡುವ ಅಧಿಕೃತ ಘೋಷಣ ಪತ್ರವನ್ನು ಹೊರಡಿಸಿದ್ದಾರೆ ಎಂದು ಹರಿಹರ ಆರೋಗ್ಯ ಮತ್ತು ಪುಣ್ಯ ಕ್ಷೇತ್ರದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ. ಡಾ. ಅಂತೋನಿ ಪೀಟರ್ ತಿಳಿಸಿದ್ದಾರೆ. 
ಇತಿಹಾಸ ಪ್ರಸಿದ್ದ ಹರಿಹರದ ಆರೋಗ್ಯಮಾತೆಯ ಈ ಪುಣ್ಯಕ್ಷೇತ್ರವು ಹತ್ತು ಹಲವಾರು ವಿಶೇಷತೆಗಳನ್ನು ಹೊಂದಿಕೊಂಡಿರುವ ಪುಣ್ಯಕ್ಷೇತ್ರವಾಗಿದೆ. ಇಲ್ಲಿಯವರೆಗೆ ಕರ್ನಾಟಕದ ಎರಡು ಪುಣ್ಯಕ್ಷೇತ್ರಗಳಿಗೆ ಈ ಕಿರು ಬಸಿಲಿಕ ಸ್ಥಾನಮಾನವನ್ನು ನೀಡಲಾಗಿದೆ. 

ಬೆಂಗಳೂರಿನ ಶಿವಾಜಿ ನಗರದ ಮೇರಿ ಮಾತೆ ಪುಣ್ಯಕ್ಷೇತ್ರವನ್ನು 1973 ರಲ್ಲಿ ಹಾಗೂ ಕಾರ್ಕಳ ಅತ್ತೂರಿನ ಸಂತ ಲಾರೆನ್ಸ್ ಪುಣ್ಯಕ್ಷೇತ್ರವನ್ನು 2016 ರಲ್ಲಿ ಕಿರು ಬಸಿಲಿಕ ಎಂದು ಘೋಷಿಸಲಾಗಿದೆ. ಪ್ರಸ್ತುತ ದಕ್ಷಿಣ ಭಾರತದ ಪ್ರಸಿದ್ದ ಹರಿಹರದ ಆರೋಗ್ಯಮಾತೆ ಪುಣ್ಯಕ್ಷೇತ್ರಕ್ಕೆ ಈ ಮಾನ್ಯತೆ ಪ್ರಾಪ್ತವಾಗಿದೆ.


“ಬಸಿಲಿಕ” ಎಂದರೆ ಮಹಾಲಯ ಎಂದರ್ಥ. ಯಾವ ದೇವಾಲಯಗಳು ಇತಿಹಾಸ ಪ್ರಸಿದ್ದವಾಗಿ ಇರುವುದರ ಜೊತೆಗೆ ತನ್ನದೆ ಆದ ಐತಿಹಾಸಿಕ ಹಿನ್ನೆಲೆಯನ್ನು ಶತಮಾನಗಳಿಂದ ಪ್ರಾರ್ಥನೆಗೆ ಯೋಗ್ಯವಾದ ಸ್ವರೂಪ ಅಥವಾ ಸಂತರ ಅವಶೇಷ ಮತ್ತು ಇದಕ್ಕೆ ಸಂಬಂಧಪಟ್ಟ ಮೂಲ ದಾಖಲೆ ಮತ್ತು ಸಾಕ್ಷಿಗಳನ್ನು ಹೊಂದಿಕೊಂಡಿದಿಯೋ ಅವುಗಳನ್ನು ಕಿರು ಬಸಿಲಿಕಗಳನ್ನಾಗಿ ಘೋಷಿಸಲಾಗುತ್ತವೆ.

ಈ ಎಲ್ಲಾ ಅಂಶಗಳನ್ನು ಆಧಾರ ಪೂರ್ವಕವಾಗಿ ದಾಖಲಿಸಿ ಕರ್ನಾಟಕದ ಧರ್ಮಾಧ್ಯಕ್ಷರ ಮಂಡಳಿಯ ಮುಖಾಂತರ ಅಖಿಲ ಭಾರತ ಧರ್ಮಾಧ್ಯಕ್ಷರ ಮಂಡಳಿಗೆ ಅನುಮೋದನೆಗಾಗಿ ಸಲ್ಲಿಸಬೇಕಾಗುತ್ತದೆ. ಇದನ್ನು ಕೂಲಂಕೂಷವಾಗಿ ಆ ಮಂಡಳಿಯು ಪರಿಶೀಲಿಸಿ ಪ್ರಸ್ತಾವನೆಯನ್ನು ಪೋಪ್  ಇವರ ಅಧಿಕೃತ ಅನುಮೋದನೆಗೆ ಸಲ್ಲಿಸಲು ಅನುಮತಿ ನೀಡುತ್ತದೆ.  ಈ ಎಲ್ಲಾ ಪ್ರಕ್ರಿಯೆಗಳು ಆದ ನಂತರ ಪೋಪ್ ರವರು “ಕಿರು ಬಸಿಲಿಕ” ಪಟ್ಟವನ್ನು ನೀಡುತ್ತಾರೆ. ಈ ಎಲ್ಲಾ ಹಂತಗಳನ್ನು ಪೂರೈಸಿರುವ ಕಾರಣ ದಿನಾಂಕ 18.09.2019 ರಂದು ಪೋಪ್ ಫ್ರಾನ್ಸಿಸ್, ಪ್ರಸ್ತುತ ನಮ್ಮ ಈ ಹರಿಹರ ಆರೋಗ್ಯಮಾತೆ ಪುಣ್ಯ ಕ್ಷೇತ್ರಕ್ಕೆ “ಕಿರು ಬಸಿಲಿಕ” ಪಟ್ಟವನ್ನು ನೀಡಿ ಅಶೀರ್ವದಿಸಿದ್ದಾರೆ ಎಂದರು.


ಕಿರು ಬಸಿಲಿಕಾ ಘೋಷಣೆಯ  ಸಂಭ್ರಮಾಚರಣೆಯನ್ನು 15 ಜನವರಿ, 2020ರಂದು ಈ ಪುಣ್ಯಕ್ಷೇತ್ರದ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕಾರ್ಡಿನಲರು, ಕರ್ನಾಟಕದ ವಿವಿಧ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು, ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು, ಧರ್ಮಗುರುಗಳು, ಧರ್ಮಭಗಿನಿಯರು, ವಿವಿಧ ಸ್ಥಳಗಳಿಂದ ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದರ ಸರ್ವ ಸಿದ್ದತೆಯನ್ನು ಶಿವಮೊಗ್ಗದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ ಮತ್ತು ಈ ಪುಣ್ಯಕ್ಷೇತ್ರದ ಪ್ರಧಾನ ಗುರುಗಳಾದ ವಂ ಡಾ. ಅಂತೋನಿ ಪೀಟರ್, ಶಿವಮೊಗ್ಗ ಧರ್ಮಕ್ಷೇತ್ರದ ಯಾಜಕವೃಂದ, ಧರ್ಮಭಗಿನಿಯರು ಮತ್ತು ಹರಿಹರದ ದೈವಪ್ರಜೆ ಒಟ್ಟಾಗಿ ಸೇರಿ ಭಕ್ತಿಯಿಂದ ಮತ್ತು ಸಂಭ್ರಮದಿಂದ ನಡೆಸಲಿದ್ದಾರೆ ಎಂದು ಧರ್ಮಗುರುಗಳು ತಿಳಿಸಿದರು.


ಹರಿಹರ ಪುಣ್ಯಕ್ಷೇತ್ರವಾಗಿ ಬೆಳೆದು ಬಂದ ದಾರಿ :ದಕ್ಷಿಣ ಕಾಶಿಯೆಂದು ವಿಖ್ಯಾತಿ ಹೊಂದಿರುವ ಕರ್ನಾಟಕದ ಮಧ್ಯಭಾಗದಲ್ಲಿರುವ ಹರಿಹರವು ಪುಣ್ಯ ಕ್ಷೇತ್ರದ ಸಂಗಮ ಸ್ಥಾನ ಎಂದರೆ ತಪ್ಪಾಗಲಾರದು. ಕ್ರಿ.ಶ.1800ರ ಅಸುಪಾಸಿನಲ್ಲಿ  ಹಿಂದೆ ಕ್ರೈಸ್ತೇತರ ಒಬ್ಬ ಭಕ್ತ ಇಬ್ಬರು ಮಕ್ಕಳೊಂದಿಗೆ ಬಹು ಸಂಕಷ್ಟದಿಂದ ಜೀವಿಸುತ್ತಿದ್ದ. ಒಂದು ದಿನ ಆತನು ತನ್ನ ಪ್ರಾತ:ಕಾಲದ ಸ್ನಾನ ಹಾಗೂ ಪೂಜಾ ವಿಧಿಗಳನ್ನು ಪೂರೈಸಿಕೊಳ್ಳಲೋಸುಗ ಮೈದುಂಬಿ ಹರಿಯುತ್ತಿರುವ ತುಂಗಾಭದ್ರಾ ನದಿಯಲ್ಲಿ ಇಳಿದು ಸ್ನಾನ ಮಾಡುತ್ತಿದ್ದಾಗ ಅಕಸ್ಮಾತ್ ಕಾಲುಜಾರಿ ಬಿದ್ದು, ಪ್ರಬಲವಾದ ಸುಳಿಯ ಸೆಳೆತಕ್ಕೆ ಸಿಲುಕಿಕೊಂಡು ಪ್ರಾಣ ರಕ್ಷಣೆಗಾಗಿ ಸಹಾಯಕ್ಕಾಗಿ ಬೇಡಿ ಆರ್ತನಾದಗೈದ. ಆದರೆ ಅಂತಹ ನಸುಕಿನ ವೇಳೆ ಆತನ ಸಹಾಯಕ್ಕೆ ಯಾರೂ ಬರಲಿಲ್ಲ. ಆದರೆ ಅದ್ಬುತವಾಗಿ ತೇಲಿಕೊಂಡು ಹೋಗುತ್ತಿದ್ದ ಆರೋಗ್ಯ ಮಾತೆಯ ಪ್ರತಿಮೆ ಆ ಭಕ್ತನ ಜೀವವನ್ನು ರಕ್ಷಿಸಿತು ಎಂದು ಪ್ರತೀತಿ.

ನಂತರ ಮಾತೆಯ ಪ್ರತಿಮೆಯನ್ನು ಮನೆಗೆ ತಂದು ಪ್ರತಿಷ್ಟಾಪಿಸಿ ಪೂಜಿಸತೊಡಗಿದ. ಅಂದಿನಿಂದ ಆತನ ಕುಟುಂಬದಲ್ಲಿ ಉಲ್ಲಾಸವೇ ಮನೆ ಮಾಡಿತು. ಕ್ಷಯರೋಗದಿಂದಲೂ, ಬಾಲ್ಯ ಪಾಶ್ರ್ವವಾಯುವಿನಿಂದಲೂ ಬಳಲುತ್ತಿದ್ದ ಅವನ ಹೆಂಡತಿ ಮತ್ತು ಮಗುವಿಗೂ, ಮಾತೆಯ ಪ್ರತಿಮೆ ಮುಟ್ಟಿದ ಕೂಡಲೇ ಗುಣವಾಯಿತೆಂದು ಪ್ರತೀತಿ. ಕೃತಜ್ಞತಾಪೂರಿತನಾದ ಆತನು ಆಗಲೇ ತನ್ನನ್ನು ಮತ್ತು ತನ್ನ ಕುಟುಂಬವನ್ನು ಆರೋಗ್ಯ ಮಾತೆಯ ಸೇವೆಗಾಗಿ ಕೊಟ್ಟು, ತನ್ನ ಮನೆಯನ್ನು ಮಾತೆಯ ಮಹಿಮೆಗಾಗಿ ಸಮರ್ಪಿಸಿದನು. ಮಾತೆಯನ್ನು ಸತ್ಯಮ್ಮನೆಂದು ಕರೆದು ಇಡೀ ತನ್ನ ಜೀವಮಾನವೆಲ್ಲಾ ಆಕೆಯ ಭಕ್ತನಾಗಿ, ಮಾತೆಗೆ ಭಕ್ತಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟನು. ಅಂದಿನಿಂದ 1962ರ ವರೆಗೆ ಆ ಕ್ರೈಸ್ತೇತರ ಭಕ್ತನ ಚಿಕ್ಕ ಮನೆಯಲ್ಲಿಯೇ ಪ್ರಾರ್ಥನೆಗಳು ನಡೆಯಲಾರಂಭಿಸಿದವು.

ಆ ಅವಧಿಯಲ್ಲಿ ಫ್ರೆಂಚ್ ಗುರುಗಳು ಈ ಚಿಕ್ಕ ಗುಡಿಸಲಿನಲ್ಲಿ ಪ್ರಾರ್ಥನೆ ಮತ್ತು ಪೂಜೆಗಳನ್ನು ನೆರವೇರಿಸುತ್ತಿದ್ದರು. ಇಂದಿಗೂ ಈ ಸ್ಥಳವನ್ನು ಪುಣ್ಯಕ್ಷೇತ್ರದ ಮೂಲಸ್ಥಾನವಾಗಿ ಹಳೇಯ ದೇವಾಲಯ ಎಂದು ಕರೆಯಲಾಗುತ್ತದೆ. ಇಂದಿಗೂ ಆ ಭಕ್ತನ ಸಮಾಧಿ ಸ್ಥಳ ಹಾಗೂ ಪುಟ್ಟ ದೇವಾಲಯ ಇದೆ. ಹರಿಹರ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಡುವ ಪ್ರತಿಯೊಬ್ಬರೂ ಮಾತೆಯ ಅನುಗ್ರಹವನ್ನು ಪಡೆದು ಪುನೀತರಾಗುತ್ತಿದ್ದಾರೆ. ಅಂದಿನಿಂದ ಆರಂಭವಾದ ಆರೋಗ್ಯ ಮಾತೆಯ ಭಕ್ತಿ ಸಮರ್ಪಣೆ ಇಂದಿನವರೆಗೂ ನಿರಂತರವಾಗಿ ಚಾಚೂ ತಪ್ಪದೆ ನಡೆದುಕೊಂಡು ಬರುತ್ತಿದೆ. ದಿನೇ ದಿನೇ ಮಾತೆಯ ಭಕ್ತರ ಸಂಖ್ಯೆ ಅಧಿಕವಾಗುತ್ತಾ ಇದೆ. ಇದಕ್ಕೆ ಕಾರಣ ಮಾತೆಯು ತಮ್ಮನ್ನು ಭಿನ್ನಯಿಸಿ ಬರುವ ಯಾರೊಬ್ಬರನ್ನು ತಳ್ಳಿ ಬಿಡದೇ ಅವರ ಪ್ರಾರ್ಥನೆ ಮತ್ತು ಕೋರಿಕೆಗಳಿಗೆ ತಮ್ಮ ಅನುಗ್ರಹದಿಂದ ಆಶೀರ್ವದಿಸುತ್ತಿದ್ದಾರೆ. ಹರಿಹರದ ಆರೋಗ್ಯ ಮಾತೆಯೆಂದೇ  ಪ್ರಸಿದ್ದಿಯಾಗಿ ಹರಿಹರದಲ್ಲಿ ನೆಲೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!