ಸಕಾಲ ಹೊರಗೆ ವಿತರಿಸಿದರೆ ಕ್ರಿಮಿನಲ್ ಮೊಕದ್ದಮೆ: ಎಡಿಸಿ

ಉಡುಪಿ: ಸಾರ್ವಜನಿಕರಿಗೆ ಸಕಾಲದಲ್ಲಿ ಯೋಜನೆಯಲ್ಲಿ ಅಳವಡಿಸಿರುವ ಸೇವೆಗಳನ್ನು ಸಕಾಲ ತಂತ್ರಾಂಶದ ಮೂಲಕವೇ ಸ್ವೀಕರಿಸಿ, ಸೇವೆಗಳನ್ನು ಒದಗಿಸಬೇಕು, ಸಕಾಲ ತಂತ್ರಾಂಶವನ್ನು ಬೈಪಾಸ್ ಮಾಡಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಎಚ್ಚರಿಕೆ ನೀಡಿದ್ದಾರೆ. ಅವರು, ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಕಾಲ ಸೇವೆಗಳ ಅಧಿನಿಯಮದ ಸಮರ್ಪಕ ಅನುಷ್ಟಾನದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.


ಸರಕಾರವು ಸಾರ್ವಜನಿಕರಿಗೆ ಶೀಘ್ರದಲ್ಲಿ ಅಗತ್ಯ ಸೇವೆಗಳು ದೊರೆಯುವ ಉದ್ದೇಶದಿಂದ ಸಕಾಲ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಿಂದ ಪಡೆಯುವ ದಾಖಲೆಗಳಿಗೆ ಅಧಿಕೃತ ಮಾನ್ಯತೆ ಸಹ ಇರುವುದರಿಂದ, ಸಾರ್ವಜನಿಕರಿಗೆ ಸಕಾಲ ತಂತ್ರಾಂಶದ ಮೂಲಕವೇ ನಿಗಧಿಪಡಿಸಿರುವ ಸೇವೆಗಳನ್ನು ಒಗದಿಸುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿ, ನಿಗಧಿಪಡಿಸಿ ಸೇವೆಗಳನ್ನು ಸಕಾಲ ತಂತ್ರಾಂಶದ ಮೂಲಕ ನೀಡದೇ ಬೈಪಾಸ್ ಮಾಡುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.


ಸಕಾಲ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಇಲಾಖೆಗಳ ಸೇವೆಗಳು ಲಭ್ಯವಿದ್ದು, ಸಕಾಲ ತಂತ್ರಾಂಶದ ಮೂಲಕ ಈ ಸೇವೆಗಳನ್ನು ಒದಗಿಸದೇ ಇದ್ದಲ್ಲಿ ಅಂತಹ ಇಲಾಖೆಯ ಪ್ರಗತಿ ಶೂನ್ಯ ದಾಖಲಾಗಲಿದ್ದು, ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯ 98 ಗ್ರಾಮ ಪಂಚಾಯತ್‍ಗಳು ಸಕಾಲ ತಂತ್ರಾಂಶದ ಮೂಲಕ ಯಾವುದೇ ಸೇವೆ ನೀಡದ ಕಾರಣ ಶೂನ್ಯ ಪ್ರಗತಿಯಾಗಿದ್ದು, ಅಂತಹ ಪಂಚಾಯತ್‍ಗಳಿಗೆ ನೋಟೀಸ್ ನೀಡಲಾಗಿದೆ, ರಾಜ್ಯ ಮಟ್ಟದಲ್ಲಿ ಯಾವುದೇ ಯೋಜನೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ, ಉಡುಪಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ, ಆದರೆ ಸಕಾಲ ಅರ್ಜಿ ಪ್ರಗತಿಯಲ್ಲಿ ಕೆಲವು ತಿಂಗಳಿಂದ ಅಗ್ರಸ್ಥಾನ ಪಡೆಯುವಲ್ಲಿ ವಿಫಲವಾಗಿದೆ ಎಂದು ಸದಾಶಿವ ಪ್ರಭು
ತಿಳಿಸಿದರು.

ಸಕಾಲ ಯೋಜನೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿದ ಮೇಲೆ ಕೊನೆಯ ದಿನಾಂಕದವರೆಗೆ ಕಾಯದೇ ಶೀಘ್ರದಲ್ಲಿ ಸೇವೆಗಳನ್ನು ಒದಗಿಸಿದಲ್ಲಿ ಜಿಲ್ಲೆಯ ರ್ಯಾಂಕಿಂಗ್ ಪ್ರಮಾಣ ಹೆಚ್ಚಾಗಲಿದೆ ಅಲ್ಲದ ಅರ್ಜಿಗಳ ಸ್ವೀಕಾರವನ್ನು ತಂತ್ರಾಂಶದ ಮೂಲಕವೇ ಸ್ವೀಕರಿಸುವಂತೆ ತಿಳಿಸಿದ ಎಡಿಸಿ, ಜಿಲ್ಲೆಯು ಸಕಾಲ ಯೋಜನೆಯಲ್ಲಿ ರಾಜ್ಯಕ್ಕೆ ಮುಂಚೂಣಿ ಸ್ಥಾನ ಪಡೆಯುವಲ್ಲಿ ಎಲ್ಲಾ ಅಧಿಕಾರಿಗಳ ಸಹಕಾರ
ಅಗತ್ಯ ಮತ್ತು ಹೊಸದಾಗಿ ಸಕಾಲ ಯೋಜನೆಗೆ ಸೇರ್ಪಡೆಯಾದ ಇಲಾಖೆಗಳಿಗೆ ತರಬೇತಿಯ ಅಗತ್ಯವಿದ್ದಲ್ಲಿ ಅಥವಾ ಅನುಷ್ಠಾನದಲ್ಲಿ ತೊಂದರೆಯಿದ್ದಲ್ಲಿ ಜಿಲ್ಲಾ ಸಕಾಲ ನೋಡೆಲ್ ಅಧಿಕಾರಿಗಳ ನೆರವು ಪಡೆಯಿರಿ ಎಂದು ಹೇಳಿದರು.


ಎಲ್ಲಾ ಇಲಾಖೆಗಳು ತಮ್ಮ ಇಲಾಖೆಯಲ್ಲಿ, ಸಕಾಲ ಯೋಜನೆಯಲ್ಲಿ ನೀಡಲಾಗುವ ಸೇವೆಗಳ ಕುರಿತ ಫಲಕವನ್ನು ಕಚೇರಿಯ ಮುಂಭಾಗದಲ್ಲಿ ಅಳವಡಿಸುವಂತೆ ತಿಳಿಸಿದರು.
ರಾಜ್ಯದ ಸಕಾಲ ಮಿಶನ್ ಅಧಿಕಾರಿಗಳು ರಾಜ್ಯದ್ಯಾಂತ ಎಲ್ಲಾ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅವರು ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ, ಯಾವುದೇ ಇಲಾಖೆಯಲ್ಲಿ ಸಕಾಲ ಸೇವೆಯನ್ನು ಒದಗಿಸುವಲ್ಲಿ ಲೋಪ ಕಂಡುಬರಬಾರದು ಎಂದು ಎಡಿಸಿ ಹೇಳಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!