ನಕಲಿ ಚಿನ್ನದ ನಾಣ್ಯ: ಮೀನು ವ್ಯಾಪಾರಿ,ಅಕ್ಕಸಾಲಿಗನಿಗೆ ವಂಚನೆ

ಉಡುಪಿ: ನಿಧಿಯಾಗಿ ಸಿಕ್ಕ ಚಿನ್ನದ ನಾಣ್ಯ ರಿಯಾಯತಿ ದರದಲ್ಲಿ ನೀಡುವುದಾಗಿ ನಂಬಿಸಿ ನಕಲಿ ನಾಣ್ಯ ಕೊಟ್ಟು ಲಕ್ಷಾಂತರ ಮೋಸ ಮಾಡಿದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಮೀನು ವ್ಯಾಪಾರಿ ದೂರು ನೀಡಿದ್ದಾರೆ . ತೆಕ್ಕಟ್ಟೆ ನಿವಾಸಿ ಉದಯ ಮೆಂಡನ್ (43) ಲಕ್ಷಾಂತರ ಕಳೆದು ಕೊಂಡಿದಲ್ಲದೆ ಪರಿಚಯದ ಜುವೆಲ್ಲರಿ ಮಾಲಕನು ವಂಚನೆಯ ಬಲೆಗೆ ಬಿದ್ದ ಘಟನೆ ನಡೆದಿದೆ.

ತೆಕ್ಕಟ್ಟೆ ಕೆನರಾ ಬ್ಯಾಂಕ್ ಎದುರುಗಡೆ ಉದಯ ಮೆಂಡನ್ ಮೀನಿನ ಅಂಗಡಿ ಇಟ್ಟುಕೊಂಡಿರುವ ಇವರ ಮೊಬೈಲಿಗೆ 2 ತಿಂಗಳ ಹಿಂದೆ ಮಹೇಶ್ ಎಂಬಾತ ಕರೆ ಮಾಡಿದ್ದು ತನ್ನ ಬಳಿ ನಿಧಿಯಾಗಿ ಸಿಕ್ಕಿದ ಚಿನ್ನವಿದ್ದು ಅದನ್ನು ಕಡಿಮೆ ದರದಲ್ಲಿ ಕೊಡುವೆ ಹೇಳಿದ್ದ. ಆ.20 ರಂದು ಹೊಸಪೇಟೆ ತಲುಪಿ ಮಹೇಶನ ಮೊಬೈಲ್‌ಗೆ ಕರೆ ಮಾಡಿದಾಗ ಹೊಸಪೇಟೆ ಬಸ್ ನಿಲ್ದಾಣದಿಂದ 10 ಕಿ.ಮೀ ದೂರದ ಊರಿಗೆ ಬರಲು ತಿಳಿಸಿದಂತೆ ಸ್ಥಳಕ್ಕೆ ಹೋದಲ್ಲಿ 35 ವರ್ಷ ಪ್ರಾಯದ ಇಬ್ಬರು ವ್ಯಕ್ತಿಗಳಿದ್ದರು. ಅವರು 2 ಚಿನ್ನದ ನಾಣ್ಯ ಸ್ಯಾಂಪಲ್ ಆಗಿ ನೀಡಿದ್ದು ಅದನ್ನು ಪರೀಕ್ಷಿಸಿ ನಂತರ ಹೇಳಿದರೆ ಇನ್ನೂ ಹೆಚ್ಚಿನ ನಾಣ್ಯಗಳನ್ನು ಕೊಡುವುದಾಗಿ ಹೇಳಿದ್ದ.

ಅದರಂತೆಯೇ ಉದಯ್ 2 ಚಿನ್ನದ ನಾಣ್ಯಗಳೊಂದಿಗೆ ಕೋಟ ಶ್ರೀದೇವಿ ಜ್ಯುವೆಲ್ಲರ್ಸ್‌ನ ಸೀತಾರಾಮ ಆಚಾರ್ಯ ಅವರಲ್ಲಿ ಹೋಗಿ ವಿಚಾರವನ್ನು ತಿಳಿಸಿ ಚಿನ್ನದ ನಾಣ್ಯದ ನೈಜತೆಯ ಬಗ್ಗೆ ಪರೀಕ್ಷಿಸಿದಾಗ ಅದು ಅಸಲಿ ಚಿನ್ನದ ನಾಣ್ಯಗಳಾಗಿತ್ತು. ಬಳಿಕ ಮಹೇಶ್ ಮತ್ತೆ ನಿತ್ಯವೂ ಕರೆ ಮಾಡಿ ಉಳಿದ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಹೋಗುವಂತೆ ಒತ್ತಾಯಿಸುತ್ತಿದ್ದ. ಉದಯ್ ತನ್ನ ಬಳಿ ಹಣವಿಲ್ಲ ಎಂದಾಗ ಮುಂಗಡವಾಗಿ 10 ಲಕ್ಷ ನೀಡಿ ಉಳಿದ ೧೫ ಲಕ್ಷವನ್ನು ಎರಡು ತಿಂಗಳ ನಂತರ ಕೊಡುವಂತೆಯೂ ತಿಳಿಸಿದ್ದ. ಈ ವಿಚಾರವನ್ನು ಉದಯ್ ತನ್ನ ಸ್ನೇಹಿತ ಸೀತಾರಾಮ ಆಚಾರ್ಯರಿಗೆ ತಿಳಿಸಿದ್ದು ಇದಕ್ಕೆ ಒಪ್ಪಿಕೊಂಡಿದ್ದು ಇಬ್ಬರೂ ಕೂಡ ತಲಾ ೫ ಲಕ್ಷಗಳಂತೆ ಒಟ್ಟು10 ಲಕ್ಷ ರೂಪಾಯಿ ಹೊಂದಿಸಿಕೊಂಡು ಸೆ.20 ರಂದು ಚಿನ್ನ ಖರೀದಿಸಲು ಚಿತ್ರದುರ್ಗ ಬಸ್ ನಿಲ್ದಾಣಕ್ಕೆ ಹೋಗಿದ್ದರು.


ಮಹೇಶನಿಗೆ ಕರೆ ಮಾಡಿದಾಗ ಮೊದಲಿಗೆ ಮೊಳಕಾಲ್ಮೂರಿನ ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದ. ಅಲ್ಲಿಗೆ ಹೋಗಿ ಪುನಃ ಕರೆ ಮಾಡಿದಾಗ ಮಹೇಶನು ಒಬ್ಬರೆ ಹಣದೊಂದಿಗೆ ಬಂದರೆ ನೀಡುವೆ ಎಂದಿದ್ದ.ಅದಕ್ಕೆ ಒಪ್ಪಿ ಸ್ಥಳಕ್ಕೆ ಹೋದಾಗ ಮಹೇಶ್ ಅಲ್ಲಿಗೆ ಬಂದು ಆತನಲ್ಲಿದ್ದ ಒಂದು ಸಾವಿರಕ್ಕಿಂತ ಹೆಚ್ಚು ಚಿನ್ನದ ನಾಣ್ಯಗಳನ್ನು ತೋರಿಸಿದ್ದ. ಅದನ್ನು ಕಂಡ ಬಳಿಕ ಉದಯ್ ತನ್ನಲ್ಲಿದ್ದ 10 ಲಕ್ಷ ರೂಪಾಯಿಗಳನ್ನು ಮಹೇಶನಿಗೆ ಕೊಟ್ಟು ಚಿನ್ನದ ನಾಣ್ಯಗಳನ್ನು ಪಡೆದುಕೊಂಡು ಮೊಳಕಾಲ್ಮೂರಿನಲ್ಲಿದ್ದ ಸೀತಾರಾಮ ಆಚಾರ್ಯರವರನ್ನು ಕರೆದುಕೊಂಡು ಊರಿಗೆ ಬಂದಿದ್ದರು.

ಊರಿಗೆ ಬಂದು ಪರೀಕ್ಷಿಸಿದಾಗ ನಕಲಿ ನಾಣ್ಯ!
ಇಬ್ಬರು ಮರುದಿನ ಬೆಳಿಗ್ಗೆ ತಾವು ತಂದಿದ್ದ ಚಿನ್ನದ ನಾಣ್ಯಗಳನ್ನು ಸೀತಾರಾಮ ಆಚಾರ್ಯರವರ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅವುಗಳು ನಕಲಿ ಎಂದು ತಿಳಿದಿದ್ದು ತಾವು ಮೋಸ ಹೋಗಿದ್ದರ ಬಗ್ಗೆ ತಿಳಿದು ತಕ್ಷಣ ಉದಯ್ ಅವರು ಆರೋಪಿ ಮಹೇಶನ ಮೊಬೈಲ್ ಗೆ ಕರೆ ಮಾಡಿ ನೀನು ಕೊಟ್ಟ ನಾಣ್ಯಗಳು ನಕಲಿಯಾಗಿದೆ ನನ್ನ ಹಣವನ್ನು ವಾಪಾಸು ಕೊಡಿ ಎಂದು ಕೇಳಿದಾಗ ಆತನು ಮೊಬೈಲ್ ಸಂಪರ್ಕ ಕಡಿತಗೊಳಿಸಿ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಉದಯ್ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!