ಸಾಮಾಜಿಕ ಹೃದಯವಂತಿಕೆಯ ಧರ್ಮಗುರು ಅಗಲಿಕೆ ತುಂಬಲಾರದ ನಷ್ಟ:ಬಿಷಪ್

ಉಡುಪಿ :ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಮತ್ತು ಡೋನ್ ಬೊಸ್ಕೊ ಶಾಲೆಯ ಪ್ರಾಂಶುಪಾಲ ಯುವ ಧರ್ಮಗುರು ವಂ. ಮಹೇಶ್ ಡಿಸೋಜಾರವರ ಅಕಾಲಿಕ ನಿಧನದ ಆಘಾತಕಾರಿ ಸುದ್ದಿ ಎಲ್ಲರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಉಡುಪಿ ಧರ್ಮಪ್ರಾಂತ್ಯ ಘೋಷಣೆಯಾದ ಬಳಿಕ ಉಡುಪಿ ಧರ್ಮಪ್ರಾಂತ್ಯದ ಪ್ರಪ್ರಥಮ ಧರ್ಮಗುರುಗಳಾಗಿ 2013 ಎಪ್ರಿಲ್ 15 ರಂದು ಗುರುದೀಕ್ಷೆಯನ್ನು ಸ್ವೀಕರಿಸಿದ ವಂ. ಮಹೇಶ್ ಡಿಸೋಜಾ, ಮೂಲತಃ ಮೂಡುಬೆಳ್ಳೆಯವರಾಗಿದ್ದು, 1983 ಮಾ. 30 ರಂದು ಫ್ರೆಡ್ರಿಕ್ ಮತ್ತು ಮೆಟಿಲ್ಡಾ ಡಿಸೋಜಾ ದಂಪತಿಯ ಮೂವರು ಗಂಡು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದರು.

2012 ರಿಂದ ಮಿಲಾಗ್ರಿಸ್ ಕೆಥೆಡ್ರಲ್ ಕಲ್ಯಾಣಪುರ ಮತ್ತು ಮೌಂಟ್ ರೋಸರಿ ಇಗರ್‍ಜಿ ಸಂತೆಕಟ್ಟೆಯಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುವುದರ ಜೊತೆಗೆ 2013ರಿಂದ 2016 ರ ಅವಧಿಯಲ್ಲಿ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ಧರ್ಮಪ್ರಾಂತ್ಯದ ಪ್ರಪ್ರಥಮ ಧರ್ಮಗುರು ಎಂಬ ಹೆಗ್ಗಳಿಕೆ ಹೊಂದಿದ ಫಾ. ಮಹೇಶ್‌ರವರದು ನಿಜಕ್ಕೂ ಅದ್ಭುತವಾದ ಪ್ರತಿಭೆ. ತಾನು ಬೆಳೆಯುವುದರೊಂದಿಗೆ ಹಲವರನ್ನು ಬೆಳೆಸಿದ ಹಿರಿಮೆ ಅವರದು. ಕೇವಲ ಆ ದೇವಾಲಯದಲ್ಲಿ ಮಾತ್ರವಲ್ಲದೆ ಹಲವಾರು ದೇವಾಲಯಗಳಲ್ಲಿ ಇವರ ಪ್ರತಿಭೆಗೆ ವಿಶೇಷ ಮನ್ನಣೆ ದೊರಕಿತ್ತು. ಪೂಜಾ ವಿಧಿಗಳ ಸಮಯ ಎಲ್ಲರನ್ನೂ ಜೊತೆಗೂಡಿಸಿ ಅದ್ಭುತವಾದ ಭಕ್ತಿಗೀತೆಗಳನ್ನು ಹಾಡುವುದರ ಜೊತೆಗೆ, ಗಾಯನ ವೃಂದಕ್ಕೆ ಜೀವ ತುಂಬಿದ ಮಹಾನ್ ಚೇತನ ಅವರದು.

2016 ಮೇ 26 ರಿಂದ ಶಿರ್ವ ಡೊನ್ ಬೊಸ್ಕೊ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ಹಾಗೂ ಶಿರ್ವ ಸಾವುದ್ ಅಮ್ಮನವರ ದೇವಾಲಯದ ಸಹಾಯಕ ಧರ್ಮಗುರುಗಳಾಗಿ ನಿಯುಕ್ತಿಗೊಂಡ ಬಳಿಕ ಇನ್ನಷ್ಟು ಉನ್ನತಿಯನ್ನು ಸಾಧಿಸಿದರು. ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಡೋನ್ ಬೋಸ್ಕೊ ಸಿಬಿಎಸ್‌ಇ ಶಾಲೆಯ ಮಾನ್ಯತೆ ಪಡೆಯುವಲ್ಲಿ ಮತ್ತು ಸಂಸ್ಥೆಯ ಉನ್ನತೀಕರಣ ಕೆಲಸದಲ್ಲಿ ತಮ್ಮನ್ನೆ ತೊಡಗಿಸಿ, ಶಾಲಾ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿದ ಅವರ ನಿಸ್ವಾರ್ಥ ಸೇವಾ ಮನೋಭಾವಾ ವಿವರಣಾತೀತ. ಅವರು ತಮ್ಮ ವಿನಯಶೀಲತೆಯಿಂದಾಗಿ ಸಕಲ ವಿದ್ಯಾರ್ಥಿಗಳ ಮತ್ತು ಹೆತ್ತವರ ಪ್ರೀತಿಗೆ ಪಾತ್ರರಾಗಿದ್ದರು.

ಮಾನವೀಯ ಕಳಕಳಿ, ಉದಾತ್ತ ಮನಸ್ಸು, ಸಕಲರೊಡನೆ ಬೆರೆತು ಸರ್ವರನ್ನು ಹುರಿದುಂಬಿಸುವ ನಿಷ್ಕಲ್ಮಷ ಮನಸ್ಸು, ಜನಪರ ಕಾಳಜಿ, ಸಾಮಾಜಿಕ ಹೃದಯವಂತಿಕೆ, ತಾವು ಸೇವೆಗೈಯುವ ಸಂಸ್ಥೆಗಳನ್ನು ಯಶಸ್ಸಿನೆಡೆ ಕೊಂಡೊಯ್ಯುವ ಅದ್ಭುತ ಛಲಗಾರಿಕೆ ಇವರದು. ಉತ್ತಮ ಶಿಕ್ಷಕ, ಆಡಳಿತಗಾರ, ಅಪ್ರತಿಮ ನಾಯಕ, ಸಹ್ರದಯಿ ಧರ್ಮಗುರು ವಂ. ಮಹೇಶ್ ನಮ್ಮೆಲ್ಲರನ್ನು ಅಗಲಿದ್ದಾರೆ.

ಅಕ್ತೋಬರ್11 ರಂದು ರಾತ್ರಿ ಕಛೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಪಾರ್ಥಿವ ಶರೀರ ಪತ್ತೆಯಾಗಿದ್ದು, ಸರ್ವರಿಗೂ ಆಘಾತ ತಂದಿರುವ ವಿಚಾರ. ಭಗವಂತನು ವಂ. ಮಹೇಶ್ ಡಿಸೋಜಾರವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಮತ್ತು ಅವರ ಅಕಾಲಿಕ ನಿಧನದಿಂದ ಶೋಕತಪ್ತರಾದ ಅವರ ಕುಟುಂಬವರ್ಗಕ್ಕೆ, ಡೋನ್ ಬೋಸ್ಕೊ ಕುಟುಂಬಕ್ಕೆ ಹಾಗೂ ಎಲ್ಲಾ ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ.

ಅವರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೊ ಮತ್ತು ಸಕಲ ಗುರುವೃಂದದವರು ಸಂತಾಪ ಸೂಚಿಸಿದ್ದಾರೆ.

ಮೃತರ ಅಂತಿಮ ಸಂಸ್ಕಾರವು ಅಕ್ತೋಬರ್ 15 ಮಂಗಳವಾರ ಶಿರ್ವ ಇಗರ್ಜಿಯಲ್ಲಿ ಸಂಜೆ 3 ಗಂಟೆಗೆ ನಡೆಯಲಿರುವುದು ಉಡುಪಿ ಧರ್ಮಪ್ರಾಂತ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!