ಕಾಂಗ್ರೆಸ್ ಮುಳುಗುತ್ತಿರುವ ಹಡಗು:ಗೃಹ ಸಚಿವ ಬೊಮ್ಮಾಯಿ
ಉಡುಪಿ: ಬಿಜೆಪಿ ಜನರ ಬದುಕಿಗಾಗಿ ರಾಜಕಾರಣ ಮಾಡಿದ್ದರೆ, ಕಾಂಗ್ರೆಸ್ ಕೇವಲ
ಅಧಿಕಾರಕ್ಕಾಗಿ ರಾಜಕಾರಣ ಮಾಡಿದೆ. ಅದರ ಪರಿಣಾಮವಾಗಿ ಇಂದು ಕಾಂಗ್ರೆಸ್ ಅಧಃಪತನದ ಕಡೆಗೆ ಸಾಗುತ್ತಿದ್ದು, ಯಾವುದೇ ರಾಜ್ಯದಲ್ಲೂ ಎದ್ದು ನಿಲ್ಲುವ ಸ್ಥಿತಿಯಲ್ಲಿ ಇಲ್ಲ. ಅದು ಮುಳುಗುತ್ತಿರುವ ಹಡಗು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೇವಲ ಅಧಿಕಾರ ರಾಜಕಾರಣ ಶಾಶ್ವತವಾಗಿರುವುದಿಲ್ಲ. ಅದಕ್ಕೆ ಕಾಂಗ್ರೆಸ್ ಇಂದಿನ ಸ್ಥಿತಿ ಸ್ಪಷ್ಟ ಉದಾಹರಣೆಯಾಗಿದೆ. ಪ್ರಬಲ ವಿರೋಧ ಪಕ್ಷ ಇದ್ದಾಗ ಕೆಲಸ ಮಾಡುವುದು ಒಂದು ರೀತಿಯ ಸವಾಲಾಗಿದ್ದರೆ, ವಿರೋಧ ಪಕ್ಷಗಳು ದುರ್ಬಲ ಆಗಿದ್ದಾಗ ನಮ್ಮ ನೈತಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗಾಗಿ ಇಂದು ನಮ್ಮ ಜವಾಬ್ದಾರಿ ಇನ್ನಷ್ಟು ಹಿಮ್ಮಡಿಗೊಂಡಿದೆ ಎಂದರು.
ದೀನ್‌ದಯಾಳ್ ಉಪಾಧ್ಯಾರು, ವಾಜಪೇಯಿ ಹಾಗೂ ಅಡ್ವಾಣಿಯವರು ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಅವರು ಜನರು ಹಾಗೂ ದೇಶದಹಿತದೃಷ್ಟಿಯಿಂದ ರಾಜಕಾರಣ ಮಾಡಿದ್ದರು. ಇಂದು ಬಿಜೆಪಿ ಪಕ್ಷ ಆ ರಾಜಕಾರಣದ ಮೂಲಕ ಇಡೀ ರಾಷ್ಟ್ರದಲ್ಲಿ ಅಧಿಕಾರವನ್ನು ಪಡೆದುಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿದೆ. ನಾವು ಯಾವ ವಿಚಾರಧಾರ ಮತ್ತು ಆದರ್ಶಗಳನ್ನು ನಂಬಿ ರಾಜಕಾರಣ ಮಾಡಿದ್ದೆಯೋ ಅಥವಾ ಪಕ್ಷ ಸಂಘಟನೆ ಮಾಡಿದ್ದೇವೋ.ಅವುಗಳನ್ನು ಅಧಿಕಾರಕ್ಕೆ ಬಂದ ನಂತರ ಅನುಷ್ಠಾನಕ್ಕೆ ತರುವ ನೈತಿ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಶಾಸಕರಾದ ಕೆ. ರಘುಪತಿ ಭಟ್, ಸುನಿಲ್ ಕುಮಾರ್, ಲಾಲಾಜಿ ಆರ್. ಮೆಂಡನ್, ಬಿ.ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ದಿನಕರ ಬಾಬು, ಕುತ್ಯಾರು ನವೀನ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಉದಯಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ಸಂಧ್ಯಾ ರಮೇಶ್, ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.