ಹಾಸ್ಟೆಲ್ ವಾಶ್‍ರೂಮಿನಲ್ಲಿ ಪಿಎಚ್‍ಡಿ ವಿದ್ಯಾರ್ಥಿನಿಯ ಶವ ಪತ್ತೆ

ಹೈದರಾಬಾದ್: 29 ವರ್ಷದ ಪಿಎಚ್‍ಡಿ ವಿದ್ಯಾರ್ಥಿನಿ ಹೈದರಾಬಾದ್ ವಿಶ್ವವಿದ್ಯಾಲಯದ ಹಾಸ್ಟೆಲಿನ ವಾಶ್ ರೂಮಿನಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಖರಗ್‍ಪುರದ ದೀಪಿಕಾ ಮಹಾಪಾತ್ರ(29) ಮೃತ ವಿದ್ಯಾರ್ಥಿನಿ. ಈಕೆ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಹಿಂದಿಯಲ್ಲಿ ಪಿಎಚ್‍ಡಿ ಸಂಶೋಧನೆ ಮಾಡುತ್ತಿದ್ದಳು. ಸೋಮವಾರ ದೀಪಿಕಾ ಸುಮಾರು ಬೆಳಿಗ್ಗೆ 8 ಗಂಟೆಗೆ ಹಾಸ್ಟೆಲಿನ ವಾಶ್ ರೂಮಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು ಎಂದು ವೈದ್ಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೀಪಿಕಾಳನ್ನು ನೋಡಿದ ಸ್ನೇಹಿತರು ತಕ್ಷಣ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅವರು ಬೆಳಗ್ಗೆ 8:30ಕ್ಕೆ ಗಚಿಬೌಲಿಯ ಸಿಟಿಜನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ದೀಪಿಕಾ ಅದಾಗಲೇ ಮೃತಪಟ್ಟಿದ್ದಳು. ವಿದ್ಯಾರ್ಥಿಯ ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮೃತ ವಿದ್ಯಾರ್ಥಿನಿಯ ವೈದ್ಯಕೀಯ ದಾಖಲಾತಿಯಲ್ಲಿ ಆಕೆ ನರ ಸಂಬಂಧಿತ ಕಾಯಿಲೆ ಮತ್ತು ಮೂರ್ಛೆರೋಗದಿಂದ ಬಳಲುತ್ತಿದ್ದಳು ಎಂದು ವರದಿಯಾಗಿದೆ. ಜೊತೆಗೆ ಅದಕ್ಕೆ ನಿರಂತರ ಔಷಧಿ ತೆಗೆದುಕೊಳ್ಳುತ್ತಿದ್ದಳು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಈ ಕುರಿತು ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಾವಿನ ಬಗ್ಗೆ ಇದುವರೆಗೂ ಯಾವುದೇ ಅನುಮಾನ ವ್ಯಕ್ತವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿನಿ ಮೂರ್ಛೆರೋಗದಿಂದ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ. ಸದ್ಯಕ್ಕೆ ವಿದ್ಯಾರ್ಥಿಯನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಹೀಗಾಗಿ ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಇದೇ ವಿಶ್ವವಿದ್ಯಾಲಯದಲ್ಲಿ ಒಡಿಶಾದ ಮತ್ತೊಬ್ಬ ಪಿಎಚ್‍ಡಿ ವಿದ್ಯಾರ್ಥಿನಿ ಡೆಂಗ್ಯೂ ಕಾಯಿಲೆಯಿಂದ ಮೃತಪಟ್ಟಿದ್ದಳು. ಒಡಿಶಾದ ಕಲಹಂಡಿ ಮೂಲದ ರಶ್ಮಿ ರಂಜನ್ ಸುನಾ ಜ್ವರ ಮತ್ತು ವಾಂತಿ ಎಂದು ವಿಶ್ವವಿದ್ಯಾಲಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಿಮಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಯು ವಿದ್ಯಾರ್ಥಿನಿಯ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಸಿಟಿಜನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅನೇಕ ಅಂಗಾಂಗ ವೈಫಲ್ಯದಿಂದಾಗಿ ಸುನಾ ಮೃತಪಟ್ಟಿದ್ದಳು.

ವಿಶ್ವವಿದ್ಯಾನಿಯದ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಇಬ್ಬರು ವಿದ್ಯಾರ್ಥಿನಿಯರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು. ಮನೆಗೆ ಇವರೇ ಆಧಾರವಾಗಿದ್ದರು. ಆದರೆ ವೈದ್ಯಕೀಯ ನಿರ್ಲಕ್ಷ್ಯದಿಂದ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯರ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರವನ್ನು ಕೊಡಬೇಕು ಎಂದು ಪ್ರತಿಭಟಿಸಿದ್ದರು. ಕೊನೆಗೆ ವಿಶ್ವವಿದ್ಯಾಲಯವು ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಧನ ನೀಡಿತ್ತು.

Leave a Reply

Your email address will not be published. Required fields are marked *

error: Content is protected !!