ಅತೃಪ್ತರಿಗೆ ಬಿಗ್ ರಿಲೀಫ್ – ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ
ನಾನು ಅನರ್ಹತೆ ಪ್ರಕರಣ ಕೈ ಬಿಡುವಂತೆ ಹೇಳಿಲ್ಲ. ಇಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಅನಹರ್ತತೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆರ್ಟಿಕಲ್ 191/2 ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಈ ಹಕ್ಕನ್ನು ತಡೆಯಲು ಸ್ಪೀಕರ್ ಅವರಿಗೆ ಸಾಧ್ಯವಿಲ್ಲ. ಶಾಸಕರು ಇಷ್ಟಪಟ್ಟಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರ್ವ ಸ್ವತಂತ್ರರು. ಎಲ್ಲ ಶಾಸಕರು ನಿಯಮಬದ್ಧವಾಗಿಯೇ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಈ ಕೂಡಲೇ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮುಕುಲ್ ರೋಹಟಗಿ ವಾದ ಮಂಡಿಸಿದ್ದರು.
ನಿಯಮದ ಪ್ರಕಾರ ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಬೇಕು. ಖುದ್ದು ಹಾಜರಾಗದೇ ರಾಜೀನಾಮೆ ನೀಡಿದರೆ ಆರ್ಟಿಕಲ್ 190ರ ಅನ್ವಯ ಆಗಲ್ಲ. ವಿಚಾರಣೆಗೂ ಕೂಡ ಶಾಸಕರು ಖುದ್ದು ಹಾಜರಾಗಬೇಕು. ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಪೂರ್ಣ ಮಾಡಬೇಕಾಗಿರುವ ಕಾರಣ ಒಂದೇ ರಾತ್ರಿಯಲ್ಲಿ ವಿಚಾರಣೆ ಮುಗಿಸಲು ಸಾಧ್ಯವಿಲ್ಲ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಾಸಕರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಜುಲೈ 11ರಂದು 15 ಶಾಸಕರಲ್ಲಿ 11 ಮಂದಿ ಖುದ್ದು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಉಳಿದ ನಾಲ್ವರು ಇದೂವರೆಗೂ ಬಂದಿಲ್ಲ.
ಫೆಬ್ರವರಿಯಲ್ಲಿ ಇಬ್ಬರು ಶಾಸಕರ ಅನರ್ಹತೆ ವಿಚಾರಣೆ ಪ್ರಕ್ರಿಯೆ ಶುರುವಾಗಿದೆ. ಜುಲೈ 6ರಂದು ಶಾಸಕರು ರಾಜೀನಾಮೆ ನೀಡಲು ಹೋದಾಗ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಶಾಸಕರು ಮೊದಲು ಸ್ಪೀಕರ್ ಬಳಿ ಸಮಯ ಕೇಳಿರಲಿಲ್ಲ. ಅನರ್ಹತೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಹಲವು ಅನರ್ಹತೆ ಪ್ರಕರಣಗಳನ್ನು ಪರಿಶೀಲಿಸಿ ತೀರ್ಪು ನೀಡಬೇಕಿದೆ. ಹಾಗಾಗಿ ತಡವಾಗ್ತಿದೆ. ನಾನು ಬಹಳ ಗಟ್ಟಿಯಾಗಿ ಶಾಸಕರು ಅನರ್ಹರಾಗುತ್ತಾರೆಂದು ಹೇಳುತ್ತೇನೆ. ಇವತ್ತಲ್ಲ ನಾಳೆ ಅನರ್ಹತೆ ಆಗಲೇಬೇಕು. ಅನರ್ಹತೆ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗ ಆಗಬಾರದು. ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣವನ್ನು ಸ್ಪೀಕರ್ ಇತ್ಯರ್ಥ ಮಾಡುತ್ತಾರೆ. ಶುಕ್ರವಾರ ನೀಡಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದರು.
ಶಾಸಕರ ರಾಜೀನಾಮೆಗಳಿಗೆ ಕಾರಣಗಳೇ ಇಲ್ಲ. ಶಾಸಕರು ನೀಡುವ ಕಾರಣಗಳು ಸ್ಪೀಕರ್ ಅವರಿಗೆ ತೃಪ್ತಿಯಾದ್ರೆ ಮಾತ್ರ ರಾಜೀನಾಮೆ ಸಾಂವಿಧಾನಿಕವಾಗಲಿದೆ. 10 ರಿಂದ 13 ಶಾಸಕರು ರಾಜೀನಾಮೆ ನೀಡಲು ಸರ್ಕಾರ ಕೆಡವಲು ಬೇಟೆಗೆ ಹೊರಟಿದ್ದಾರೆ. ರಾಜಕೀಯ ಆಟದಲ್ಲಿ ಕೋರ್ಟ್ ಮಧ್ಯಪ್ರವೇಶಕ್ಕೆ ಶಾಸಕರು ಬಯಸಿದ್ದಾರೆ ಎಂದು ತಮ್ಮ ವಾದದಲ್ಲಿ ಮಂಡಿಸಿದ್ದರು.