ಭುವನೋತ್ಕರ್ಷ
ಕರಾವಳಿಯ ಕಡಲಿಗೆ ಎಲ್ಲರನ್ನೂ ಆಕರ್ಷಿಸುವ ಅದ್ಭುತಗುಣವಿದೆ. ಈ ಕಡಲ ಸೊಬಗನ್ನು ಸವಿದು ಹೋಗಲು ನಿತ್ಯವೂ ಬಂದು ಹೋಗುವವರು ಸಾವಿರ..ಸಾವಿರ..ಆದರೆ ಈ ಕಡಲ ತಟದಲ್ಲಿ ಕಡಲಿನಷ್ಟೇ ವಿಶಾಲ ಮನಸ್ಸಿನ ಹತ್ತಾರು ಸಮಾಜ ಮುಖಿ ಮನಸ್ಸುಗಳೂ ಇವೆ. ಉಡುಪಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಇವರ ಕೊಡುಗೆ ಅಪಾರ.
ಹಾಜಿ ಅಬ್ದುಲಾ ಅವರಂತ ಮಹಾನ್ ಚೇತನಗಳನ್ನು ಲೋಕಮುಖಕ್ಕೆ ಪರಿಚಯಿಸಿದ ನೆಲ ಉಡುಪಿ. ದಾನಗುಣ ಸಮಾಜಪರ ಚಿಂತನೆ ಇಲಿನ್ಲ ನೀರುನೆಲ ಗಾಳಿಯಲ್ಲೇ ಬೆರೆತಿದೆ. ಆ ಶ್ರೇಷ್ಟ ಪರಂಪರೆಯ ತೇರನ್ನು ಇಂದಿಗೂ ಅನವರತ ಎಳೆಯುತ್ತಿರುವ ಹತ್ತಾರು ದಾನಿಗಳ ಕೊಡುಗೈಗಳು ಉಡುಪಿಯಲ್ಲಿವೆ. ಗಳಿಸಿದ್ದರಲ್ಲಿ ಒಂದಿಷ್ಟು ಉಳಿಸಿ ಸಮಾಜಕ್ಕೆ ಅರ್ಪಿಸುವ ಈ ಹಿರಿಮನಸ್ಸುಗಳಿಂದಾಗಿ ನಮ್ಮೂರ ಧರ್ಮ ಸಂಸ್ಕೃತಿ ಕಲೆ ಸಾಹಿತ್ಯ ಸಭೆ ಸಮಾರಂಭಗಳು ಎಳ್ಳಷ್ಟೂ ಕುಂದುಂಟಾಗದೆ ಯೋಚನೆಗೂ ಮೀರಿ ಯಶಸ್ವಿಯಾಗಿ ನಡೆಯುತ್ತಿವೆ. ಅಂತಹ ಹಿರಿಯರ ಪೈಕಿ ಒಂದು ಹೆಸರು ಭುವನೇಂದ್ರ ಕಿದಿಯೂರು…
ನೀವು ಉಡುಪಿಗೆ ಬಂದು ಬಸ್ಸಿಳಿದರೆ ನಿಮಗೆ ಕಿದಿಯೂರು ಹೊಟೇಲಿನ ಹೊಸ್ತಿಲು ಕಾಣುತ್ತೆ. ಒಳ ಹೊಕ್ಕುತ್ತಿದ್ದಂತೆ ಕಡೆಗೋಲು ಕೃಷ್ಣನ ಮಂಗಳಮೂರ್ತಿ…ಮಂದ ದನಿಯಲ್ಲಿ ಮೊಳಗುತ್ತಿರುವ ಶಾಸ್ತ್ರೀಯ ಹಾಡುಗಳು.. ಘಮಘಮಿಸುವ ಉಡುಪಿ ಸ್ಪೆಶಲ್ ಸಾಂಬಾರಿನ ಸುಗಂಧ…ಮತ್ತು ಅಲ್ಲೊಂದು ನಗುಮೊಗದ ಶುಭ್ರ ಶ್ವೇತವಸ್ತ್ರ ಧರಿಸಿರುವ ಹಿರಿಜೀವ. ಅವರನ್ನು ಕಂಡಕೂಡಲೆ ಗೌರವದಿಂದ ಕೈಮುಗಿಯಬೇಕು ಎಂಬಂತ ಗಾಂಭೀರ್ಯ..
ಭುವನೇಂದ್ರ ಕಿದಿಯೂರು ಅವರು ಮೂಲತಃ ಪಡುವಣದ ಕಡಲತಡಿಯಲ್ಲಿರುವ ಕಿದಿಯೂರು ಗ್ರಾಮದವರು. ಮೊಗವೀರ ಕುಟುಂಬದ ದಿವಂಗತ ಸೂರಮ್ಮ ಅವರ ಮಗನಾಗಿ ಜನಿಸಿದ ಭುವನೇಂದ್ರ ಅವರದ್ದು ತುಂಬು ಸಂಸಾರ.
ಬೇಸಾಯವನ್ನೇ ನಂಬಿಕೊಂಡಿದ್ದ ಭುವನೇಂದ್ರರ ಕುಟುಂಬದಲ್ಲಿ ಮನೆ ತುಂಬ ಮಕ್ಕಳು. ರೆಕ್ಕೆ ಬಲಿಯುತ್ತಿದ್ದಂತೆ ಯುವಕರೆಲ್ಲಾ ಹಾರಿ ಸ್ವಾವಲಂಬನೆಯ ಬದುಕಿ ಕಟ್ಟಿಕೊಳ್ಳೋದು ಆ ಕಾಲದ ಅನಿವಾರ್ಯತೆಯಾಗಿತ್ತು. ಹೀಗೆ ಮುಂಬೈಗೆ ಪಯಣಿಸಿದ ಭುವನೇಂದ್ರರು ಅಲ್ಲಿ ತಮ್ಮ ಆತ್ಮೀಯರೊಬ್ಬರ ನೆರವಿನಿಂದ ಮಸ್ಕತ್ ತೆರಳುವ ನಿರ್ಧಾರ ಮಾಡಿದರು.
ಅದು ಕೊಲ್ಲಿ ದೇಶಗಳು ತಮ್ಮೊಡಲಲ್ಲಿ ಅವಿತಿದ್ದ ಕಲ್ಲೆಣ್ಣೆಯನ್ನು ಬಗೆದು ಜಗತ್ತಿಗೆಲ್ಲಾ ಹಂಚಿ ಡಾಲರ್ ಎಣಿಸುತ್ತಿದ್ದ ಕಾಲ. ಒಂಟೆಗಳ ಓಡಾಟಕ್ಕಷ್ಟೇ ಸೀಮಿತವಾಗಿದ್ದ ಮರುಭೂಮಿಯಲ್ಲಿ ಗಗನ ಚುಂಬಿ ಕಟ್ಟಡಗಳು ತಲೆ ಎತ್ತಲು ಆರಂಭಿಸಿದವು. ಕಟ್ಟಡ ನಿರ್ಮಾಣಕ್ಷೇತ್ರದಲ್ಲಿ ವಿಪುಲ ಅವಕಾಶಗಳು ತೆರೆದುಕೊಂಡಿದ್ದವು.
ಮಸ್ಕತ್ತಿಗೆ ತೆರಳಿ ಕಟ್ಟಡ ನಿರ್ಮಾಣ ರಂಗದಲ್ಲಿ ಕೆಲಸಕ್ಕೆ ಸೇರಿಕೊಂಡ ಭುವನೇಂದ್ರರಿಗೆ ಮೊದಲು ಸಿಕ್ಕಿದ್ದು ಶಾಪ್ ಕೀಪರ್ ಕೆಲಸ. ಕಟ್ಟಡ ನಿರ್ಮಾಣದ ಕಾರ್ಯಕ್ಕೆ ಬೇಕಾದ ವಸ್ತುಗಳನ್ನು ಕಾರ್ಮಿಕರಿಗೆ ಹಂಚಿ ಲೆಕ್ಕ ಬರೆದಿಡೋದು ಇವರ ಕೆಲಸವಾಗಿತ್ತು. ಅಲ್ಲೇ ಭುವನೇಂದ್ರರು ಹಾರ್ಡ್‌ವೇರ್ ಉದ್ಯಮಕ್ಕೆ ಮಸ್ಕತ್‌ನಲ್ಲಿರುವ ವಿಪುಲ ಅವಕಾಶವನ್ನು ಗ್ರಹಸಿಕೊಂಡಿದ್ದು. ಮಸ್ಕತ್ತಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಒಳಹೊರಗನ್ನು ಅಭ್ಯಸಿಸುತ್ತಲೇ ಹಂತ ಹಂತವಾಗಿ ಬೆಳೆದ ಭುವನೇಂದ್ರರು ನೋಡು ನೋಡುತ್ತಿದ್ದಂತೆ ತನ್ನದೇ ಹಾರ್ಡ್‌ವೇರ್ ಉದ್ಯಮವನ್ನು ಆರಂಭಿಸಿಬಿಟ್ಟರು.
ಪೈಪ್ ಅಂಗಡಿ ಸ್ಟೆಶನರಿ ಹೀಗೆ ಹಲವಾರು ರೀತಿಯ ಉದ್ಯಮಗಳನ್ನು ಭುವನೇಂದ್ರರು ಕಟ್ಟಿನಿಲ್ಲಿಸಿದರು. ಬೆಂಬಿಡದೆ ಸಾಧಿಸುವ ಹಠ ಮತ್ತು ಗೆದ್ದೇ ತೀರಬೇಕು ಎಂಬ ಅಚಲ ಶ್ರದ್ಧೆ ಇದ್ದರೆ ಯಶಸ್ಸು ನಿಮ್ಮ ಚರಣ ಚುಂಬಿಸುತ್ತೆ ಅನ್ನೋದಿಕ್ಕೆ ಭುವನೇಂದ್ರ ಕಿದಿಯೂರು ಅವರೇ ಸಾಕ್ಷಿ. ಕಾರ್ಮಿಕ ಕೆಲಸಕ್ಕೆ ಮೂರು ಸಾವಿರ ರೂಪಾಯಿ ಖರ್ಚು ಮಾಡಿ ಮಸ್ಕತ್ತಿಗೆ ತೆರಳಿದ್ದ ಭುವನೇಂದ್ರ ಕಿದಿಯೂರು ಅವರು ಮರಳಿ ತನ್ನ ಹುಟ್ಟೂರಿಗೆ ಕಾಲಿಡುವಾಗ ಐದಾರು ಉದ್ಯಮಗಳ ಒಡೆಯರಾಗಿದ್ದರು. ಮುಂದೆ ತಡಮಾಡಲಿಲ್ಲ. ತನ್ನ ಕುಟುಂಬದ ಹತ್ತಾರು ಯುವಕರಿಗೆ ಮಸ್ಕತ್ತಿನಲ್ಲಿ ಬದುಕು ಕಟ್ಟಿಕೊಟ್ಟರು.ಊರಿನ ೭೦ಕ್ಕೂ ಅಧಿಕ ಯುವಕರು ಭುವನೇಂದ್ರ ಕಿದಿಯೂರು ಅವರ ಕೃಪಾಶೀರ್ವಾದದಿಂದ ವಿದೇಶಿ ಉದ್ಯೋಗ ಗಳಿಸಿಕೊಂಡರು. ಮಸ್ಕತ್ ಮತ್ತು ಉಡುಪಿ ನಡುವಿನ ಕಿದಿಯೂರು ಅವರ ಓಡಾಟ ಮಾಮೂಲಾಗಿ ಬಿಟ್ಟಿತ್ತು.
ಆಗಲೇ ಕಿದಿಯೂರು ಅವರ ಬದುಕಿನಲ್ಲಿ ಬಾಳ ಸಂಗಾತಿಯಾಗಿ ಹೀರಾ ಅವರು ನಡೆದು ಬಂದಿದ್ದು. ಭುವನೇಂದ್ರ ಕಿದಿಯೂರು ಅವರ ಸಂಬಂಧಿಯೇ ಆದ ಹೀರಾ ಅವರು ಬಾಲ್ಯದಿಂದಲೂ ಜೊತೆಗೆ ಆಡಿ ಬೆಳೆದವರು. ಶಿಕ್ಷಕಿಯಾಗಬೇಕು ಎಂಬ ಹಂಬಲವಿದ್ದ ಹೀರಾ ಅವರು ಬಿಕಾಂ ಬಿಎಡ್ ಪೂರೈಸಿ ಎಂಎ ಕೂಡ ಮಾಡಿದ್ದಾರೆ. ಗೋವಿಂದ ಕಲ್ಯಾಣ ಮಂಟಪದಲ್ಲಿ ಇವರಿಬ್ಬರ ಮದುವೆಯೂ ಅದ್ದೂರಿಯಾಗಿ ನಡೆಯಿತು.
ಇಬ್ಬರೂ ಮಸ್ಕಿತ್ತಿಗೆ ತೆರಳಿದ್ದೂ ಆಯ್ತು. ಆದರೆ ಹುಟ್ಟೂರ ಮೋಹ ಮಾತ್ರ ಭುವನೇಂದ್ರ ಅವರನ್ನು ಬಿಡಲಿಲ್ಲ. ಊರಲ್ಲೇ ಏನಾದರೂ ವ್ಯವಹಾರ ಆರಂಭಿಸಬೇಕು ಎಂದು ಹೊರಟ ಕಿದಿಯೂರು ಅವರಿಗೆ
ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ಈ ಜಾಗ ಕಣ್ಣಿಗೆ ಬಿತ್ತು.
ಇಲ್ಲೊಂದು ಕಟ್ಟಡ ನಿರ್ಮಿಸಿದರೆ ಹೇಗೆ ಎಂದು ಯೋಚಿಸಿದವರೇ ತಡಮಾಡದೆ ಜಾಗ ಖರೀದಿಸಿ ಒಂದು ಅದ್ಭುತ ಕಟ್ಟಡ ಕಟ್ಟಿನಿಲ್ಲಿಸಿದರು. ಒಂದು ಕಾಲದಲ್ಲಿ ಜನರಿಗೆ ಕಸ ಎಸೆಯಲು ಬಹಿರ್ದೆಸೆ ಪೂರೈಸಲಷ್ಟೇ ಮೀಸಲಾಗಿದ್ದ ಈ ಪ್ರದೇಶ ನೋಡು ನೋಡುತ್ತಲೆ ಒಂದು ದೊಡ್ಡ ವ್ಯಾಪಾರಿಕೇಂದ್ರವಾಗಿ ಬೆಳೆಯಿತು. ಆರಂಭದಲ್ಲಿ ದಾಸಪ್ಪ ಪುತ್ರನ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾರಂಭಿಸಿದ ಹೊಟೆಲ್ ಕಿದಿಯೂರ್ ಬಳಿಕ ಜನತಾ ಡಿಲೆಕ್ಸ್ ಅವರ ಆಹಾರ ವೈವಿದ್ಯವನ್ನೂ ಜನರಿಗೆ ಪರಿಚಯಿಸಿತು. ಇಷ್ಟರಲ್ಲಾಗಲೇ ಬುವನೇಂದ್ರ ಕಿದಿಯೂರು ಅವರಿಗೆ ಹುಟ್ಟೂರ ಸೆಳೆತ ಅತಿಯಾಯಿತು. ಮಸ್ಕತ್ತಿನಲ್ಲಿನ ತನ್ನ ಉದ್ಯಮಗಳಿಗೆ ಕುಟುಂಬಿಕರನ್ನು ನೇಮಿಸಿ ಅವರು ನೇರವಾಗಿ ಉಡುಪಿಗೆ ಬಂದವರೇ ತನ್ನ ಪೂರ್ಣ ಸಮಯವನ್ನು ಕಿದಿಯೂರ್ ಹೊಟೇಲಿಗೆ ವಿನಿಯೋಗಿಸಿದರು. ಹಗಲಿರುಳೆನ್ನದೆ ಅವರು ಪಟ್ಟ ಶ್ರಮದ ಪ್ರತಿಫಲ ಇದು..
ಈಗ ಕಿದಿಯೂರು ಸಂಸ್ಥೆ ಒಟ್ಟು ಹತ್ತು ವಿಭಾಗಗಳಲ್ಲಿ ಗ್ರಾಹಕರ ಸೇವೆಗೈಯುತ್ತಿದೆ.
ಕಿದಿಯೂರು ಗೋಕುಲ್ ಕೃಷ್ಣ ವೆಜ್ ರೆಸ್ಟೋರೆಂಟ್, ಕಿದಿಯೂರ್ ಗಝಬ್ ನಾನ್ ವೆಜ್ ರೆಸ್ಟೋರೆಂಟ್ , ಕಿದಿಯೂರ್ ಬಾರ್ ಆಂಡ್ ರೆಸ್ಟೋರೆಂಟ್, ಕಿದಿಯೂರ್ ಬೋರ್ಡಿಂಗ್ ಆಂಡ್ ಲಾಡ್ಜಿಂಗ್
ಕಿದಿಯೂರ್ ಹೆರಿಟೇಜ್ ಹೆಲ್ತ್ ಕೇರ್, ಕಿದಿಯೂರು ಕನ್ಫೆಕ್ಷನರಿ , ಕಿದಿಯೂರ್ ಪಿಝಾ ಶಾಪ್ , ವರ್ಣ ನೈಸ್ ಪ್ರಿಂಟ್, ಕಿದಿಯೂರ್ ಹಾಲ್ಸ್, ಕಿದಿಯೂರ್ ಹೋಂಡಾ, ಕಿದಿಯೂರ್ ಬ್ಯಾನರ್ ಪ್ರಿಂಟ್
ಇದು ಸರಿ ಸುಮಾರು ಮೂವತ್ತಮೂರು ವರ್ಷದ ಪರಿಶ್ರಮ ಆಗ ಉಡುಪಿ ಇಷ್ಟೊಂದು ಬೆಳೆದಿರಲಿಲ್ಲ. ಅಂದಿನ ಆ ಸೀಮಿತ ಮಾರುಕಟ್ಟೆಯಲ್ಲಿ ಇನ್ನೊಬ್ಬರೊಂದಿಗೆ ಪೈಪೋಟಿಗೆ ನಿಲ್ಲದೆ ತನ್ನದೇ ಆದ ಪರ್ಯಾಯ ದಾರಿಯನ್ನು ರೂಪಿಸಿಕೊಂಡು ಯಶಸ್ಸಿನ ಶಿಖರ ಚುಂಬಿಸಿದವರು ಭುವನೇಂದ್ರ ಕಿದಿಯೂರು ಅವರು. ಯುವ ಉದ್ಯಮಿಗಳ ಪಾಲಿಗೆ ಇವರ ಬದುಕೊಂದು ಪಠ್ಯವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಜನರ ನಾಡಿಮಿಡಿತವನ್ನು ಬಲ್ಲ ಬುವನೇಂದ್ರ ಕಿದಿಯೂರು ಅವರು ಕಾಲಕಾಲಕ್ಕೆ ತನ್ನ ಉದ್ಯಮಗಳನ್ನು ಪರಿಷ್ಕರಿಸಿಕೊಂಡು ಸಾಗಿದರು. ಇದರ ಫಲವಾಗಿ ಮಹಡಿಗಳ ಮೇಲೆ ಮಹಡಿಗಳು ನಿರ್ಮಾಣವಾಗಿ ಅದ್ಭುತವಾದ ಸಭಾಂಗಣಗಳು ತಲೆ ಎತ್ತಿದವು. ವರ್ಣ ಎಂಬ ಬಣ್ಣದ ಚಿಟ್ಟೆ ರೆಕ್ಕೆ ಬಡಿಯಿತು. ಭಾರಿ ಗಾತ್ರದ ಬ್ಯಾನರ್ ಯಂತ್ರ ಸದ್ದು ಮಾಡಿತು ಆಯುರ್ವೇದಿಕ್ ಸ್ಪಾ ತೆರೆದುಕೊಂಡಿತು. ಹೀಗೆ ಹತ್ತಾರು ಶಾಖೆಗಳಲ್ಲಿ ತನ್ನ ಉದ್ಯಮ ಸಾಮ್ರಾಜ್ಯವನ್ನು ಕಿದಿಯೂರ್ ಸಂಸ್ಥೆ ವಿಸ್ತರಿಸಿಕೊಂಡಿತು. ಕಳೆದ ಮೂವತ್ತಮೂರು ವರ್ಷಗಳ ದಣಿವರಿಯದ ಶ್ರಮದ ಫಲವಾಗಿ ಇಂದು ಈ ಸಂಸ್ಥೆ ನಾಲ್ಕು ನೂರಕ್ಕೂ ಅಧಿಕ ಕುಟುಂಬಗಳಿಗೆ ಅನ್ನನೀಡುತ್ತಿದೆ.
ಭುವನೇಂದ್ರ ಕಿದಿಯೂರು ಅವರು ಇಲ್ಲಿ ಹೊಟೇಲು ಉದ್ಯಮಕ್ಕೆ ಕೈ ಹಾಕುವ ಸಮಯದಲ್ಲಿ ಅದಾಗಲೇ ಹಲವಾರು ಪ್ರಸಿದ್ಧ ಹೊಟೇಲುಗಳು ಉಡುಪಿಯಲ್ಲಿದ್ದವು. ತನ್ನ ಗ್ರಾಹಕ ಸ್ನೇಹಿ ಚಟುವಟಿಕೆ ಗಳಿಂದಾಗಿ ಕಿದಿಯೂರು ಹೋಟೆಲ್ ದಾಖಲೆಯ ವೇಗದಲ್ಲಿ ಯಶಸ್ಸಿನೆಡೆಗೆ ದಾಪುಗಾಲು ಹಾಕಿತು. ಪರಮ ದೈವಭಕ್ತರಾದ ಭುವನೇಂದ್ರ ಕಿದಿಯೂರು ಅವರು ತನ್ನ ಈ ಎಲ್ಲಾ ಯಶಸ್ಸಿಗೆ ಭಗವಂತನ ಅನುಗ್ರಹವೇ ಕಾರಣ ಎನ್ನುತ್ತಾರೆ ಆದರೆ ಅದೆಲ್ಲಕೂ ಮಿಗಿಲಾಗಿ ಇವರ ಯಶಸ್ಸಿನ ಹಿಂದೆ ಇವರ ಮಗುವನ್ನೂ ಗೌರವಿಸುವ ಮುಗ್ಧತೆ ಅಡಗಿದೆ. ಬಂದ ಪ್ರತಿಯೊಬ್ಬ ಗ್ರಾಹಕನನ್ನೂ ಆತ್ಮೀಯತೆಯಿಂದ ಉಪಚರಿಸುವ ಭುವನೇಂದ್ರರು ತಮ್ಮ ಸಿಬ್ಬಂದಿಗಳಿಗೂ ಇದೇ ರೀತಿ ಇರುವಂತೆ ಸೂಚಿಸುತ್ತಾರೆ. ಅವರ ಸಭಾಂಗಣಗಳಲ್ಲಿ ಯಾರ ಕಾರ್ಯಕ್ರಮಗಳು ನಡೆದರೂ ಒಂದು ಕ್ಷಣ ಅಲ್ಲಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳು ಹೇಗಿವೆ ಎಂದು ಪರಿಶೀಲಿಸಿ ಬರುತ್ತಾರೆ. ತಾನು ದಣಿ ಎಂಬ ಎಳ್ಳಷ್ಟೂ ಅಹಮಿಕೆಯನ್ನು ತೋರದೆ ತಾನೂ ದುಡಿದ ಪರಿಣಾಮ ಇಂದು ಈ ಉದ್ಯಮ ಈ ಮಟ್ಟಕ್ಕೆ ಬೆಳೆದಿದೆ ಅನ್ನುತ್ತಾರೆ ಕಿದಿಯೂರು ಅವರು. ಅಷ್ಟಕ್ಕೂ ಮೊಗವೀರ ಸಮಾಜದಲ್ಲಿ ಇಷ್ಟೊಂದು ಯಶಸ್ವಿಯಾಗಿ ಹೊಟೇಲು ಉದ್ಯಮ ನಡೆಸುತ್ತಿರುವವರು ಬಹುಷಃ ಭುವನೇಂದ್ರ ಕಿದಿಯೂರು ಅವರೊಬ್ಬರೇ. ಗ್ರಾಹಕರ ಹಸಿವು ತಣಿಸುವ ಹೊಟೇಲು ಉದ್ಯಮ ಇವರ ವೃತ್ತಿಯಾದರೂ ಇವರ ಪ್ರವೃತ್ತಿಗೆ ಹತ್ತಾರು ಮುಖಗಳಿವೆ.
ಕಿದಿಯೂರು ಹೊಟೇಲ್ ಪ್ರವೇಶಿಸಿದಾಗ ನಿಮಗೆ ಯಾವುದೋ ದೇವಸ್ಥಾನವನ್ನು ಹೊಕ್ಕಂತೆ ಭಾಸವಾಗುತ್ತದೆ. ಇಲ್ಲಿ ಹೆಜ್ಜೆ ಹೆಜ್ಜೆಗೆ ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣರ ವಿಗ್ರಹಗಳಿವೆ. ಹೊಟೇಲಿಗೆ ಬರುವ ಪ್ರವಾಸಿಗರಿಗೆ ಉಡುಪಿ ಒಂದು ಧಾರ್ಮಿಕ ನಗರಿ ಅನ್ನುವುದನ್ನು ಮನವರಿಕೆ ಮಾಡೋದೇ ನನ್ನ ಉದ್ಧೇಶ ಅನ್ನುತ್ತಾರೆ ಬುವನೇಂದ್ರರು. ಅವರ ಮನೆ ಮತ್ತು ಹೋಟೇಲಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಕೃಷ್ಣ ಮುಖ್ಯಪಾಣರ ಚಿತ್ರಗಳು ನಿಮಗೆ ಕಾಣಸಿಗಬಹುದು. ಅವರ ಸಸ್ಯಾಹಾರಿ ಹೊಟೆಲಿನ ಹೆಸರು ಗೋಕುಲಕೃಷ್ಣ, ಹಾಲುಗಳ ಹೆಸರು ಶೇಷಶಯನ, ಅನಂತಶಯನ,ಮಾಧವಕೃಷ್ಣ ಪಾರ್ಕಿಂಗ್ ಪ್ರದೇಶ..ಹರಿದ್ವಾರ.. ಮನೆಯ ಹೆಸರು ನಂದನಂದನ.ಇಲ್ಲಿ ಎಲ್ಲವೂ ಕೃಷ್ಣಮಯ..ಇಲ್ಲೇ ಪಕ್ಕದಲ್ಲಿ ಕಿದಿಯೂರು ಅವರು ಒಂದು ನಾಗಸಾನಿಧ್ಯವನ್ನು ನಿರ್ಮಿಸಿದ್ದಾರೆ. ಬೇರೆಲ್ಲಾ ನಾಗಬನಗಳಲ್ಲಿ ನಾಗರ ಪಂಚಮಿಗೆ ಮಾತ್ರ ಪೂಜೆ ನಡೆದರೆ ಇಲ್ಲಿ ಪ್ರತೀದಿನ ನಾಗನಿಗೆ ಪೂಜೆ ನಡೆಯುತ್ತದೆ. ಕಾಲಕಾಲಕ್ಕೆ ಆಶ್ಲೇಷ ಬಲಿ ಸೇವೆಗಳು ನಡೆಯುತ್ತದೆ. ಹನ್ನೆರಡು ವರ್ಷಕ್ಕೊಮ್ಮೆ ಭುವನೇಂದ್ರ ಕಿದಿಯೂರು ಅವರು ಇಲ್ಲಿ ನಡೆಸುವ ನಾಗಮಂಡಲವನ್ನು ಕಂಡು ಉಡುಪಿಯೇ ದಂಗಾದದ್ದಿದೆ.ಅತ್ಯಂತ ವಿಜ್ರಂಭಣೆಯಿಂದ ನಡೆಯುವ ಈ ನಾಗಮಂಡಲ ಸೇವೆಗೆ ದೂರದೂರದ ಭಕ್ತಾದಿಗಳು ಆಗಮಿಸುತ್ತಾರೆ. ಒಟ್ಟಿನಲ್ಲಿ ಭುವನೇಂದ್ರ ಕಿದಿಯೂರರು ತಾನು ದುಡಿದಿದ್ದರಲಿ ಬಹುಪಾಲು ಹಣವನ್ನು ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ.
ಉಡುಪಿಯ ಕೃಷ್ಣ ಮಠಕ್ಕೂ ಭುವನೇಂದ್ರ ಕಿದಿಯೂರರಿಗೂ ಅವಿನಾಭಾವ ನಂಟು. ಮಠದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳು ಭುವನೇಂದ್ರ ಕಿದಿಯೂರು ಅವರ ಪಾಲ್ಗೊಳ್ಳುವಿಕೆ ಇಲ್ಲದೆ ನಡೆಯದು. ಉಡುಪಿಯ ರಥಬೀದಿಗಷ್ಟೇ ಸೀಮಿತವಾಗಿದ್ದ ಮಠದ ಚಟುವಟಿಕೆಗಳನ್ನು ಉಡುಪಿ ನಗರಕ್ಕೆ ವಿಸ್ತರಿಸಿದ ಮಹನೀಯರಲ್ಲಿ ಭುವನೇಂದ್ರ ಕಿದಿಯೂರು ಅವರೂ ಒಬ್ಬರು.
ಮಠದ ಕಾರ್ಯಕ್ರಮಗಳಿಗೆ ಪೂರ್ವಭಾವಿಯಾಗಿ ಮೆರವಣಿಗೆಗಳನ್ನು ಆಯೋಜಿಸಿ ಅದಕ್ಕೊಂದು ಸಾಂಸ್ಕೃತಿಕ ಮೆರುಗು ನೀಡಿ ಇಡೀ ಉಡುಪಿ ಹಬ್ಬದ ವಾತಾವರಣದಲ್ಲಿ ಮುಳುಗೇಳುವಂತೆ ಮಾಡಿದವರಲ್ಲಿ ಭುವನೇಂದ್ರರ ಪಾತ್ರ ಹಿರಿದು. ಪ್ರತೀ ವರ್ಷ ಕೃಷ್ಣಾಷ್ಟಮಿಗೆ ಮಠದಲ್ಲಿ ಇವರ ಮುಂದಾಳುತ್ವದಲ್ಲಿ ಅಖಂಡ ಭಜನೆ ಮತ್ತು ಅನ್ನಸಂತರ್ಪಣೆ ನಡೆಯುತ್ತದೆ. ಹದಿನೈದು ಸಾವಿರಕ್ಕೂ ಅಧಿಕ ಭಕ್ತರು ಇದರಲ್ಲಿ ಭಾಗವಹಿಸುತ್ತಾರೆ. ಇನ್ನು ಹನುಮಜ್ಜಯಂತಿ ಉತ್ಸವಕ್ಕೆ ಹನ್ನೆರಡು ಸಾವಿರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಇದೂ ಕೂಡ ಭುವನೇಂದ್ರ ಕಿದಿಯೂರು ಅವರ ಉಸ್ತುವಾರಿಯಲ್ಲೇ ನಡೆಯುತ್ತದೆ.
ಉಡುಪಿಯ ಕೃಷ್ಣ ಮುಖ್ಯಪ್ರಾಣರು ಹಾಲುಪಾಯಸ ಪ್ರಿಯರಾಗಿದ್ದೇ ಈ ಭೂವನೇಂದ್ರ ಕಿದಿಯೂರು ಅವರಿಂದಾಗಿ ಎಂಬ ಮಾತಿದೆ. ಹೌದು ಮಠಕ್ಕೆ ಉತ್ಸವ ಸಮಯದಲ್ಲಿ ಆಗಮಿಸುವ ಭಕ್ತರಿಗೆ ಇವರ ವತಿಯಿಂದ ಹಾಲುಪಾಯಸ ವಿತರಣೆ ನಡೆಯುತ್ತದೆ. ಇದಲ್ಲದೆ ಉಡುಪಿ ಆಸುಪಾಸಿನ ಯಾವುದೇ ದೇವಾಲಯಗಳಲ್ಲಿ ಬ್ರಹ್ಮಕಲಶ ನಡೆದರೂ ಭುವನೇಂದ್ರ ಕಿದಿಯೂರು ಅವರು ಹಾಲುಪಾಯಸ ಕಳುಹಿಸಿ ಕೊಡುತ್ತಾರೆ. ಪೇಜಾವರ ಶ್ರೀಗಳು ಎಂದರೆ ಭುವನೇಂದ್ರ ಕಿದಿಯೂರು ಅವರಿಗೆ ಎಲ್ಲಿಲ್ಲದ ಭಕ್ತಿ. ಶ್ರೀಗಳಿಗೂ ಅಷ್ಟೇ..
ಮಠದಲ್ಲಿ ಭುವನೇಂದ್ರ ಕಿದಿಯೂರು ಅವರು ಪ್ರತೀ ವರ್ಷ ಗೀತಾ ಜಯಂತಿಯ ಸಂದರ್ಭದಲ್ಲಿ ಸರಣಿ ಪ್ರವಚನ ಆಯೋಜಿಸಲು ಹೊರಟಾಗ ಉಡುಪಿಯ ಎಲ್ಲಾ ಶ್ರೀಗಳು ಅವರನ್ನು ಪ್ರೋತ್ಸಾಹಿಸಿ ಅಭಿನಂದಿಸಿದರು. ಈ ಜ್ಞಾನ ಯಜ್ಙ ಇಂದಿಗೂ ಅನೂಚಾನಾಗಿ ನಡೆದು ಬಂದಿದೆ. ಉಡುಪಿಯ ಮೆರವಣಿಗೆಗಳಿಗೆ ಕಲಾಮೆರುಗನ್ನು ನೀಡಿದವರಲ್ಲಿ ಭುವನೇಂದ್ರ ಕಿದಿಯೂರು ಅವರೂ ಒಬ್ಬರು. ವಿವಿಧ ಕಲಾತಂಡಗಳಿಗೆ ಅವಕಾಶ ನೀಡಿ ಆರ್ಥಿಕ ಬಲ ತುಂಬುವ ಭುವನೇಂದ್ರ ಕಿದಿಯೂರು ಅವರು ದೂರದ ಮುಂಬೈಯ ದಹಿ ಹಂಡಿ ತಂಡ ಉಡುಪಿಗೆ ಬಂದ ಸಮಯದಲ್ಲೂ ದೊಡ್ಡ ಮೊತ್ತದ ಸಹಕಾರವನ್ನು ನೀಡುತ್ತಾ ಬರುತ್ತಿದ್ದಾರೆ. ಇನ್ನು ಇವರ ಸಭಾಂಗಣಗಳಲ್ಲಿ ಸಾಹಿತ್ಯದ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹವಿದೆ.
ಇಷ್ಟಕ್ಕೆ ಭುವನೇಂದ್ರ ಕಿದಿಯೂರು ಅವರ ಕೊಡುಗೆಗಳು ನಿಲ್ಲೋದಿಲ್ಲ. ಅವರೊಳಗೆ ಯಾರೂ ಅರಿಯದ ಮಾನವೀಯ ಮುಖವೊಂದಿದೆ. ಭುವನೇಂದ್ರ ಕಿದಿಯೂರು ಅವರು ತನ್ನ ಸಿಬ್ಬಂದಿಗಳನ್ನು ಯಾವತ್ತೂ ಕೆಲಸದಾಳುಗಳಾಗಿ ಕಂಡದ್ದಿಲ್ಲ. ಸಿಬ್ಬಂದಿಗಳ ಅದೆಷ್ಟೋ ಆರೋಗ್ಯದ ಸಮಸ್ಯೆಗಳಿಗೆ ತಾನೇ ತಂದೆಯ ಸ್ಥಾನದಲ್ಲಿ ನಿಂತು ಚಿಕಿತ್ಸೆಯ ವೆಚ್ಚಭರಿಸಿದ್ದಾರೆ. ಅದೆಷ್ಟೋ ಸಿಬ್ಬಂದಿಗಳ ಮಕ್ಕಳ ಮದುವೆಗೆ ಧನಸಹಾಯ ನೀಡಿ ದೈರ್ಯ ತುಂಬಿದ್ದಾರೆ. ಉಡುಪಿಯ ಜಿಲ್ಲಾಸ್ಪತ್ರೆಗೆ ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ವಾಶಿಂಗ್ ಮಶೀನು, ಗೀಸರ್, ರಕ್ತಶೂದ್ಧೀಕರಣದ ಯಂತ್ರೋಪಕರಣಗಳನ್ನು ನೀಡಿದ್ದಾರೆ. ತನ್ನ ಗ್ರಾಮದ ಆಸುಪಾಸಿನ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದಿರುವ ಕಿದಿಯೂರು ಅವರು ಅಲ್ಲಿನ ಎರಡು ಅತಿಥಿ ಅದ್ಯಾಪಕರ ಸಂಬಳವನ್ನು ತಾನೇ ಪ್ರತೀ ತಿಂಗಳು ಭರಿಸುತ್ತಾರೆ. ಯಕ್ಷಕಲಾರಂಗ ಉಡುಪಿ ನಡೆಸುತ್ತಿರುವ ಸಮಾಜಪರ ಕಾರ್ಯಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕಿದಿಯೂರು ಅವರು ಬಡ ವಿದ್ಯಾರ್ಥಿಗಳಿಗೆ ಮನೆ ಕಟ್ಟಿಕೊಡುವ ಯೋಜನೆಯಲ್ಲಿ ಕೈಜೋಡಿಸಿದ್ದಾರೆ.
ಇವರ ಇಬ್ಬರು ಪುತ್ರರಾದ ಡಾ ಬ್ರಿಜೇಶ್ ಮತ್ತು ಡಾ ಯಜ್ಙೇಶ್ ಮತ್ತು ಮಗಳು ಡಾ ಭವ್ಯಶ್ರೀ ಮೂವರೂ ವೈದ್ಯ ವೃತ್ತಿಯಲ್ಲಿರುವ ಕಾರಣ ಯಾರಾದರೂ ಬಡವರು ಆರೋಗ್ಯದ ಸಮಸ್ಯೆ ಎಂದು ಬಂದರೆ ಕೂಡಲೆ ಅವರನ್ನು ಆಸ್ಪತ್ರೆಗೆ ಕಳುಹಿಸಿ ವೈದ್ಯರನ್ನು ಶಿಫಾರಸ್ಸು ಮಾಡುತ್ತಾರೆ. ಪ್ರತೀ ತಿಂಗಳೂ ಹತ್ತಾರು ಜನರು ಕಿದಿಯೂರು ಅವರ ಶಿಫಾರಸ್ಸಿನ ಮೇಲೆ ಕನಿಷ್ಟ ಬೆಲೆಯಲ್ಲಿ ಉತ್ತಮ ಚಿಕಿತ್ಸೆ ಪಡೆಯುವುದಿದೆ. ಸದ್ದಿಲ್ಲದೆ ಇಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದ ಭುವನೇಂದ್ರರಿಗೆ ಎಪ್ಪತೈದು ವರ್ಷ ತುಂಬಿದ್ದೇ ತಿಳಿಯಲಿಲ್ಲ. ಸದಾ ನವಯುವಕನಂತೆ ಓಡಾಡುತ್ತಾ ಲವಲವಿಕೆಯಿಂದಿರುವ ಭುವನೇಂದ್ರ ಕಿದಿಯೂರು ಅವರು ನಮ್ಮ ಯುವಸಮಾಜಕ್ಕೆ ನಿಜಕ್ಕೂ ಮಾದರಿ.
ಪತ್ನಿ ಹೀರಾ ಮತ್ತು ಮೂರು ಗಂಡು ಮತ್ತು ಓರ್ವ ಮಗಳ ತುಂಬು ಸಂಸಾರ ಭುವನೇಂದ್ರ ಕಿದಿಯೂರು ಅವರದ್ದು. ಪ್ರಚಾರ ಪ್ರಸಿದ್ಧಿಯ ಬೆನ್ನು ಬೀಳದೆ ಆತ್ಮತೃಪ್ತಿಗಾಗಿ ಜನತೆ ಮತ್ತು ಜನಾರ್ಧನನ ಸೇವೆಯನ್ನು ಜೊತೆಯಾಗಿ ನಡೆಸುತ್ತಾ ಬಂದಿರುವ ಭುವನೇಂದ್ರ ಕಿದಿಯೂರು ಅವರು ಒಬ್ಬ ಆದರ್ಷ ಗ್ರಹಸ್ಥನೂ ಹೌದು. ತಮ್ಮ ಬಿಡುವಿಲ್ಲದ ಸಮಯದಲ್ಲೂ ಮನೆ ಮತ್ತು ಮಕ್ಕಳಿಗೆ ಸಮಯ ನೀಡುವ ಇವರು ತನ್ನ ಮಕ್ಕಳಿಗೂ ತನ್ನಲ್ಲಿರುವ ಸೇವಾ ಮನೋಭಾವವನ್ನುದಾರೆ ಎರೆದಿದ್ದಾರೆ.
ಭುವನೇಂದ್ರ ಕಿದಿಯೂರು ಅವರೇ… ಜೀವನಾನುಭವದ ಸಾರವನ್ನು ಹೀರಿಕೊಂಡು ಬಲವಾಗಿ ಬೇರು ಬಿಟ್ಟು ಆಗಸದೆತ್ತರಕ್ಕೆ ಹಬ್ಬಿನಿಂತಿರುವ ನೀವು ಬೃಹತ್ ವಟವೃಕ್ಷದಂತೆ ಸಾವಿರಾರು ಜೀವರಾಶಿಗಳಿಗೆ ಆಶ್ರಯದಾತರಾಗಿರುವಿರಿ. ನೂರ್‍ಕಾಲ ನೀವು ಇದೇ ರೀತಿ ನಮ್ಮೊಂದಿಗಿದ್ದು ಸಮಾಜದ ಸುಖದುಖಃಗಳಿಗೆ ಸ್ಪಂದಿಸಬೇಕು ಎಂದು ಆಶಿಸುವ ಉಡುಪಿಯ ಸಹೃದಯ ನಾಗರೀಕ ಬಂಧುಗಳು.
ಶ್ರೀಕಾಂತ್ ಶೆಟ್ಟಿ