ಭಗವದ್ಗೀತೆ

ಅಧ್ಯಾಯ ಒಂದು – ಮುನ್ನುಡಿ

ಸಾಮಾನ್ಯವಾಗಿ ಭಗವದ್ಗೀತೆಗೆ ಭಾಷ್ಯ ಬರೆಯುವವರು ಮೊದಲ ಅಧ್ಯಾಯಕ್ಕೆ ಹೆಚ್ಚು ಒತ್ತು ಕೊಡದೆ, ನೇರವಾಗಿ ಎರಡನೆ ಅಧ್ಯಾಯದಲ್ಲಿ- ‘ಯುದ್ಧರಂಗದಲ್ಲಿ ಗೊಂದಲಕ್ಕೊಳಗಾದ ಅರ್ಜುನನಿಗೆ ಕೃಷ್ಣನ ಉಪದೇಶ’ ಎಂದು ಪ್ರಾರಂಭಿಸುತ್ತಾರೆ. ಆದರೆ ಮೊದಲ ಅಧ್ಯಾಯದಲ್ಲಿ ಮನಃಶಾಸ್ತ್ರಕ್ಕೆ(psychology) ಸಂಬಂಧಪಟ್ಟ ಅನೇಕ ವಿಷಯಗಳಿವೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆಯ ಈ ಅಧ್ಯಾಯವನ್ನು ‘ಅರ್ಜುನ ವಿಷಾದ ಯೋಗ’ ಎಂದು ಕರೆಯುವುದು ಪ್ರಸ್ತುತವಲ್ಲ.

ಈ ಅಧ್ಯಾಯದಲ್ಲಿ ಯುದ್ಧ ನಡೆಯುವ ಪೂರ್ವ ಕ್ಷಣದಲ್ಲಿ ಯುದ್ಧ ಭೂಮಿಯಲ್ಲಿ ನಿಂತಿದ್ದ ಅರ್ಜುನ ಹಾಗು ದುರ್ಯೋಧನರ ಮನಸ್ಥಿತಿ ಹೇಗಿತ್ತು ಎನ್ನುವ ಅಪೂರ್ವ ವಿಶ್ಲೇಷಣೆ ಅಡಗಿದೆ. ಅರ್ಜುನನ ಮನಸ್ಸಿನ ಗೊಂದಲಕ್ಕೆ ಶ್ರೀಕೃಷ್ಣ ಪರಿಹಾರದ ಉಪದೇಶ ಕೊಟ್ಟ, ಆದರೆ ದುಷ್ಟ ದುರ್ಯೋಧನ ಗೊಂದಲದಿಂದಲೇ ಸತ್ತ. ಆದ್ದರಿಂದ ಮೊದಲ ಅಧ್ಯಾಯವನ್ನು ನಾವು ಐತಿಹಾಸಿಕ ದೃಷ್ಟಿಯಿಂದ ಕಾಣದೆ ಇಲ್ಲಿರುವ ಮನಃಶಾಸ್ತ್ರವನ್ನು ಅರಿಯಲು ಪ್ರಯತ್ನಿಸಬೇಕು.

ಇಲ್ಲಿ ಹೇಳಿರುವ ಮನಃಶಾಸ್ತ್ರ ಕೇವಲ ಯುದ್ಧಭೂಮಿಯಲ್ಲಿ ನಿಂತವರಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಪಟ್ಟಿದ್ದು. ಈ ಎಚ್ಚರದಿಂದ ಇಲ್ಲಿ ಬರುವ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನಮಗೆ ಈ ಅಧ್ಯಾಯ ಅರ್ಥವಾಗುತ್ತದೆ.

ಭಗವದ್ಗೀತೆ ಪ್ರಾರಂಭವಾಗುವುದು ಧೃತರಾಷ್ಟ್ರನ ಪ್ರಶ್ನೆಯಿಂದ. ಧೃತರಾಷ್ಟ್ರ ಎಂದರೆ ರಾಷ್ಟ್ರವನ್ನು(ಪುರವನ್ನು) ಧಾರಣೆ ಮಾಡಿದವ ಎಂದರ್ಥ. ಅಂದರೆ ಸತ್ಯದ ಬಗ್ಗೆ ಕುರುಡಾಗಿ ಕಣ್ಮುಚ್ಚಿ ಮಲಗಿರುವ ಜೀವವೇ ಧೃತರಾಷ್ಟ್ರ. ದುರ್ಯೋಧನ ಎನ್ನುವುದು ನಮ್ಮೊಳಗಿರುವ ದುಷ್ಟತನದ ಪರಾಕಾಷ್ಠೆಯ ಸಂಕೇತ. ಭೀಷ್ಮ-ದ್ರೋಣ-ಕೃಪಾ-ಶಲ್ಯ-ಕರ್ಣ-ಇವರೆಲ್ಲರೂ ನಮ್ಮ ಇಂದ್ರಿಯಗಳಂತೆ.

ನಮ್ಮ ಮನಸ್ಸಿನಲ್ಲಿರುವ ಕೆಟ್ಟತನದಿಂದ ನಾವು ನಮ್ಮಲ್ಲಿರುವ ಅಮೂಲ್ಯವಾದ ಇಂದ್ರಿಯಗಳನ್ನು ಕೆಟ್ಟ ಕಾರ್ಯಕ್ಕೆ ಬಳಸುತ್ತೇವೆ. ವಸ್ತುತಃ ಇಂದ್ರಿಯಗಳು ಕೆಟ್ಟವಲ್ಲ. ಆದರೆ ಕೆಟ್ಟದ್ದರ ಜೊತೆ ಸೇರಿ ಕೆಟ್ಟದ್ದನ್ನು ಮಾಡುತ್ತವೆ. ಈ ರೀತಿ ಗೀತೆಯ ಪ್ರತಿಯೊಂದು ಶ್ಲೋಕದಲ್ಲಿ, ಮಹಾಭಾರತದ ಪ್ರತಿಯೊಂದು ಪಾತ್ರದಲ್ಲಿ ಅತ್ಯಮೂಲ್ಯವಾದ ಹಾಗು ಗುಹ್ಯವಾದ ಅರ್ಥ ಅಡಗಿದೆ.

ಅಧ್ಯಾಯ – 01 : ಶ್ಲೋಕ – 01
ಧೃತರಾಷ್ಟ್ರ ಉವಾಚ ।
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥
ಧೃತರಾಷ್ಟ್ರ ಉವಾಚ- ಧೃತರಾಷ್ಟ್ರ ಕೇಳಿದನು:
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ
ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ಸಂಜಯ – ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ?

ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ ‘ಜೀವದ’ ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೆ ಏನೂ ಗೊತ್ತಿಲ್ಲ ಎನ್ನುವ ವಿಷಯ ಕೂಡಾ ನಮಗೆ ಗೊತ್ತಿಲ್ಲ! ಆದ್ದರಿಂದ ಗೀತೆ ಧೃತರಾಷ್ಟ್ರನ ಪ್ರಶ್ನೆಯಿಂದಲೇ ಆರಂಭವಾಗುತ್ತದೆ.

ಕಣ್ಣು ಕಾಣದ ಧೃತರಾಷ್ಟ್ರ ದೂರದರ್ಶನ ಹಾಗು ದೂರಶ್ರವಣ ಶಕ್ತಿಯನ್ನು ವ್ಯಾಸರಿಂದ ಪಡೆದ ಸಂಜಯನಲ್ಲಿ ಹಾಕಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ. ಪರಶುರಾಮನಿಂದ ಸಮಂತಪಂಚಕ (ಸುತ್ತಲೂ ಐದು ಸರೋಹರ) ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರ ಎನಿಸಿದ್ದ ಈ ಯುದ್ಧ ಭೂಮಿ, ಆನಂತರ ‘ಕುರು’ ಎನ್ನುವ ರಾಜನ ಕಾಲದಲ್ಲಿ ಪರಮ ಧಾರ್ಮಿಕಕ್ಷೇತ್ರವಾಗಿ ಕುರುಕ್ಷೇತ್ರವಾಯಿತು.

ಇದನ್ನೇ ಇಲ್ಲಿ “ಧರ್ಮಕ್ಷೇತ್ರೇ ಕುರುಕ್ಷೇತ್ರೇ” ಎಂದು ಸಂಬೋಧಿಸಿದ್ದಾರೆ. ನಮ್ಮ ಹೃದಯ-ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಮನಸ್ಸು(Mind)-ಕುರುಕ್ಷೇತ್ರ(ಕರ್ಮಕ್ಷೇತ್ರ). ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ.


ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯನಲ್ಲಿ ಕೇಳುತ್ತಾನೆ “ಹೋರಾಟ ಬಯಸಿ ಎದುರುಬದುರಾದ ‘ನನ್ನವರು’ ಮತ್ತು ‘ಪಾಂಡವರು’ ಏನು ಮಾಡಿದರು?” ಎಂದು. ಇಲ್ಲಿ ‘ನನ್ನವರು ಮತ್ತು ಪಾಂಡವರು’ ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.

Leave a Reply

Your email address will not be published. Required fields are marked *

error: Content is protected !!