ಭಗವದ್ಗೀತೆ ಅಧ್ಯಾಯ – 01 : ಶ್ಲೋಕ – 01

ಭಗವದ್ಗೀತೆ🚩
ಅಧ್ಯಾಯ – 01 : ಶ್ಲೋಕ – 01
ಧೃತರಾಷ್ಟ್ರ ಉವಾಚ ।
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥
ಧೃತರಾಷ್ಟ್ರ ಉವಾಚ- ಧೃತರಾಷ್ಟ್ರ ಕೇಳಿದನು:
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ
ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ಸಂಜಯ – ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ?

ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ ‘ಜೀವದ’ ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೆ ಏನೂ ಗೊತ್ತಿಲ್ಲ ಎನ್ನುವ ವಿಷಯ ಕೂಡಾ ನಮಗೆ ಗೊತ್ತಿಲ್ಲ! ಆದ್ದರಿಂದ ಗೀತೆ ಧೃತರಾಷ್ಟ್ರನ ಪ್ರಶ್ನೆಯಿಂದಲೇ ಆರಂಭವಾಗುತ್ತದೆ.


ಕಣ್ಣು ಕಾಣದ ಧೃತರಾಷ್ಟ್ರ ದೂರದರ್ಶನ ಹಾಗು ದೂರಶ್ರವಣ ಶಕ್ತಿಯನ್ನು ವ್ಯಾಸರಿಂದ ಪಡೆದ ಸಂಜಯನಲ್ಲಿ ಹಾಕಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ. ಪರಶುರಾಮನಿಂದ ಸಮಂತಪಂಚಕ (ಸುತ್ತಲೂ ಐದು ಸರೋಹರ) ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರ ಎನಿಸಿದ್ದ ಈ ಯುದ್ಧ ಭೂಮಿ, ಆನಂತರ ‘ಕುರು’ ಎನ್ನುವ ರಾಜನ ಕಾಲದಲ್ಲಿ ಪರಮ ಧಾರ್ಮಿಕಕ್ಷೇತ್ರವಾಗಿ ಕುರುಕ್ಷೇತ್ರವಾಯಿತು. ಇದನ್ನೇ ಇಲ್ಲಿ “ಧರ್ಮಕ್ಷೇತ್ರೇ ಕುರುಕ್ಷೇತ್ರೇ” ಎಂದು ಸಂಬೋಧಿಸಿದ್ದಾರೆ. ನಮ್ಮ ಹೃದಯ-ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಮನಸ್ಸು(Mind)-ಕುರುಕ್ಷೇತ್ರ(ಕರ್ಮಕ್ಷೇತ್ರ). ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ.

ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯನಲ್ಲಿ ಕೇಳುತ್ತಾನೆ “ಹೋರಾಟ ಬಯಸಿ ಎದುರುಬದುರಾದ ‘ನನ್ನವರು’ ಮತ್ತು ‘ಪಾಂಡವರು’ ಏನು ಮಾಡಿದರು?” ಎಂದು. ಇಲ್ಲಿ ‘ನನ್ನವರು ಮತ್ತು ಪಾಂಡವರು’ ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.

Leave a Reply

Your email address will not be published. Required fields are marked *

error: Content is protected !!