ಪರಿಸರ ರಕ್ಷಣೆಯ ಬಗ್ಗೆ ಜಾಗೃತರಾಗಿ – ದೇವರಾಜ ಪಾಣ
ಉದ್ಯಾವರ: ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುವ ಇಂದಿನ ದಿನಗಳಲ್ಲಿ ನಾವು ಮುಖ್ಯವಾಗಿ ವಿದ್ಯಾರ್ಥಿಗಳು ಪರಿಸರವನ್ನು ರಕ್ಷಿಸಲು ಜಾಗೃತರಾಗಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳು ಭಯಾನಕವಾಗಲಿದೆ. ಹಾಗಾಗಿ ಗಿಡ ಮರಗಳನ್ನು ನೆಟ್ಟು ಬೆಳಸಿ ರಕ್ಷಿಸುವ ಕೆಲಸ ನಮ್ಮ ಆದ್ಯ ಕರ್ತವ್ಯವಾಗಬೇಕು. ಗಿಡಮರಗಳ ರಕ್ಷಣೆ ಎಂದರೆ ಅದು ಭೂಮಿಯ ಮೇಲೆ ಜೀವಿಸುವ ಸಕಲ ಜೀವ ಸಂಕುಲಗಳ ರಕ್ಷಣೆ. ಗಿಡ ಮರಗಳ ರಕ್ಷಣೆಯಿಂದ ಜೀವ ಸಂಕುಲಗಳ ಜೀವನ ಸಮತೋಲನವಾಗಿ ನಾವೆಲ್ಲರೂ ನೆಮ್ಮದಿಯಿಂದ ಜೀವನವನ್ನು ಮಾಡುವಂತಾಗುತ್ತದೆ ಎಂದು ಉಡುಪಿ ಅರಣ್ಯ ರಕ್ಷಕರಾದ ಶ್ರೀ ದೇವರಾಜ ಪಾಣ ಹೇಳಿದರು.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಪಿತ್ರೋಡಿ ಸ್ಮಾರ್ಟ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು. ಅಭಿವೃದ್ಧಿಗೆ ಅನಿವಾರ್ಯವಾದಾಗ ಮರಗಳನ್ನು ಕಡಿಯೋಣ ಆದರೆ ಒಂದು ಮರದ ಬದಲಾಗಿ ಹತ್ತು ಮರಗಳನ್ನು ನೆಟ್ಟು ಪರಿಸರವನ್ನು ಸಮತೋಲನವನ್ನು ಮಾಡೋಣ. ಪರಿಸರ ರಕ್ಷಣೆ ನಮ್ಮ ಮುಖ್ಯ ಕಾಳಜಿಯಾಗಲಿ ಎಂದು ಹಾರೈಸಿದರು.
ಸ್ಮಾರ್ಟ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಯು. ಮಹೇಶ್ರವರು ಮಾತನಾಡಿ ಇದೊಂದು ಪರಿಸರ ರಕ್ಷಣೆಯ ಕಾಳಜಿ ಇರುವ ಕಾರ್ಯಕ್ರಮ. ಸಂಸ್ಥೆ ನಿರಂತರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಇದು ವಿನೂತನ ಕಾರ್ಯಕ್ರಮ ಏಕೆಂದರೆ ಗಿಡವನ್ನು ವಿದ್ಯಾರ್ಥಿಗಳಿಗೆ ವಿತರಿಸಿಸುವುದು ಮಾತ್ರವಲ್ಲ ಒಂದು ವರ್ಷದ ಅವಧಿಯಲ್ಲಿ ಚೆನ್ನಾಗಿ ಬೆಳೆಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ಕೊಡುವ ಕಾರ್ಯ ಅಪರೂಪವಾದುದು. ವಿದ್ಯಾರ್ಥಿಗಳು ಗಿಡಗಳನ್ನು ಬೆಳೆಸಿ ಬಹುಮಾನ ಗೆಲ್ಲಿ ಎಂದರು.
ಉದ್ಯಾವರ ಫ್ರೆಂಡ್ಸ್ ಸರ್ಕಲ್ನ ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಇವತ್ತು ಓಝೋನ್ ಪದರ ದುರ್ಬಲವಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಇದರಿಂದ ಭೂಮಿ ಗ್ಲೋಬಲ್ ವಾರ್ಮಿಂಗ್ಗೆ ಸಿಲುಕಿದೆ. ಈ ಅಪಾಯದಿಂದ ನಾವು ತಪ್ಪಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ನಾವು ಗಿಡ ಮರಗಳನ್ನು ಬೆಳೆಸುವುದು. ಅವು ಎಳಕೊಳ್ಳುವ ಇಂಗಾಲದ ಡೈ ಆಕ್ಸೈಡ್ನಿಂದ ಈ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಇದನ್ನು ನಿರ್ಲಕ್ಷಿಸಿದರೆ ನಮ್ಮ ಅಪಾಯವನ್ನು ನಾವೇ ತಂದುಕೊಂಡಂತೆ. ಪ್ರಿಯ ವಿದ್ಯಾರ್ಥಿಗಳೇ ಮುಂದಿನ ದಿನಗಳು ನಿಮ್ಮ ಕೈಯಲ್ಲಿದೆ. ಅದನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳಬೇಕಾದರೆ ನೀವು ಇಂದು ಪರಿಸರದ ಬಗ್ಗೆ ಕಾಳಜಿ ವಹಿಸಿ ಗಿಡ ಮರಮಟ್ಟುಗಳನ್ನು ಮಕ್ಕಳ ಹಾಗೆ ಪ್ರೀತಿಯಿಂದ ಬೆಳೆಸಿ ಎಂದರು.
ಸುಮಾರು ೫೦೦ ಸಾಗುವಾನಿ ಮತ್ತು ವಿವಿಧ ಜಾತಿಯ ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಗಿಡಗಳನ್ನು ಒಂದು ವರ್ಷದ ಅವಧಿಯಲ್ಲಿ ಚೆನ್ನಾಗಿ ಬೆಳೆಸಿದವರಿಗೆ ಮೂರು ನಗದು ಬಹುಮಾನಗಳನ್ನು ನೀಡಲಾಗುವುದು.ಅತಿಥಿಗಳಾಗಿ ಆಗಮಿಸಿದ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್ ಮತ್ತು ಉಪಾಧ್ಯಕ್ಷರಾದ ರಿಯಾಜ್ ಪಳ್ಳಿ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ತಿಲಕ್ರಾಜ ಸಾಲ್ಯಾನ್ , ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ಉಪಸ್ಥಿರಿದ್ದರು.