ಬಂಟ್ವಾಳ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲೋಕಾರ್ಪಣೆ

ಬಂಟ್ವಾಳ: ಬಿ.ಸಿ.ರೋಡನ್ನು ಕೇಂದ್ರವಾಗಿರಿಸಿಕೊಂಡು ಆರಂಭವಾದ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತವು ಸೋಮವಾರ  ಲೋಕಾರ್ಪಣೆಗೊಂಡಿತು. ಧಾರ್ಮಿಕ ವಿಧಿ ವಿಧಾನಗಳ ಬಳಿಕ ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ ಅವರು ಸೊಸೈಟಿಯ ಉದ್ಘಾಟನೆ ನೆರವೇರಿಸಿದರು. ತದನಂತರ ಹೋಟೆಲ್ ರಂಗೋಲಿ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಕೆ.ಸಲೀಂ ಅವರು,ಜನರ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಆರಂಭವಾಗುವ ಸಹಕಾರಿ ಸಂಸ್ಥೆಗಳು ಪರಸ್ಪರ ನಂಬಿಕೆಯಾಧಾರದಲ್ಲಿ ಬೆಳೆಯುತ್ತದೆ ಎಂದರು. ದೇಶದಲ್ಲಿ ವಿವಿಧ ಸಮುದಾಯ,ಎಲ್ಲಾ ಸ್ತರದಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ದ.ಕ.ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಸ್ಥೆಗಳು ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು,ಬಂಟ್ವಾಳ ಕ್ರೆಡಿಟ್ ಕೋ- ಅಪರೇಟವ್ ಸೊಸೈಟಿ ಕೂಡ ರಾಜ್ಯಕ್ಕೆ ಮಾದರಿಯಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ,ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಹಕಾರ ಸಂಘ ಸ್ಥಾಪಿಸುವ ಬಹುದಿನದ ಕನಸು ಈಗ ನನಸಾಗಿರುವ ಸಂತೃಪ್ತಿ ಹೊಂದಿದ್ದು, ತಾಲೂಕಿನ ಜನರ ಆಶೋತ್ತರಗಳಿಗೆ ಈ ಸೊಸೈಟಿ ಆರ್ಥಿಕ ಅಗತ್ಯಗಳಿಗೆ ನೆರವಾಗಲಿದೆ ಎಂದರು. ಗ್ರಾಹಕರ ಮತ್ತು ಸೊಸೈಟಿ ಬಾಂಧವ್ಯವನ್ನು ಸೂಚಿಸುವ ದೃಷ್ಟಿಯಿಂದ ಹಸು-ಕರುವಿನ ಲಾಂಛನವನ್ನು ಸೊಸೈಟಿ ಹೊಂದಿದ್ದು,ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ,ನಿಸ್ವಾರ್ಥ ಮನೋಭಾವವುಳ್ಳವರನ್ನು  ಆಡಳಿತ ಮಂಡಳಿಗೆ ಆಯ್ಕೆಗೊಳಿಸಲಾಗಿದೆ ಎಂದ ಅವರು ಜನರಿಗೆ ವಿಶ್ವಾಸ ಬರುವ ರೀತಿಯಲ್ಲಿ ಸೊಸೈಟಿಯ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದರು. ರಾಜ್ಯದ  ಸಹಕಾರಿ ರಂಗದಲ್ಲಿ ಬಂಟ್ವಾಳ ತಾಲೂಕು ತನ್ನದೇ ಆದ ಛಾಪನ್ನು ಮೂಡಿಸಿದ್ದು,ಸಹಕಾರಿ ಕ್ಷೇತ್ರದಲ್ಲೂ ಜಿಲ್ಲೆಯ ಜನರು ಈಗಲೂ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಅತಿಥಿಯಾಗಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ,ಸಾಂಕೇತಿಕವಾಗಿ ಠೇವಣಿಪತ್ರ ಹಸ್ತಾಂತರಿಸಿ ಆರ್ಥಿಕ ಸಂಸ್ಥೆಯಿಂದಲೂ ಜನಸೇವೆ ಮಾಡಲು ಸಾಧ್ಯ ಎಂದರು. ಕರ್ನಾಟಕ ತುಳು ಸಾಹಿತ್ಯ ಆಕಾಡಮಿ ಅಧ್ಯಕ್ಷ ಎ. ಸಿ. ಭಂಡಾರಿ ಅವರು ಉಳಿತಾಯ ಖಾತೆ ಪುಸ್ತಕವನ್ನು ಗ್ರಾಹಕರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು. ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಗಣಕೀರಣವನ್ನು  ಉದ್ಘಾಟಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್ ಅವರು ವರದಿವಾಚಿಸಿ  ಸಹಕಾರ ತತ್ವದಡಿ ಕಾರ್ಯಾಚರಿಸಲಿರುವ  ಈ ಸೊಸೈಟಿ ಈಗಾಗಲೇ 608 ಮಂದಿ ಸದಸ್ಯರನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಗಣಕೀಕೃತಗೊಂಡು ಆಭರಣ,  ವಾಹನ , ಕೃಷಿಯೇತರ ಸಾಲ ಸೌಲಭ್ಯಗಳು ದೊರೆಯಲಿದೆ ಎಂದರಲ್ಲದೆ ಮುಂದೆ ತಾಲೂಕಿನ ಗ್ರಾಮೀಣ ಭಾಗಗಳಿಗೂ  ವಿಸ್ತರಿಸುವ ಇರಾದೆ ಇದೆ ಎಂದರು.  ಬಂಟ್ವಾಳ ಭೂ ಬ್ಯಾಂಕ್ ಅಧ್ತಕ್ಷ , ಸೊಸೈಟಿ ನಿರ್ದೇಶಕ ಸುದರ್ಶನ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಂಟ್ವಾಳ ತಾಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ತ್ರಿವೇಣಿರಾವ್,ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಮೋನಪ್ಪ ಶೆಟ್ಟಿ ಎಕ್ಕಾರು,ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘ ದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್  ಪಚ್ಚಿನಡ್ಕ,ಸೊಸೈಟಿಯ ಸಲಹಾ ಸಮಿತಿಯಲ್ಲಿ ಪ್ರಕಾಶ ಕಾರಂತ, ಬಿ.ಎಚ್. ಖಾದರ್, ಉಪಾಧ್ಯಕ್ಷ ಮಾಯಿಲಪ್ಪ ಸಾಲಿಯಾನ್,  ನಿರ್ದೇಶಕರಾದ ಪದ್ಮಶೇಖರ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಮಂಜುಳಾ ಮಾಧವ ಮಾವೆ, ವಾಣಿ ಪ್ರಕಾಶ ಕಾರಂತ, ಪಿಯೂಸ್ ಎಲ್. ರೋಡ್ರಿಗಸ್, ನಾರಾಯಣ ನಾಯಕ್, ಆಲ್ಫೋನ್ಸ್ ಮಿನೇಜಸ್, ಅಮ್ಮು ಅರ್ಬಿಗುಡ್ಡೆ  ಉಪಸ್ಥಿತರಿದ್ದರು. ನಿರ್ದೇಶಕರು,ಜಿಪಂಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸ್ವಾಗತಿಸಿದರು.ಇನ್ನೊರ್ವ ನಿರ್ದೇಶಕ,ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ವಂದಿಸಿದರು.ಕಲಾವಿದ ಎಚ್.ಕೆ.ನಯನಾಡ್ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!