ಅಯೋಧ್ಯೆ ತೀರ್ಪು: ಏನಿದು ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ?

ನವದೆಹಲಿ: ದಶಕಗಳ ಕಾಲದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಶನಿವಾರ ತೀರ್ಪು ಪ್ರಕಟಿಸಲಿರುವ ಸುಪ್ರೀಂ ಕೋರ್ಟ್ ನ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ. 69 ವರ್ಷಗಳ ರಾಮಜನ್ಮಭೂಮಿ-ಬಾಬ್ರಿ  ಮಸೀದಿ ವ್ಯಾಜ್ಯ ಇಂದು ತೆರೆ ಬೀಳಲಿದೆ.

 
ಸುಪ್ರೀಂ ಕೋರ್ಟ್ ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ನ್ಯಾಯಾಧೀಶ ರಂಜನ್ ಗೊಗೊಯ್, ಮುಂದಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಝೀರ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.


ಇಷ್ಟಕ್ಕೂ ಈ ಅಯೋಧ್ಯೆ ವಿವಾದವೇನು, ಕಾನೂನು ಹೋರಾಟಗಳೇನು?


ಅಯೋಧ್ಯೆ ವಿವಾದ ಎಂದರೇನು?: ಹಿಂದೂ ಪುರಾಣದ ಪ್ರಕಾರ ರಾಮ ದೇವರು ಸರಯೂ ನದಿ ತೀರದಲ್ಲಿರುವ ಅಯೋಧ್ಯೆ ಪಟ್ಟಣದಲ್ಲಿ ಜನಿಸಿದ್ದ ಎಂದು ಹೇಳುತ್ತದೆ. ಅಯೋಧ್ಯೆ ಇರುವುದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯಲ್ಲಿ. ಹಿಂದೂಗಳ ನಂಬಿಕೆ ಪ್ರಕಾರ ರಾಮನ ಜನ್ಮಸ್ಥಳದಲ್ಲಿ ದೇವಸ್ಥಾನವೊಂದನ್ನು ನಿರ್ಮಾಣ ಮಾಡಲಾಗಿತ್ತು. ಭಾರತದ ಇತಿಹಾಸದಲ್ಲಿ ಮೊಘಲ್ ದೊರೆ ಬಾಬರ್ 1528ರಲ್ಲಿ ಈ ದೇವಸ್ಥಾನದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿ ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದ ಎಂದು ಹೇಳಲಾಗುತ್ತದೆ. ಇದನ್ನೇ ಬಾಬ್ರಿ ಮಸೀದಿ ಎಂದು ಕರೆಯಲಾಗುತ್ತಿದ್ದು ಅದನ್ನು 1992ರ ಡಿಸೆಂಬರ್ 6ರಂದು ಕರಸೇವಕರು ಹೋಗಿ ಕೆಡವಿ ಹಾಕಿದರು. ಮಸೀದಿ ಇದ್ದ 2.77 ಎಕರೆ ಭೂಮಿ ಇಷ್ಟು ವರ್ಷಗಳ ಕಾಲ ವಿವಾದದ ಕೇಂದ್ರಬಿಂದುವಾಗಿತ್ತು.


ಪ್ರಕರಣದಲ್ಲಿ ದಾವೆ ಹೂಡಿದವರು ಯಾರು?:ಈ ಪ್ರಕರಣ ಮೂರು ಮುಖ್ಯ ಕಕ್ಷಿದಾರರಿದ್ದಾರೆ. ನಿರ್ಮೊಹಿ ಅಕರ(ದೇವಸ್ಥಾನದ ವ್ಯವಸ್ಥಾಪಕರು), ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್(ಎಲ್ಲಾ ವಕ್ಫ್ ಗಳ ಆಡಳಿತಾಧಿಕಾರಿಗಳು) ಮತ್ತು ರಾಮ್ ಲಲ್ಲಾ. ರಾಮ್ ಲಲ್ಲಾ ಈ ಕೇಸಿನಲ್ಲಿ ಪ್ರವೇಶವಾಗಿದ್ದು 1980ರಲ್ಲಿ, ಅದು ಅಲಹಾಬಾದ್ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಮತ್ತು ರಾಮ ದೇವರ ಪರಮ ಭಕ್ತರಾಗಿರುವ ದಿಯೊಕಿ ನಂದನ್ ಅಗರ್ವಾಲ್ ಮೂಲಕ. ನಂತರ ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಇಕ್ಬಾಲ್ ಅನ್ಸಾರಿಯಂತಹ ವ್ಯಕ್ತಿಗಳು ದಾವೆ ಹೂಡಿದ್ದರು.

ನ್ಯಾಯಾಲಯಕ್ಕೆ ಕೇಸು ಬಂದಿದ್ದು ಯಾವಾಗ, ಕೋರ್ಟ್ ನಲ್ಲಿ ಏನಾಯ್ತು: 1822ರಲ್ಲಿ ಫೈಜಾಬಾದ್ ಕೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಅಧಿಕಾರಿ ಮಸೀದಿಯ ಕೆಳಗೆ ರಾಮನ ದೇವಸ್ಥಾನವಿತ್ತು ಎಂದು ಕೇಸು ಹಾಕಿದ್ದರು. ಆದರೆ ಆ ಅರ್ಜಿ ಕೋರ್ಟ್ ನಲ್ಲಿ ವಜಾ ಆಯಿತು.


ನಂತರ 1949ರ ಡಿಸೆಂಬರ್ ನಲ್ಲಿ ಹಿಂದೂ ಕಾರ್ಯಕರ್ತರು ಮಸೀದಿ ಪ್ರವೇಶಿಸಿ ರಾಮನ ಮೂರ್ತಿಯನ್ನು ಇಟ್ಟರು. ಆಗ ಗಲಾಟೆ, ಗದ್ದಲ ನಡೆಯಿತು. ಸರ್ಕಾರ ಕೋಮುಗಲಭೆಯನ್ನು ತಣ್ಣಗಾಗಿಸಲು ಮಸೀದಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ರಾಮನ ಮೂರ್ತಿಯನ್ನು ತೆಗೆಯಬೇಡಿ ಎಂದು ಕೋರ್ಟ್ ಆದೇಶ ಮಾಡಿತು. ಮಸೀದಿಯಾಗಿ ಬಳಸುವುದಕ್ಕೆ ಸಹ ತಡೆ ನೀಡಿತು.

ನಂತರದ ವರ್ಷಗಳಲ್ಲಿ ಈ ಜಾಗ ತಮಗೆ ಸೇರಿದ್ದು ಎಂದು ಹಿಂದೂ-ಮುಸ್ಲಿಂರಿಬ್ಬರೂ ಕೋರ್ಟ್ ನಲ್ಲಿ ದಾವೆ ಹೂಡುತ್ತಿದ್ದರು.
1986ರಲ್ಲಿ ಹಿಂದೂಗಳಿಗೆ ಅಲ್ಲಿ ಪೂಜೆ ಮಾಡಲು ಫೈಜಾಬಾದ್ ಕೋರ್ಟ್ ಅವಕಾಶ ಕಲ್ಪಿಸಿತು. ಅಂದಿನ ರಾಜೀವ್ ಗಾಂಧಿ ಸರ್ಕಾರ ವಿಶ್ವ ಹಿಂದೂ ಪರಿಷತ್ ಗೆ ಬಾಬ್ರಿ ಮಸೀದಿ ಪಕ್ಕದಲ್ಲಿಯೇ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಅವಕಾಶ ನೀಡಿತ್ತು.


1990-91ರಲ್ಲಿ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ರಾಮ ದೇವಾಲಯ ನಿರ್ಮಾಣಕ್ಕೆ ರಥ ಯಾತ್ರೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಕರಸೇವಕರು ಅಯೋಧ್ಯೆಯಲ್ಲಿ ಸೇರಿದ್ದರಿಂದ ಮತ್ತೆ ಹಿಂದೂ-ಮುಸ್ಲಿಂ ಗಲಾಟೆಯಾಯಿತು.


ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಯಾವಾಗ? ನಂತರ ಏನಾಯ್ತು?: 1992ರ ಡಿಸೆಂಬರ್ 6ರಂದು ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದರು. ಈ ಸಂದರ್ಭದಲ್ಲಿ ಭಾರೀ ಗಲಾಟೆಯಾಗಿತ್ತು. ನಂತರ ಕೋರ್ಟ್ ನಲ್ಲಿ ಪ್ರಕರಣ ಮುಂದುವರಿಯುತ್ತಿತ್ತು. 2010ರ ಸೆಪ್ಟೆಂಬರ್ ನಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ಮೂವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು.


ಇಷ್ಟು ವರ್ಷಗಳ ಕಾಲ ವಾದ-ಪ್ರತಿವಾದ ವಿಚಾರಣೆ ನಡೆಯಿತು. ಕಳೆದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕೂಡ ಸುಪ್ರೀಂ ಕೋರ್ಟ್ ಪ್ರತಿದಿನವೆಂಬಂತೆ 40 ದಿನಗಳ ಕಾಲ ವಿಚಾರಣೆ ನಡೆಸಿ ನವೆಂಬರ್ 17ರೊಳಗೆ ತೀರ್ಪು ನೀಡುವುದಾಗಿ ಕಾಯ್ದಿರಿಸಿತ್ತು. 

2010ರಲ್ಲಿ ಅಲಹಾಬಾದ್ ಕೋರ್ಟ್ ಕೊಟ್ಟ ತೀರ್ಪು ಏನು?: ಸೆಪ್ಟೆಂಬರ್ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ದಾವೆ ಹೂಡಿದ ಮೂವರೂ ಸಮಾನವಾಗಿ ಭೂಮಿಯನ್ನು ಹಂಚಿಕೊಳ್ಳಿ ಎಂದು ತೀರ್ಪು ಕೊಟ್ಟಿತ್ತು. ಒಳ ಪ್ರಾಂಗಣ (ನೆಲಸಮಗೊಳಿಸುವ ಮೊದಲು ಕೇಂದ್ರ ಗುಮ್ಮಟ ನಿಂತಿದ್ದ ಸ್ಥಳ) ರಾಮ್ ಲಲ್ಲಾಗೆ, ರಾಮ್ ಚಬುತ್ರ ಮತ್ತು ಸೀತಾ ರಸೋಯಿ ನಿರ್ಮೋಹಿ ಅಖಾರಕ್ಕೆ ಮತ್ತು ಸುತ್ತಮುತ್ತಲಿನ ಹೆಚ್ಚುವರಿ ಭೂಮಿಯನ್ನು ಮುಸ್ಲಿಂರಿಗೆ ಎಂದು ತೀರ್ಪು ಕೊಟ್ಟಿತ್ತು. 


ರಾಮ ದೇವಸ್ಥಾನ ಇತ್ತು ಎನ್ನುವುದಕ್ಕೆ ಪುರಾವೆ ಇದೆಯೇ?: ಅಲಹಾಬಾದ್ ಹೈಕೋರ್ಟ್ ನ ಆದೇಶದಂತೆ ಭಾರತೀಯ ಪುರಾತತ್ವ ಇಲಾಖೆ 2003ರಲ್ಲಿ ತನಿಖೆ ನಡೆಸಿತ್ತು. ಅದು ತನ್ನ ವರದಿಯಲ್ಲಿ ಎಎಸ್ಐ, ದೇವಾಲಯ ಮಾದರಿಯಲ್ಲಿ ಗೋಡೆ, ಗೋಪುರ ಮತ್ತು ರಚನೆ ಮಸೀದಿ ಕೆಡವಿದ ಕೆಳಗಿನ ಜಾಗದಲ್ಲಿ ಇದೆ. ಆದರೆ ಈ ಸಮೀಕ್ಷೆಯಿಂದಲೂ ವಿವಾದ ಕೇಳಿಬಂತು.


ಕೋರ್ಟ್ ನಲ್ಲಿ ಅರ್ಜಿ ಹಾಕಿದ ಮೂವರು ಹೇಳಿದ್ದೇನು?: ನಿರ್ಮೋಹಿ ಅಖರಾ ಮತ್ತು ರಾಮ್ ಲಲ್ಲಾ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹೇಳಿದರೆ ಮುಸ್ಲಿಂ ಪಾರ್ಟಿ ಅದೇ ಸ್ಥಳದಲ್ಲಿ ಮಸೀದಿಯನ್ನು ಪುನರ್ನಿರ್ಮಿಸಲು ಬಯಸುತ್ತಿದೆ.

Leave a Reply

Your email address will not be published. Required fields are marked *

error: Content is protected !!