ಅಡ್ಡ ರಸ್ತೆ ತಂದ ಫಜೀತಿ!!
ಇನ್ನೇನು ಮನೆ ಸೇರಬೇಕು ಎನ್ನುವಷ್ಟರಲ್ಲಿ ನನ್ನ ಮಂಗಳೂರಿನ ಗಳೆಯ ಸಂದೀಪನ ಕಾಲ್ ರಿಂಗೆಣಿಸಿತು..”ಏನೋ ಸಂದೀಪ ಬಹಳ ದಿನಗಳ ಬಳಿಕ ಕಾಲ್ ಮಾಡಿದ್ದೀಯ” ಎಂದು ಮಾತು ಆರಂಭಿಸಿದಾಗ “ಏನಿಲ್ಲ ಇಲ್ಲೇ ಪಕ್ಕದಲ್ಲಿ ನಾಳೆ ಯಕ್ಷಗಾನ ಇದೆ,ನೀವೆಲ್ಲ ಗೆಳೆಯರು ಸೇರಿ ನಾಳೆ ಮಂಗಳೂರಿಗೆ ಬಂದುಬಿಡಿ” ಹೇಳಿ ತರಾತುರಿಯಲ್ಲಿ ಕಾಲ್ ಇಟ್ಟ.ಸಂದೀಪನಿಗೆ ಯಕ್ಷಗಾನ,ದೂರದ ಪ್ರಯಾಣ,ಟ್ರಕ್ಕಿಂಗ್ ಹೀಗೆ ಅನೇಕ ಹವ್ಯಾಸ ಹಾಗೆಯೇ ಹೊದಲ್ಲೆಲ್ಲಾ ಏನಾದರೊಂದು ಫಜೀತಿ ಮಾಡಿಕೊಳ್ಳದೆ ಬರುವವನಲ್ಲ.
ನನ್ನ ಗೆಳೆಯರಿಗೆಲ್ಲ ಯಕ್ಷಗಾನದಲ್ಲಿ ಆಸಕ್ತಿ ಜಾಸ್ತಿ..ಅದರಲ್ಲೂ ಕಟೀಲು ಮೇಳದ “ಶ್ರೀದೇವಿ ಮಹಾತ್ಮೆ” ಪ್ರಸಂಗ ಇದ್ದರೆ ಅಲ್ಲಿ ನಮ್ಮ ಹಾಜರಾತಿ ಇದ್ದೇ ಇದೆ.ಮಾರನೆಯ ದಿನ ನಾನು ನನ್ನ ಸ್ನೇಹಿತರ ಜೊತೆ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದೆ..ಹೇಳಿದ ಸಮಯಕ್ಕಿಂತ ಸ್ವಲ್ಪ ಲೇಟಾಗಿಯೇ ತಲುಪಿದ್ದ ನಮ್ಮನ್ನು ರೇಗುತ್ತಲ್ಲೇ ಬರಮಾಡಿಕೊಂಡ ಸಂದೀಪ ಊಟಕ್ಕೂ ಸಮಯ ಕೊಡದೆ ಯಕ್ಷಗಾನದ ಜಾಗಕ್ಕೆ ಕರೆದುಕೊಂಡು ಹೋಗಿದ್ದ.
ಭಾರೀ ಜನಸಾಗರದ ನಡುವೆ ಹೂವಿನ ಉಯ್ಯಾಲೆಯಲ್ಲಿ ಕೂತಿದ್ದ ದೇವಿ,ರಂಗಸ್ಥಳ..ನಿಜಕ್ಕೂ ಆ ಸ್ವರ್ಗ ಲೋಕವೇ ಧರೆಗಿಳಿದು ಬಂದಂತಿತ್ತು.ಹೀಗೆ ಯಕ್ಷಗಾನ ನೋಡುತ್ತಲೇ ನಮ್ಮನ್ನೇ ನಾವು ಮೈಮರೆತ್ತಿದ್ದಾಗ ವೇದಿಕೆಗೆ ಮಹಿಷಾಸುರನ ಅಬ್ಬರದ ಆಗಮನ..
ಇತ್ತ ನಾವು ಬೇಡವೆಂದರೂ ಸುಡುಮದ್ದಿನ ಪಕ್ಕದಲ್ಲಿ ಹೋಗಿ ಕೂತಿದ್ದ ಸಂದೀಪನ ಬಟ್ಟೆಯಲ್ಲಿ ನಾಲ್ಕು ತೂತುಗಳಾಗಿದ್ದವು.!!.ಹಸಿದ ಹೊಟ್ಟೆಯಲ್ಲೇ ಇದ್ದ ನಮಗೆ,ಒಂದೆಡೆ ಅವನ ಮೇಲೆ ಸಿಟ್ಟಿದ್ದರೂ..ಬಟ್ಟೆಯ ಮೇಲಿನ ತೂತು ನಮ್ಮ ಹೊಟ್ಟೆ ತುಂಬುವಷ್ಟು ನಗಿಸಿತ್ತು.
ಅಷ್ಟರಲ್ಲೇ “ನಿಮಗೆ ದೂರ ಹೋಗಬೇಕಿಗೆ..ಇನ್ನು ಹೊರಡೋಣ”ವೆಂದ ಸಂದೀಪ ನ ಹಿತ ನುಡಿಗೆ ಸಮ್ಮತಿ ಸೂಚಿಸಿ ಅಲ್ಲಿಂದ ಹೊರಟೆವು..ನನಗನಿಸಿದ ಪ್ರಕಾರ ನಾವು ಪಾರ್ಕ್ ಮಾಡಿದ್ದ ಸ್ಥಳಕ್ಕೂ ಯಕ್ಷಗಾನ ನಡೆಯುತ್ತಿದ ಸ್ಥಳಕ್ಕೂ ಕಾಲ್ನಡಿಗೆಯಲ್ಲಿ 15 ನಿಮಿಷ ಬೇಕಿತ್ತು.ಯಾಕಂದರೆ ಕಾಲು ದಾರಿಯಾಗಿ ಹೋಗಬೇಕಿತ್ತು.ಆದರೆ “ಇದಕ್ಕಿಂತ ಇನ್ನೊಂದು ಸನಿಹದ ದಾರಿ ಇದೆ” ಎಂದ ಸಂದೀಪ ನಮ್ಮನ್ನು ದಾರಿ ತಪ್ಪಿಸಿದ್ದ.!!.ಒಂದೆಡೆ ಕತ್ತಲೆಯಾದರೆ ಇನ್ನೊಂದೆಡೆ ನಾಯಿಗಳ ಉಪದ್ರ..ನಾವು ಎಷ್ಟೇ ಬೇಡವೆಂದರೂ ನಮ್ಮನ್ನು ಅಟ್ಟಾಡಿಸಿ ಓಡಿಸಿಕೊಂಡು ಬಂದಿದ್ದ ನಾಯಿಯನ್ನು ಪುಸಲಾಯಿಸಲು ಹೋಗಿದ್ದ ಸಂದೀಪ,ನಾಯಿಯ ಜೊತೆ ಸೆಣಸಾಡಿ ಕಚ್ಚಿಸಿಕೊಂಡು ಬಂದಿದ್ದ.
ಕೊನೆಗೂ ನಾವು ಪಾರ್ಕ್ ಮಾಡಿದ್ದ ಸ್ಥಳ ತಲುಪುವಷ್ಟರಲ್ಲಿ ಸೂರ್ಯ ಉದಯಿಸಿದ್ದ.!!!.’ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ಎಂಬಂತೆ ಸಂದೀಪ “ಮುಂದಿನ ವಾರ ಇಲ್ಲೇ ಪಕ್ಕದಲ್ಲಿ ಇನ್ನೊಂದು ಪ್ರಸಂಗವಿದೆ” ಅನ್ನುತ್ತಲೇ ನಾವೆಲ್ಲ ಬಿದ್ದು ಬಿದ್ದು ನಕ್ಕು ಪ್ರಯಾಣ ಬೆಳೆಸಿದೆವು..
ರೂಪೇಶ್ ಜೆ.ಕೆ