ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಸೀತಾರಾಮನ್

ನವದೆಹಲಿ: 2020ರ ಮಾರ್ಚ್ ಒಳಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆಯನ್ನು ಮಾರಾಟ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಕೋಟಿ ರುಪಾಯಿಗಳನ್ನು ಕ್ರೋಢಿಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಎರಡು ಸಂಸ್ಥೆಗಳನ್ನು ಮಾರಾಟ ಮಾಡಲಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಮುಂದುವರೆದಿದ್ದು ಇದೇ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ನಿರ್ಮಲಾ ಹೇಳಿದ್ದಾರೆ.

ವಿಮಾನಯಾನ ಸಂಸ್ಧೆ ಏರ್ ಇಂಡಿಯಾ ಮಾರಾಟದ ಸಂಬಂಧ ಅಂತಾರಾಷ್ಟ್ರೀಯ ರೋಡ್ ಶೋಗಳಲ್ಲಿ ಹೂಡಿಕೆದಾರರಿಂದ ವ್ಯಾಪಕ ಆಸಕ್ತಿ ವ್ಯಕ್ತವಾಗಿದೆ. ಒಂದು ವರ್ಷದ ಹಿಂದೆಯೇ ಮಾರಾಟ ಮಾಡುವ ಪ್ರಕ್ರಿಯೆ ನಡೆದಿತ್ತು. ಆದರೆ ಅಂದು ಹೂಡಿಕೆದಾರರಿಂದ ಸೂಕ್ತ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂದರು.

ತೆರಿಗೆ ಸಂಗ್ರಹ ಒತ್ತಡದ ಸ್ಥಿತಿಯಲ್ಲಿ ಈ ಬಂಡವಾಳ ಹಿಂದೆಗೆತ ಕ್ರಮದಿಂದ ಸರ್ಕಾರ ಆದಾಯ ಹೆಚ್ಚುವ ನಿರೀಕ್ಷೆ ಇದೆ. ಆರ್ಥಿಕ ಹಿಂಜರಿತವನ್ನು ತಡೆಯಲು ಸರ್ಕಾರ ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು ಹಲವು ವಲಯಗಳು ಒತ್ತಡದಿಂದ ಹೊರಬರುತ್ತಿವೆ ಎಂದರು. 

Leave a Reply

Your email address will not be published. Required fields are marked *

error: Content is protected !!