ನೋಡ ನೋಡುತ್ತಲೇ ದೈತ ಅಲೆಗಳಿಗೆ ಬಲಿಯಾದ ವ್ಯಕ್ತಿ

ಕುಂದಾಪುರ: ದೈತ್ಯ ಅಲೆಗಳ ರಭಸಕ್ಕೆ ಸಿಕ್ಕು ಸಮುದ್ರ ಪಾಲಾದ ವ್ಯಕ್ತಿಯೋರ್ವರ ಮೃತ ದೇಹವನ್ನು ಸತತ ಕಾರ್ಯಾಚರಣೆ ಬಳಿಕ ಮೇಲಕ್ಕೆತ್ತಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀಮಹಾರಾಜಾ ವರಾಹ ಸ್ವಾಮಿ ದೇವಸ್ಥಾನ ಬಳಿ ಸಮುದ್ರದಲ್ಲಿ ನಡೆದಿದೆ.

ಮೂಲತಃ ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (45) ಮೃತ ವ್ಯಕ್ತಿ.

ಘಟನೆ ವಿವರ: ವಿದೇಶದಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದ ಚೇತನ್ ಶೆಟ್ಟಿ ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಭಾನುವಾರದಂದು ಸಮುದ್ರ ವಿಹಾರಕ್ಕೆಂದು ಮರವಂತೆ ಸಮುದ್ರಕ್ಕೆ ತೆರಳಿದ್ದು ಅಲ್ಲಿನ ಬಂಡೆ ಕಲ್ಲುಗಳ ಮೇಲಿದ್ದ ಅವರು ಅಲೆಗಳ ರಭಸಕ್ಕೆ ಸಿಲುಕಿ ನೀರು ಪಾಲಾಗಿದ್ದರು. ತದನಂತರ ಅಗ್ನಿಶಾಮಕ ದಳ, ಗಂಗೊಳ್ಳಿ ಪೊಲೀಸರು ಹಾಗೂ ಮೀನುಗಾರರು ಹುಡುಕಾಟ ನಡೆಸಿ ಚೇತನ್ ಶೆಟ್ಟಿ ಮೃತದೇಹವನ್ನು ಪತ್ತೆಮಾಡಿದ್ದಾರೆ. ಚೇತನ್ ಎಲ್ಲರೊಂದಿಗೂ ಒಳ್ಳೆಯ ಬಾಂಧವ್ಯವಿಟ್ಟುಕೊಂಡಿದ್ದು ಅವರ ಸಾವು ಆಪ್ತರನ್ನು ದುಃಖಕೀಡುಮಾಡಿದೆ.

ಕಳೆದೆರಡು ವರ್ಷಗಳ ಹಿಂದಷ್ಟೇ ಅವರ ಪತ್ನಿಯೂ ನಿಧನರಾಗಿದ್ದು, ಚೇತನ್ ಅವರ ಸಣ್ಣ ಪ್ರಾಯದ ಹೆಣ್ಣು ಮಗು ತಂದೆ-ತಾಯಿಯನ್ನು ಕಳೆದುಕೊಂಡಂತಾಗಿದೆ.ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!