ಸ್ಟೆಲ್ಲಾ ಮಾರಿಸ್ ದೇವಾಲಯ ಕಲ್ಮಾಡಿ : 9 ದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ

ಕಲ್ಮಾಡಿ : ಇಂದಿನ ನಮ್ಮ ಜೀವನದಲ್ಲಿ ಶ್ರೀಮಂತಿಕೆಯೆ ಸರ್ವಸ್ವ ಎಂದು ನಾವು ನಂಬುತ್ತೇವೆ. ಶ್ರೀಮಂತಿಕೆ ಇದ್ದರೆ ನಮ್ಮ ದೈನಂದಿನ ಜೀವನದಲ್ಲಿ ತೃಪ್ತಿ ಸಿಗುತ್ತದೆ ಎಂಬುದು ನಮ್ಮ ಭಾವನೆ. ಬಡತನ ಯಾರಿಗೂ ಬೇಡ. ಬಡತನದಲ್ಲಿ ನಾವು ಇದ್ದರೆ ನಮಗೆ ಸಮಾಧಾನ ದೊರಕುವುದಿಲ್ಲ ಎಂಬುದು ನಮ್ಮ ಭಾವನೆ. ಆದರೆ ನಮ್ಮ ದೈನಂದಿನ ಜೀವನದಲ್ಲಿ ಆಧ್ಯಾತ್ಮಿಕ ಶ್ರೀಮಂತಿಕೆ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸಂತ ಜೋಸೇಫರ ಸೆಮಿನರಿ ಮಂಗಳೂರು ಇದರ ರೆಕ್ಟರ್ ಆಗಿರುವ ವಂದನೀಯ ಫಾ. ರೊನಾಲ್ಡ್ ಸೆರಾವೋ ನುಡಿದರು .

ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ವೆಲಂಕಣಿ ಮಾತೆಯ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಿ ಪ್ರಧಾನ ಧರ್ಮಗುರುಗಳಾಗಿ ಭಕ್ತರಿಗೆ ಸಂದೇಶ ನೀಡಿದರು.

ದೈನಂದಿನ ನಮ್ಮ ಜೀವನದಲ್ಲಿ ಆಧ್ಯಾತ್ಮಿಕ ಶ್ರೀಮಂತಿಕೆ ಮಹತ್ವ ಕೊಡೋಣ. ನಮ್ಮ ಭರವಸೆ ಬಂಡೆ ಕಲ್ಲಿನ ಮೇಲೆ ಕಟ್ಟಿದ ಮನೆಯಾಗಿರಬೇಕು. ಮರಿಯ ಮಾತೆ ತನ್ನ ಪ್ರೀತಿ ಮತ್ತು ಸೇವಾ ಮನೋಭಾವದಿಂದ ಲೋಕಕ್ಕೆ ಮಾದರಿಯಾದವರು. ಮರಿಯಾ ಮಾತೆ ತಮ್ಮ ಜೀವನದಲ್ಲಿ ಸದಾ ವಿಶ್ವಾಸಯುಕ್ತ ವ್ಯಕ್ತಿಯಾಗಿ ಬದುಕಿದ್ದು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಸದಾ ಅಳವಡಿಸುವುದರೊಂದಿಗೆ ಕುಟುಂಬಗಳನ್ನು ವಿಶ್ವಾಸದ ಬದುಕಿಗೆ ದಾರಿ ಯಾಗಿಸಿ ಕೊಳ್ಳಬೇಕು ಎಂದರು.

ವಾರ್ಷಿಕ ಮಹಾ ಹಬ್ಬಕ್ಕೆ ತಯಾರಿಯಾಗಿ 9 ದಿನಗಳ ನೊವೆನಾ ಪ್ರಾರ್ಥನೆಯ ಮೊದಲ ದಿನ ಭಕ್ತ ವೃಂದ ಮತ್ತು ವಿಶ್ವಾಸಿಗಳಿಗಾಗಿ ‘ಮರಿಯಾ ಮಾತೆ ಪಾರಮಾರ್ಥಿಕವಾಗಿ ಬಡವರು ದೇವರಲ್ಲಿ ವಿಶ್ವಾಸ ಸಲು ಕರೆ ನೀಡುತ್ತಾರೆ’ ವಿಷಯದ ಮೇಲೆ ಪ್ರಧಾನ ಧರ್ಮಗುರುಗಳು ಸಂದೇಶವನ್ನು ನೀಡಿದರು.ಮಂಗಳೂರು ಸಂತ ಜೋಸೆಫ್ ಸೆಮಿನರಿ ರೆಕ್ಟರ್ ವಂದನೀಯ ಫಾ. ರೊನಾಲ್ಡ್ ಸೆರಾವೋ ಚರ್ಚ್ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾದ ಮಾನಸ್ತಂಭದಲ್ಲಿ ವೆಲಂಕಣಿ ಮಾತೆಯ ಬಾವುಟವನ್ನು ಹಾರಿಸುವುದರೊಂದಿಗೆ ಚಾಲನೆಯನ್ನು ನೀಡಿದರು.

ನೂರಾರು ಕ್ರೈಸ್ತ ಭಕ್ತರು ಭಾಗವಹಿಸಿದ ಪ್ರಥಮ ದಿನದ ನೊವೆನಾ ಪ್ರಾರ್ಥನೆಯಲ್ಲಿ ವಿಶೇಷ ಪ್ರಾರ್ಥನಾ ವಿಧಿಗಳನ್ನು ಧರ್ಮಗುರುಗಳು ನಡೆಸಿದರು. ಪುಣ್ಯ ಕ್ಷೇತ್ರದ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ, ವಾರ್ಷಿಕ ಮಹೋತ್ಸವದ ಉಸ್ತುವಾರಿ ಫಾ. ಪ್ರವೀಣ್ ಮೊಂತೆರೊ ಮತ್ತು ಫಾ. ಚಾರ್ಲ್ಸ್ ಪ್ರಾರ್ಥನಾ ವಿಧಿಗಳಲ್ಲಿ ಉಪಸ್ಥಿತರಿದ್ದರು.

ಆಗಸ್ಟ್ 14 ರಂದು ಮಾತೆ ಮರಿಯಮ್ಮನವರ ತೇರಿನ ಮೆರವಣಿಗೆ ಆದಿ ಉಡುಪಿ ಜಂಕ್ಷನ್ ನಿಂದ ಕಲ್ಮಾಡಿ ಚರ್ಚ್ ವರೆಗೆ ಸಾಗಲಿದ್ದು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ನಡೆಯುವ ದಿವ್ಯ ಬಲಿಪೂಜೆಯ ಪ್ರಧಾನ ಧರ್ಮಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪೌಲ್ ಸಲ್ದಾನ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ. ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆ ಆಗಸ್ಟ್ 15 ರಂದು ಸಂಜೆ 4 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಬಲಿಪೂಜೆ ನಡೆಯಲಿದೆ.

ಫೋಟೋ : ಪ್ರವೀಣ್ ಕೊರೆಯ, ಸ್ಯಾನಿಡಿಜಿಟಲ್

Leave a Reply

Your email address will not be published. Required fields are marked *

error: Content is protected !!