ಉಡುಪಿ ಜಿಲ್ಲೆಯಲ್ಲಿ ಮಳೆ ಹಾನಿಯಿಂದ 63 ಕೋಟಿ ರೂ. ನಷ್ಟ : ಸಂಸದೆ ಶೋಭ ಕರಂದ್ಲಾಜೆ

ಉಡುಪಿ : ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೀವ ಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟಕ್ಕೊಳಗಾದವರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಿ, ಪರಿಹಾರ ವಿತರಣೆ ಸಂದರ್ಭದಲ್ಲಿ ಸಂತ್ರಸ್ಥರಿಗೆ ಗರಿಷ್ಠ ಪರಿಹಾರ ಒದಗಿಸುವಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಉಡುಪಿ – ಚಿಕ್ಕಮಗಳೂರು ಜಿಲ್ಲೆಯ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಂಸದರ ಸಭಾಂಗಣದಲ್ಲಿ ನಡೆದ ನೆರೆ ಹಾವಳಿ ಮತ್ತು ಪ್ರಾಕೃತಿಕ ವಿಕೋಪ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಳೆಯಿಂದ ಉಂಟಾಗಿರುವ ಹಾನಿಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲಾ ಅಧಿಕಾರಿಗಳೂ ದಿನದ ಇಪ್ಪತ್ತನಾಲ್ಕು ಘಂಟೆಯೂ ಸಾರ್ವಜನಿಕರ ಜೊತೆ ಸಂಪರ್ಕದಲ್ಲಿರಬೇಕು ಮತ್ತು ತುರ್ತು ಸಂಧರ್ಭದಲ್ಲಿ ಜನರ ನೆರವಿಗೆ ಧಾವಿಸಲು ಜಿಲ್ಲಾಧಿಕಾರಿ ಸಹಿತ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಅಗ್ನಿಶಾಮಕ ದಳದವರು ಮತ್ತು ಸಂಬಂಧಪಟ್ಟ ಎಲ್ಲಾ ಇಲಾಖೆಗಳೂ ಸರ್ವ ಸನ್ನದ್ಧರಾಗಿರಬೇಕು ಎಂದರು.

ಜಿಲ್ಲೆಯಲ್ಲಿ ಮಳೆ ಮತ್ತು ನೆರೆಯಿಂದ ಹಾನಿಗೊಳಗಾದವರಿಗೆ ಮಾನವೀಯ ನೆಲೆಯಲ್ಲಿ ಗರಿಷ್ಠ ಪರಿಹಾರವನ್ನು ಒದಗಿಸಿ ಔದಾರ್ಯ ಮೆರೆಯುವಂತೆ ಹೇಳಿದರು. ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ದಾಖಲೆಗಳು ಸರಿ ಇಲ್ಲವೆಂದು ಅವರಿಗೆ ಪರಿಹಾರ ನಿರಾಕರಣೆ ಮಾಡದೆ, ಮನೆಯ ವಾಸ್ತವ್ಯ ಧೃಢೀಕರಣ ಪತ್ರವಿದ್ದಲ್ಲಿ ಪರಿಹಾರದ ಹಣವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ನೆರೆ ಪರಿಹಾರದ ಪ್ರಗತಿ ಪರಿಶೀಲನೆಯ ದೈನಂದಿನ ಸ್ಥಿತಿಯ ವರದಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೆ ನೀಡುತ್ತಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಜಿಲ್ಲೆಯಲ್ಲಿ ನಡೆದಿರುವ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲೆಯಲ್ಲಿ 568 ಮನೆಗಳು ಹಾನಿಗೊಳಗಾಗಿದ್ದು, ಅದರಲ್ಲಿ 303 ಮನೆಗಳಿಗೆ ಈಗಾಗಲೇ 32.65 ಲಕ್ಷ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ ಮನೆಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಲಾಗುವುದು ಎಂದರು. ಮಳೆಯಿಂದಾಗಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 6 ಸಾವಿರ ರೂ. ಗಳು ಮತ್ತು ಸಂಪೂರ್ಣವಾಗಿ ಹಾನಿಗೊಳಗಾಗಿರುವ ಮನೆಗಳಿಗೆ 95, 100 ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತಿದೆ ಎಂದರು. ಪ್ರಾಕೃತಿಕ ವಿಕೋಪ ಪಿ.ಡಿ ಖಾತೆಯಲ್ಲಿ 28.35 ಕೋಟಿ ರೂ. ಗಳ ಅನುದಾನವಿದ್ದು, ತಹಶೀಲ್ದಾರರ ಖಾತೆಗೆ 10 ಲಕ್ಷ ರೂ ಗಳನ್ನು ಮುಂಗಡವಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಳೆದ ಬಾರಿಗೆ ಹೋಲಿಸಿದರೆ ಕಮ್ಮಿಯಾದರೂ ಅಪಾರ ಪ್ರಮಾಣದ ನಷ್ಟವಾಗಿದೆ. ಸಂಬಂಧಪಟ್ಟ ಎಲ್ಲಾ ಇಲಾಖೆಗಳೂ ಸಮರೋಪಾದಿಯಲ್ಲಿ ಕಾರ್ಯನಿರತವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮಳೆ ನೀರು ಮನೆಗೆ ನುಗ್ಗಿರುವ ಮನೆಗಳಿಂದ ಜನರನ್ನು ತೆರವುಗೊಳಿಸಲಾಗಿದೆ ಮತ್ತು ಆರೋಗ್ಯ ಇಲಾಖೆಯ ಜೊತೆಗೂಡಿ ವಿಶೇಷ ಆಹಾರ ಕಿಟ್ ಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಳೆಯಿಂದಾಗಿ ಜಿಲ್ಲೆಯಲ್ಲಿ ಮೂರು ಜನರು ಪ್ರಾಣ ಕಳೆದುಕೊಂಡಿದ್ದು, ಅದರಲ್ಲಿ ಒಬ್ಬ ಮೃತ ವ್ಯಕ್ತಿಯ ಕುಟುಂಬಕ್ಕೆ 4 ಲಕ್ಷ ರೂ ಗಳ ಪರಿಹಾರವನ್ನು ಈಗಾಗಲೇ ನೀಡಿದ್ದು, ಇನ್ನೊಬ್ಬರಿಗೆ ಇಂದು ವಿತರಿಸಲಾಗುವುದು, ಮತ್ತೊಬ್ಬರ ಮರಣ ಪ್ರಮಾಣ ಪತ್ರ ಸಿಕ್ಕಿದ ಕೂಡಲೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದರು.

 

 

 

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ, ಜೀವ ಹಾನಿಗೊಳಗಾದವರಿಗೆ ಈಗಿರುವ ಪರಿಹಾರ ಮೊತ್ತದ ಜೊತೆಗೆ 1 ಲಕ್ಷ ರೂ. ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದು, ಅದರಂತೆಯೆ ಮೃತರಿಗೆ ಒಟ್ಟು 5 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೋಲಿಸ್ ಅಧೀಕ್ಷಕಿ ನಿಶಾ ಜೇಮ್ಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಜಿಲ್ಲೆಯ ಪೋಲೀಸ್ ಸಿಬ್ಬಂದಿಗಳಿಗೆ ರಕ್ಷಣಾ ಕಾರ್ಯದ ಬಗ್ಗೆ ತರಬೇತಿಯನ್ನು ನೀಡಿದೆ. ಇಲಾಖೆಯು ಎರಡು ತಂಡಗಳನ್ನು ನೇಮಿಸಿ ಅಗತ್ಯ ಬಿದ್ದಲ್ಲಿ ಈ ತಂಡಗಳನ್ನು ಕಳುಹಿಸಿ ಕೊಡಲು ಸನ್ನದ್ದವಾಗಿದೆ ಎಂದರು. ರಕ್ಷಣಾ ಕಾರ್ಯಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನು ಸಂಗ್ರಹ ಮಾಡಲಾಗಿದೆ ಮತ್ತು ಅಗತ್ಯವಿದ್ದೆಡೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಿಡಿಲಿನಿಂದ ಜೀವ ಹಾನಿಗೊಳಗಾದ ಜಾನುವಾರುಗಳಿಗೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಆಗಸ್ಟ್ 5 ರಿಂದ 8 ರ ವರೆಗೆ ಬಿದ್ದ ಮಳೆಯಿಂದ ಜಿಲ್ಲೆಯಲ್ಲಿ 1166.80 ಹೆಕ್ಟೇರ್ ಕೃಷಿ ಭೂಮಿ ಮತ್ತು 5.038 ಹೆಕ್ಟೇರ್ ತೋಟಗಾರಿಕಾ ಭೂಮಿ ಜಲಾವೃತಗೊಂಡಿದ್ದು, ಕೋಟ್ಯಂತರ ರೂಪಾಯಿಯ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖಾಧಿಕಾರಿ ಮಾಹಿತಿ ನೀಡಿದರು. ಬೆಳೆ ಹಾನಿಯ ಸಮೀಕ್ಷೆ ನಡೆಸಿ ಕೃಷಿಕರಿಗೆ ಪರಿಹಾರ ಮೊತ್ತವನ್ನು ನೀಡುವಂತೆ, ಆಧಾರ್ ಕಾರ್ಡ್ ಜೋಡಣೆಯಾಗದೆ ಪರಿಹಾರ ವಂಚಿತರಾಗಿರುವ ಕೃಷಿಕರ ಸ್ಥಿತಿಯ ಬಗ್ಗೆ ಗಮನಹರಿಸುವಂತೆ ಮತ್ತು ಕೃಷಿಕರಿಗೆ ಬೆಳೆ ವಿಮೆ ಮೂಲಕವೂ ಪರಿಹಾರ ದೊರಕಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಸಂಸದೆ ಸೂಚಿಸಿದರು.

ಜಿಲ್ಲೆಯಲ್ಲಿ ರಸ್ತೆಗಳು, ಕಟ್ಟಡಗಳು, ಸಮುದ್ರ ಕೊರೆತ, ಮೆಸ್ಕಾಂ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು ಮೊತ್ತ 6318.64 ರೂ. ಹಾನಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಅದಕ್ಕೆ ಸ್ಪಂದಿಸಿದ ಸಂಸದೆ, ಮಳೆ ನಿಂತ ಬಳಿಕ ಮತ್ತೊಮ್ಮೆ ಹದಗೆಟ್ಟಿರುವ ರಸ್ತೆಗಳ ಮೌಲ್ಯ ಮಾಪನ ಮಾಡಿ, ತಕ್ಷಣ ವರದಿ ತಯಾರಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಡಲ್ಕೊರೆತದಿಂದಾಗಿ ಹಾನಿಗೊಳಗಾದ ರಸ್ತೆಗಳಿಗೂ ಪರಿಹಾರ ದೊರಕುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಹಾನಿಗೊಳಗಾದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಹಿತಿ ಪಡೆದ ಸಂಸದೆ ಮೊದಲ ಹಂತದಲ್ಲಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.

ಗಾಳಿ ಮಳೆಗೆ ಧರೆಗುರುಳುವ ಮರಗಳನ್ನು ಶೀಘ್ರವಾಗಿ ತೆರವುಗೊಳಿಸುವ, ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಮತ್ತು ವಿದ್ಯುತ್ ತಂತಿಗೆ ಅಪಾಯ ಒಡ್ಡುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯು 8 ಕ್ಷಿಪ್ರ ಕಾರ್ಯಪಡೆ ತಂಡಗಳನ್ನು ರಚಿಸಿದೆ. ಈ ತಂಡವು ಧರೆಗುರುಳಿದ ಮರಗಳನ್ನು ಕ್ಷಿಪ್ರವಾಗಿ ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಡಿಎಫ್‌ಓ ಮಾಹಿತಿ ನೀಡಿದರು.

ಮಳೆಯಿಂದಾಗಿ 322 ವಿದ್ಯುತ್ ಪರಿವರ್ತಕಗಳು ಮತ್ತು 2516 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಅದರಲ್ಲಿ 318 ಪರಿವರ್ತಕ ಮತ್ತು 2116 ಕಂಬಗಳನ್ನು ಮರುಜೋಡಿಸಲಾಗಿದೆ, ಜಿಲ್ಲೆಯಲ್ಲಿ ವಿದ್ಯುತ್ತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಆಲಿಸಲು ದಿನದ ಇಪ್ಪತ್ತನಾಲ್ಕು ಘಂಟೆಯೂ ಕಾರ್ಯನಿರತವಾಗಿರುವ ತಂಡವನ್ನು ನೇಮಿಸಲಾಗಿದೆ. ತುರ್ತು ಸಹಾಯ ಬೇಕಿದ್ದವರು 1912 ಸಹಾಯವಾಣಿಗೆ ಕರೆ ನೀಡಿದಲ್ಲಿ ಅಗತ್ಯವಾಗಿರುವ ಸಹಾಯವನ್ನು ಒದಗಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನೆರೆ ನೀರಿನಲ್ಲಿ ಸಿಲುಕಿರುವವರನ್ನು ಸಾಗಿಸಲು ದೋಣಿ ವ್ಯವಸ್ಥೆಯನ್ನು ಮಾಡಲಾಗಿದೆ ಮತ್ತು ತುರ್ತು ಪರಿಸ್ಥಿಯಲ್ಲಿ ಕಾರ್ಯರ್ವಹಿಸಲು ಅಗ್ನಿಶಾಮಕ ದಳ ಸನ್ನದ್ದವಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು. ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದೆ ಶೋಭಾ ಕರಂದ್ಲಾಜೆ ಮುಂದಿನ ಒಂದು ವಾರದವರೆಗೆ ಮಳೆಯಿಂದಾಗಿ ಏನೆಲ್ಲಾ ಹಾನಿ ಆಗುತ್ತವೆಯೋ ಅದೆಲ್ಲವನ್ನೂ ಮೌಲ್ಯ ಮಾಪನ ಮಾಡಿ ವರದಿ ಮಾಡಿ ಉಸ್ತುವಾರಿ ಕಾರ್ಯದರ್ಶಿಯವರಿಗೆ ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ
ಬಗ್ಗೆ ಮತ್ತು ಉಡುಪಿ ಕಂದಾಯ ಉಪ ವಿಭಾಗ ಆರಂಭ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಂಸದರು ಹೇಳಿದರು.

ಸಭೆಯಲ್ಲಿ ಜಿ.ಪಂ ಅಧ್ಯಕ್ಷ ದಿನಕರ ಬಾಬು, ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಬಿ.ಎಮ್ ಸುಕುಮಾರ್ ಶೆಟ್ಟಿ, ಲಾಲಾಜಿ. ಆರ್. ಮೆಂಡನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!