ಕೇಂದ್ರ ಬಜೆಟ್ 2026- 27: ರಾಜಕೀಯ ನಾಯಕರ, ಜನಸಾಮಾನ್ಯರ ಅಭಿಪ್ರಾಯ ಹೇಗಿತ್ತು..?

ಕೇಂದ್ರ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕರ್ನಾಟಕವೂ ಸೇರಿದಂತೆ ದೇಶದ ಸಮಗ್ರ  ಬೆಳವಣಿಗೆಗೆ ಪೂರಕವಾಗಿದೆ. ಐಟಿ ನವೀನತೆ, ಪ್ರವಾಸೋದ್ಯಮ ವಿಸ್ತರಣೆ, ಒಳನಾಡು ಜಲ ಸಂಪರ್ಕ, ಹೈ–ಸ್ಪೀಡ್ ರೈಲು, ಎಂಎಸ್‌ಎಂಇಗಳು ಹಾಗೂ ಸೇವಾ ಕ್ಷೇತ್ರಗಳಿಗೆ ಒತ್ತು ನೀಡುವ ಮೂಲಕ, ಭವಿಷ್ಯಕ್ಕೆ ಸಿದ್ಧವಾದ ಕರ್ನಾಟಕದ ನಿರ್ಮಾಣಕ್ಕೆ ಈ ಬಜೆಟ್ ದೃಢವಾದ ನೆಲೆಯನ್ನು ಹಾಕಿದೆ.

ಅರ್ಥ ವ್ಯವಸ್ಥೆಯ ಸೂಕ್ಷ್ಮ ಸಂಗತಿಗಳಿಗೂ ಆದ್ಯತೆ ನೀಡುವ ಮೂಲಕ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ, ಎಂಎಸ್ ಎಂಇ, ಮೂಲಸೌಕರ್ಯ, ಆರ್ಥಿಕ ಕಾರಿಡಾರ್ ಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ. ಪರಿಸರ ಸಮತೋಲನಕ್ಕಾಗಿ ವಿಶೇಷ ಆದ್ಯತೆ ನೀಡಿರುವುದು ಈ ಬಜೆಟ್ ಇನ್ನೊಂದು ವಿಶೇಷ. ಹವಾಮಾನ ವೈತರೀತ್ಯದಂಥ ಸಂಗತಿಗಳನ್ನೂ ಕೇಂದ್ರ ಸರ್ಕಾರ ಸೂಕ್ಷ್ಮ ವಾಗಿ ಗಮನಿಸುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಭಾರತವನ್ನು ಐದು ಟ್ರಿಲಿಯನ್ ಅರ್ಥವ್ಯವಸ್ಥೆಯನ್ನಾಗಿ ರೂಪಿಸುವಲ್ಲಿ ಈ ಬಜೆಟ್ ಅತ್ಯಂತ ಮಹತ್ವದ್ದಾಗಿದೆ- ವಿ ಸುನಿಲ್ ಕುಮಾರ್, ಶಾಸಕರು ಕಾರ್ಕಳ, ಮಾಜಿ ಸಚಿವರು ಕರ್ನಾಟಕ ಸರ್ಕಾರ

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಆಶಾದಾಯಕ ಬಜೆಟ್. ಅಂತರಾಷ್ಟ್ರೀಯ ಮಟ್ಟದ ಸವಾಲುಗಳನ್ನು ಎದುರಿಸಲು ಮತ್ತು ದೇಶದ ಆರ್ಥಿಕ ಅಭಿವೃದ್ಧಿಯ ಪ್ರಗತಿಯನ್ನು ಹೆಚ್ಚಿಸಲು ದೇಶದ ಮೂಲಭೂತ ಸೌಕರ್ಯ , ಕೈಗಾರಿಕೆ ಮತ್ತು ರಕ್ಷಣಾ ವಲಯ ಹಾಗೂ ಆರೋಗ್ಯ ವಲಯಕ್ಕೆ ಆದ್ಯತೆ ನೀಡಲಾಗಿದೆ.

ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ ವಿಶೇಷವಾಗಿ ಕೃಷಿ ಮತ್ತುಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗಿದೆ. ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ. ತೆರಿಗೆ ಸರಳೀಕರಣದ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದೆ

ನರಸಿಂಹ ಕಾಮತ್ ಆಡಳಿತ ಮಂಡಳಿ ಸದಸ್ಯರು, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಮಾಜಿ ಅಧ್ಯಕ್ಷರು, ಸಾಣೂರು ಗ್ರಾಮ ಪಂಚಾಯತ್.

ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಸ್ವಾಗತಾರ್ಹ.ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಬೆಂಗಳೂರಿಗೂ ವಿಸ್ತರಣೆ ಮಾಡಿರುವುದು ಶ್ಲಾಘನೀಯ.ಟ್ಯೂರಿಸಂ ಬೆಳವಣಿಗೆಗೆ ಪೂರಕವಾಗಿ ಮೆಡಿಕಲ್‌ ಟ್ಯುಾರಿಸಂ ಹೆಸರಿನಲ್ಲಿ ಐದು ಪ್ರದೇಶದಲ್ಲಿ ಮೆಡಿಕಲ್‌ ಹಬ್ ಸ್ಥಾಪನೆಗೆ ಮುಂದಾಗಿರುವುದು ಉದ್ಯೋಗ ಸೃಷ್ಟಿಕೆ ಸಹಾಯಕವಾಗ ಬಹುದು ಅನ್ನುವುದು ಸರ್ಕಾರದ ನಿರೀಕ್ಷೆ.ಪಶುವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಹೆಚ್ಚಿನ ಅನುದಾನದ ಭರವಸೆ ಆಶಾದಾಯಕ.ಸಣ್ಣ ಕೈಗಾರಿಕೆ ಮತ್ತು ಖಾದಿ ಗುಡಿಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ಕ್ರಮ ಸ್ವಾಗತಾರ್ಹ. ಕರಾವಳಿಯ ಪ್ರದೇಶದ ಮೀನುಗಾರರ ಸಹಕಾರಿ ಸಂಸ್ಥೆ ಸ್ಥಾಪನೆ ಬಗ್ಗೆ ಬಜೆಟ್ ನಲ್ಲಿ ಒತ್ತು ನೀಡಿರುವುದು ಬಜೆಟ್ ನಲ್ಲಿ ಕಾಣುವ ಉತ್ತಮ ಅಂಶ.ಜಿ ಎಸ್ ಟಿ ಸರಳೀಕೃತ ನಿಧಾ೯ರ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಮಾಧಾನಕರ ಬಜೆಟ್. ಕ್ಯಾನ್ಸರ್‌ ನಂತಹ ಪ್ರಮುಖ ಖಾಯಿಲೆಗಳ ಔಷಧಿಗಳಿಗೆ ತೆರಿಗೆ ವಿನಾಯಿತಿ ತೇೂರಿರುವುದು ಬಜೆಟ್ ನಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ.2047 ತನಕ ಭಾರತದಲ್ಲಿ ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡ ಬಹುದು.ಒಟ್ಟಿನಲ್ಲಿ ವಿತ್ತ ಸಚಿವರು ಮಂಡಿಸಿದ ಬಜೆಟ್ ಅಭಿವೃದ್ಧಿ ಜನಪರ ಯೇೂಗ ಕ್ಷೇಮದ ದೃಷ್ಟಿಯಿಂದ ಹೊಸದೊಂದು ಕನಸು ಮೂಡಿಸಿದೆ.ಆದರೆ ಜನಸಾಮಾನ್ಯರ ಮುಂದಿರುವ ಬಹು ದೊಡ್ಡ ಪ್ರಶ್ನೆ ಅಂದರೆ ಕಳೆದ ಆಥಿ೯ಕ ವರುಷದಲ್ಲಿ ಮಂಡಿಸಿದ ಬಜೆಟ್ ಎಷ್ಟರ ಮಟ್ಟಿಗೆ ಅನುಷ್ಠಾನ ಗೊಂಡಿದೆ ಅನ್ನುವ ಲೆಕ್ಕಾಚಾರ ಪ್ರಸ್ತುತ ಬಜೆಟ್ ನಲ್ಲಿ ಎಲ್ಲಿಯೂ ಉಲ್ಲೇಖಿಸದೇ ಇರುವುದು ವಿಷಾದ ನೀಯ.ಜನಸಾಮಾನ್ಯರಿಗೆ ಯಾವುದೇ ಬಜೆಟ್ ಮೇಲೆ ವಿಶ್ವಾಸಾರ್ಹತೆ ಮೂಡಿಬರ ಬೇಕಾದರೆ ಹಿಂದಿನ ಬಜೆಟ್ ಮೇಲಿನ ಪ್ರಗತಿಯ ಕುರಿತಾಗಿ ಸದನಕ್ಕೆ ಮಾಹಿತಿ ನೀಡುವಕಾರ್ಯ ನಡೆಯಲೇ ಬೇಕು ಅನ್ನುವುದು ನನ್ನ ಸ್ವಷ್ಟ ಅಭಿಪ್ರಾಯ

ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ.ಉಡುಪಿ.ನಿವೃತ್ತ ರಾಜ್ಯ ಶಾಸ್ತ್ರ ಪ್ರಾಧ್ಯಾಪಕ

ಕೇಂದ್ರ ಬಜೆಟ್ : ಬಡವರಿಗೆ ಅನ್ಯಾಯ.

ಕೇಂದ್ರ ಸರ್ಕಾರದ ಬಿಗಿಯಾದ ಧೋರಣೆಯಿಂದ ಕೇಂದ್ರ ಸರ್ಕಾರದ ಬಜೆಟ್ ನಿಂದ ಬಡವರಿಗೆ ಭಾರಿ ಅನ್ಯಾಯವಾಗಿದೆ. ಉತ್ತರ ಭಾರತಕ್ಕೆ ಹಣ್ಣು ನೀಡಿ ದಕ್ಷಿಣ ಭಾರತಕ್ಕೆ ಹಣ್ಣಿನ ಸಿಪ್ಪೆ ನೀಡಿದಂತಾಗಿದೆ- ನೀರೆ ಕೃಷ್ಣ ಶೆಟ್ಟಿ. ಹೆಬ್ರಿ, ಕೆಪಿಸಿಸಿ ಸದಸ್ಯರು.

ಕರ್ತವ್ಯ ಕೇಂದ್ರಿತ, ದೂರದರ್ಶಿತ್ವದ ಚಿಂತನೆಯ ಸರ್ವ ಸ್ಪರ್ಶಿ ಸರ್ವ ವ್ಯಾಪಿ ವಿಕಸಿತ ಬಜೆಟ್- ಕುತ್ಯಾರು ನವೀನ್ ಶೆಟ್ಟಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಎಲ್ಲಾ ಆಯಾಮಗಳ ಅಭಿವೃದ್ಧಿಯ ಕರ್ತವ್ಯ ಕೇಂದ್ರಿತ, ದೂರದರ್ಶಿತ್ವದ ಚಿಂತನೆಯುಳ್ಳ ಸರ್ವ ಸ್ಪರ್ಶಿ ಸರ್ವ ವ್ಯಾಪಿ ವಿಕಸಿತ ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ವಿಶೇಷವಾಗಿ 2047ಕ್ಕೆ ‘ವಿಕಸಿತ ಭಾರತ’ ಗುರಿಯೊಂದಿಗೆ ಮುಂದುವರಿಯುತ್ತಿರುವ ದೇಶದ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿರುವ ಬಜೆಟ್ ಇದಾಗಿದೆ.

ಸಮರ್ಥನೀಯ ಆರ್ಥಿಕ ಪ್ರಗತಿಯೊಂದಿಗೆ ಜನರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದಡಿ ರೂಪಿಸಿರುವ ಜನಸ್ನೇಹಿ ಕೇಂದ್ರ ಬಜೆಟ್ ನಲ್ಲಿ ಜವಳಿ ಉದ್ಯಮ, ಔಷಧ ಉದ್ಯಮ, ಸಣ್ಣ ಉದ್ದಿಮೆದಾರರ ರಫ್ತುಗಳಿಗೆ ಹೆಚ್ಚಿನ ಪ್ರೋತ್ಸಾಹ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು, ಆದಾಯ ತೆರಿಗೆ ಸರಳೀಕೃತ ಪದ್ಧತಿ ಅಳವಡಿಕೆ, ಉದ್ಯೋಗ ಸೃಷ್ಟಿಯ ಜೊತೆಗೆ ಮೂಲ ಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಯಾವುದೇ ರೀತಿಯ ಹೊಸ ಯೋಜನೆಗಳನ್ನು ಪ್ರಕಟಿಸದೆ ಮತ್ತೊಮ್ಮೆ ಚೊಂಬು ನೀಡಿದ್ದಾರೆ- ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್

ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನಲ್ಲಿ ಕರ್ನಾಟಕ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಪ್ರಕಟಿಸದೆ ಮತ್ತೊಮ್ಮೆ ಚೊಂಬು ನೀಡಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಪ್ರತಿಕ್ರಿಯಿಸಿದ್ದಾರೆ.

ಕರಾವಳಿಯ ಮೀನುಗಾರಿಕೆ, ಪ್ರವಾಸೋದ್ಯಮ ಅಭಿವೃದ್ದಿ, ಬಂದರುಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಭಾರೀ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು ಆದರೆ ಅಂತಹ ಯಾವುದೇ ರೀತಿಯ ನಿರ್ದಿಷ್ಟ ಯೋಜನೆಗಳನ್ನು ವಿತ್ತ ಸಚಿವರು ಕರಾವಳಿ ಜಿಲ್ಲೆಗಳಿಗೆ ನೀಡದೆ ಮತ್ತೊಮ್ಮೆ ಮೋಸ ಮಾಡಿದ್ದಾರೆ. ದೊಡ್ಡ ಉದ್ಯಮಿಪತಿಗಳಿಗೆ ಈ ಬಾರಿಯ ಬಜೆಟ್ ಲಾಭದಾಯಕವಾಗಿದೆ ಹೊರತು ಮಧ್ಯಮ ವರ್ಗದವರ ಜೀವನ ಸುಧಾರಣೆಯ ನಿಟ್ಟಿನಲ್ಲಿ ಯಾವುದೇ ರೀತಿಯ ಘೋಷಣೆಗಳನ್ನು ಮಾಡಿಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ರಾಜ್ಯದ ಅಭಿವೃದ್ದಿಯ ನಿಟ್ಟಿನಲ್ಲಿ ತಮ್ಮ ಬಜೆಟ್‌ನಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಕೃಷಿಕರಿಗೆ ಬೆಂಬಲವಾಗುವ ನಿಟ್ಟಿನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತವನ್ನು ಏರಿಕೆ ಮಾಡಬಹುದು ಎಂದು ಕೊಂಡಿದ್ದ ನಿರೀಕ್ಷೆ ಕೂಡ ಹುಸಿಯಾಗಿದೆ. ಕೃಷಿಕ ವರ್ಗದ ಕಲ್ಯಾಣದ ನಿಟ್ಟಿನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೇಂದ್ರ ಸರಕಾರ ಘೋಷಣೆ ಮಾಡದಿರುವುದು ರೈತ ವರ್ಗಕ್ಕೆ ಮಾಡಿರುವ ಅನ್ಯಾಯವಾಗಿದೆ.
ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಿರುವುದು ಬಿಟ್ಟರೆ ಕರ್ನಾಟಕ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳ ಘೋಷಣೆ ಮಾಡಿಲ್ಲ. ಬೇರೆ ರಾಜ್ಯಗಳಿಗೆ ರೈಲು ಯೋಜನೆಯಲ್ಲಿ ಅವಕಾಶ ನೀಡಿದ್ದು ಕರಾವಳಿಯ ರೈಲು ಹಳಿ ಅಭಿವೃದದ್ದಿಯ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದ್ದು ಇದೊಂದು ನಿರಾಶದಾಯಕ ಬಜೆಟ್ ಆಗಿದ್ದು ರಾಜ್ಯ ಸರಕಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವ ಭಾರತ ನಿರ್ಮಾಣಕ್ಕೆ ಮುನ್ನಡಿ ಬರೆದ ಬಜೆಟ್ : ಯಶ್ ಪಾಲ್ ಸುವರ್ಣ

ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ತಮ್ಮ 9 ನೇ ಬಜೆಟ್ ಮಂಡಿಸಿದ್ದು, ದೇಶದ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ಮೂಲಕ ವಿಕಸಿತ ಭಾರತಕ್ಕೆ ಪೂರಕವಾಗಿ ಯುವ ಭಾರತ ನಿರ್ಮಾಣಕ್ಕೆ ಈ ಬಜೆಟ್ ಮುನ್ನುಡಿ ಬರೆಯಲಿದೆ.

ದೇಶಾದ್ಯಂತ ಏಳು ಹೈಸ್ಪೀಡ್ ರೈಲು ಕಾರಿಡಾರ್ ಗಳ ಅಭಿವೃದ್ಧಿ, ರಕ್ಷಣಾ ವಲಯಕ್ಕೆ ವಿಶೇಷ ಆದ್ಯತೆ, ಯುವ ಜನತೆಗೆ ಉದ್ಯೋಗ ಸೃಷ್ಟಿಗಾಗಿ ಐಟಿ ಸಂಸ್ಥೆಗಳಿಗೆ ಪ್ರೋತ್ಸಾಹ, 16ನೇ ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ಗರಿಷ್ಠ ಅನುದಾನ, ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ “ಶಿ ಮಾರ್ಚ್” ಯೋಜನೆ, ಎಲ್ಲಾ ರಾಜ್ಯಗಳಿಗೆ ಯೂನಿವರ್ಸಿಟಿ ಟೌನ್ ಶಿಪ್ ಜೊತೆಗೆ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಆದ್ಯತೆ, ಕೃಷಿ, ಮೀನುಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡುವ ಕಾರ್ಯಕ್ರಮಗಳನ್ನು ಬಜೆಟ್ ಒಳಗೊಂಡಿರುವುದು ದೇಶದ ಜನತೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ವಿಶ್ವದ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತವನ್ನು ತೃತೀಯ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ.

ನಿರಾಶದಾಯಕ ಮತ್ತು ಶ್ರೀಮಂತರ ಬಜೆಟ್- ಪ್ರಸಾದ್‌ರಾಜ್ ಕಾಂಚನ್: ವಿತ್ತಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ರಾಜ್ಯ ಹಾಗೂ ಕರಾವಳಿ ಜಿಲ್ಲೆಗಳ ಪಾಲಿಗೆ ನಿರಾಶದಾಯಕ ಬಜೆಟ್ ಆಗಿದ್ದು ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂತೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಬರಲಿರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ಹಲವು ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿದೆ ಹೊರತು ಪಡಿಸಿದರೆ ಕರಾವಳಿ ಭಾಗಕ್ಕೆ ಯಾವುದೇ ಅಭಿವೃದ್ದಿ ಯೋಜನೆಗಳನ್ನು ನೀಡಿಲ್ಲ.

ಕರಾವಳಿ ಭಾಗದಲ್ಲಿ ರೈಲ್ವೇ ಯೋಜನೆಗಳಿಗೆ ವಿಶೇಷ ಒತ್ತು ನೀಡಬೇಕಾಗಿತ್ತು. ಹೆಚ್ಚುವರಿ ರೈಲುಗಳು ಹಾಗೂ ದ್ವಿಪಥ ಯೋಜನೆಗಳನ್ನು ವಿಸ್ತರಿಸಬೇಕಾಗಿತ್ತು.ಈ ವಿಚಾರದಲ್ಲಿ ಕರಾವಳಿಗೆ ವಿತ್ತ ಸಚಿವೆ ಯಾವುದೇ ಯೋಜನೆಯನ್ನು ನೀಡಿರುವುದು ನಿಜಕ್ಕೂ ನೋವುಂಟು ಮಾಡಿದೆ. ವಿಶೇಷವಾಗಿ ಮೀನುಗಾರಿಕೆ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದ್ದು ಕರಾವಳಿಯ ಬಂದರುಗಳನ್ನು ಅಭಿವೃದ್ದಿ ಪಡಿಸಲು ಒತ್ತು ನೀಡದಿರುವುದು ಕಂಡು ಬಂದಿದೆ.ಬಹುಶಃ ಕರಾವಳಿ ಭಾಗದ ಸಂಸದರು ಗಳು ಕರಾವಳಿ ಭಾಗಕ್ಕೆ ಅಗತ್ಯ ಇರುವ ಬೇಡಿಕೆಗಳನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ವಿಫಲವಾಗಿರುವ ಕಾರಣದಿಂದ ಕರಾವಳಿಗೆ ಅನ್ಯಾಯವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು.ಇದೊಂದು ನಿರಾಶದಾಯಕ ಮತ್ತು ಶ್ರೀಮಂತರ ಬಜೆಟ್ ಎಂದು ಬಣ್ಣಿಸಿದ್ದಾರೆ.

ಭವಿಷ್ಯಕ್ಕೆ ಬಲ ನೀಡುವ ಬಜೆಟ್ – ವಿಕಸಿತ ಭಾರತದ ಹೊಸ ಅಧ್ಯಾಯ- ಶ್ರೀನಿಧಿ ಹೆಗ್ಡೆ

ಭಾರತದ 2026ರ ಕೇಂದ್ರ ಬಜೆಟ್ ದೇಶದ ಸಮಗ್ರ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ತೋರಿಸುವ ಭವಿಷ್ಯನಿರ್ಮಾಣದ ಬಜೆಟ್ ಆಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ತವ್ಯ ಭವನದಲ್ಲಿ ಸಿದ್ಧಗೊಂಡ ಮೊದಲ ಬಜೆಟ್ ಇದಾಗಿದ್ದು, ಉತ್ಪಾದಕತೆ ವೃದ್ಧಿ, ಜನಪಾಲ್ಗೊಳ್ಳಿಕೆ ಹಾಗೂ “ಸಬ್ ಕಾ ಸಾಥ್–ಸಬ್ ಕಾ ವಿಕಾಸ್” ತತ್ವಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿ ರುವುದಕ್ಕಾಗಿ ಮಾನ್ಯ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಯುವಶಕ್ತಿ, ಮಹಿಳಾ ಸಬಲೀಕರಣ, ರೈತರ ಆದಾಯ ವೃದ್ಧಿ, ಉದ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನಾಧಾರಿತ ಆರ್ಥಿಕತೆಯತ್ತ ಈ ಬಜೆಟ್ ಸ್ಪಷ್ಟ ಹಾಗೂ ದೃಢ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಸೆಮಿಕಂಡಕ್ಟರ್ ಕ್ಷೇತ್ರ, ಕೈಗಾರಿಕಾ ಕ್ಲಸ್ಟರ್‌ಗಳು, ಕೃತಕ ಬುದ್ಧಿಮತ್ತೆ (AI), ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಪ್ರವಾಸೋದ್ಯಮ ವಲಯಗಳಿಗೆ ನೀಡಿರುವ ಭಾರೀ ಉತ್ತೇಜನವು ಭಾರತವನ್ನು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಇನ್ನಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದ್ದಾರೆ.

ಸಾರಿಗೆ ವಲಯದಲ್ಲಿ ಜಲಮಾರ್ಗಗಳ ಅಭಿವೃದ್ಧಿ, ಹೈಸ್ಪೀಡ್ ರೈಲು ಕಾರಿಡಾರ್‌ಗಳು, ಎಲೆಕ್ಟ್ರಿಕ್ ಬಸ್‌ಗಳು ಹಾಗೂ ಪ್ರಮುಖ ಬಂದರು ಸಂಪರ್ಕ ಯೋಜನೆಗಳು ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ಅವರು ತಿಳಿಸಿದ್ದಾರೆ. ಆಯುಷ್, ಮಾನಸಿಕ ಆರೋಗ್ಯ ಕೇಂದ್ರಗಳು, ವೈದ್ಯಕೀಯ ಹಬ್‌ಗಳು ಹಾಗೂ ಅಪರೂಪದ ಕಾಯಿಲೆಗಳ ಔಷಧಗಳಿಗೆ ನೀಡಿರುವ ತೆರಿಗೆ ವಿನಾಯಿತಿಗಳು ಸರ್ಕಾರದ ಜನಪರ ಕಾಳಜಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.

ಮಹಿಳಾ ಉದ್ಯಮಿಗಳಿಗೆ ‘’ಶಿ-ಮಾರ್ಟ್ಸ್, ಶಿ-ಮಾರ್ಕ್ ಯೋಜನೆಯ ಮೂಲಕ ಉತ್ತೇಜನ, ಬಾಲಕಿಯರ ಹಾಸ್ಟೆಲ್ ನಿರ್ಮಾಣ, ಲಖಪತಿ ಯೋಜನೆಗೆ ಹೆಚ್ಚಿನ ಆದ್ಯತೆ, ತೆರಿಗೆ ವ್ಯವಸ್ಥೆಯ ಸರಳೀಕರಣ ಮತ್ತು ಸಣ್ಣ ತೆರಿಗೆದಾರರಿಗೆ ಅನುಕೂಲಕರ ಕ್ರಮಗಳು ಆರ್ಥಿಕ ಒಳಗೊಳ್ಳುವಿಕೆಯನ್ನು ಇನ್ನಷ್ಟು ಬಲಪಡಿಸಲಿವೆ ಎಂದು ಅವರು ತಿಳಿಸಿದ್ದಾರೆ. ರಾಜ್ಯಗಳಿಗೆ ಹೆಚ್ಚುವರಿ ಅನುದಾನ, ರಫ್ತು ಉತ್ತೇಜನ ಹಾಗೂ ಹೂಡಿಕೆ ಪ್ರೋತ್ಸಾಹ ಕ್ರಮಗಳು ವಿಕಸಿತ ಭಾರತ ಎಂಬ ಮಹತ್ತರ ಗುರಿಯತ್ತ ದೇಶವನ್ನು ಮುನ್ನಡೆಸಲಿವೆ ಎಂದು ಅವರು ಹೇಳಿದರು.

ಒಟ್ಟಾರೆ, ಈ ಬಜೆಟ್ ಯುವಕರು, ರೈತರು, ಮಹಿಳೆಯರು, ಉದ್ಯಮಿಗಳು ಮತ್ತು ಸಾಮಾನ್ಯ ನಾಗರಿಕರ ಆಶಯಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಪ್ರಗತಿಪರ ಹಾಗೂ ಜನಪರ ಬಜೆಟ್ ಆಗಿದ್ದು, ದೇಶದ ಅಭಿವೃದ್ಧಿಗೆ ಹೊಸ ಚೈತನ್ಯ ಮತ್ತು ವೇಗವನ್ನು ನೀಡಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪೂರ್ಣವಾಗಿ ಜನವಿರೋಧಿ, ಒಕ್ಕೂಟತತ್ವ-ವಿರೋಧಿ ಕೇಂದ್ರ ಬಜೆಟ್-ಸಿಪಿಐ(ಎಂ) ಪೊಲಿಟ್‍ಬ್ಯುರೊ “ಹೆಚ್ಚುತ್ತಿರುವ ಅಸಮಾನತೆಯನ್ನು ಮತ್ತು ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ”
ಇಂದು ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸಿದ ಒಂಬತ್ತನೇ ಕೇಂದ್ರ ಬಜೆಟ್ ದುಡಿಯುವ ಜನರ, ಸಾಮಾಜಿಕವಾಗಿ ದಮನಕ್ಕೊಳಗಾದ ಜನವಿಭಾಗಗಳ ಹಾಗೂ ಒಟ್ಟಾರೆ ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗಳನ್ನು ಬಲಿಗೊಟ್ಟು, ಕೆಲವೇ ದೊಡ್ಡ ವ್ಯವಹಾರ ಸಮೂಹಗಳು ಮತ್ತು ಶ್ರೀಮಂತರು ಮತ್ತು ಧನಾಢ್ಯರ ಸಂಕುಚಿತ ಹಿತಾಸಕ್ತಿಗಳನ್ನು ಉತ್ತೇಜಿಸಲು ಮೋದಿ ಸರ್ಕಾರದ ಏನೇನೂ ವಿಮರ್ಶೆಯಿಲ್ಲದೆ ಬದ್ಧವಾಗಿದೆ ಎಂಬುದಕ್ಕೆ ಕಣ್ಣಿಗೆ ಕಟ್ಟುವಂತಿರುವ ಒಂದು ಸಾಕ್ಷಿ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತೀಕ್ಷ್ಣವಾಗಿ ಟೀಕಿಸಿದೆ,.

ನಿರ್ಮಲಾ ಸೀತಾರಾಮನ್ ಸರ್ಕಾರದ ಸಾಧನೆ ಎಂದು ಹೇಳಿಕೊಳ್ಳುವ ‘ವಿತ್ತೀಯ ಶಿಸ್ತು’ ಎಂದರೆ ಸದಾ ಕಾರ್ಪೊರೇಟ್‌ ಕ್ಷೇತ್ರ ಹಾಗೂ ಶ್ರೀಮಂತರಿಗೆ ತೆರಿಗೆ ಸವಲತ್ತುಗಳನ್ನು ನೀಡುವುದು, ಅದೇ ವೇಳೆ ದುಡಿಯುವ ಜನರ ಪರಿಸ್ಥಿತಿಗಳ ಸುಧಾರಣೆಗೆ ಅಗತ್ಯವಿರುವ ವೆಚ್ಚಗಳನ್ನು ಹಿಂಡುವುದನ್ನು ವರ್ಣಿಸುವ ಇನ್ನೊಂದು ವಿಧಾನವೇ ಆಗಿದೆ. ಇದು, ಪ್ರಸ್ತುತ ವರ್ಷದಲ್ಲಿಯೂ ಮುಂದಿನ ವರ್ಷದ ಬಜೆಟ್‌ನಲ್ಲಿಯೂ ಆದಾಯಗಳಲ್ಲಿ ಭಾರೀ ಕುಸಿತ ಹಾಗೂ ತೀವ್ರ ವೆಚ್ಚಕಡಿತದಲ್ಲಿ ವ್ಯಕ್ತಗೊಂಡಿದೆ ಎಂದು ಸಿಪಿಐ(ಎಂ) ಹೇಳಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಮಾಡಿದ ತೆರಿಗೆ ಆದಾಯಗಳ ಅಂದಾಜು ಬಃಹಳೇನೂ ಇರಲಿಲ್ಲ. ಅವು ಕೂಡ ಈಗ ಅಂತ್ಯಗೊಳ್ಳುತ್ತಿರುವ 2025–26 ರ ಹಣಕಾಸು ವರ್ಷದಲ್ಲಿ ಈಡೇರುವಲ್ಲಿ ಬಹಳ ಹಿಂದೆ ಉಳಿದಿವೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಆದಾಯಗಳಲ್ಲಿ ಉಂಟಾದ ಕೊರತೆಯ ಒಂದು ಭಾಗವನ್ನು ಅಬಕಾರಿ ಸುಂಕಗಳ – ಮುಖ್ಯವಾಗಿ ತೈಲದ ಮೇಲೆಯೇ ಬೀಳುವ ಸುಂಕದ-ವೃದ್ಧಿಯ ಮೂಲಕ ಸದ್ದಿಲ್ಲದೆ ತುಂಬಿಕೊಳ್ಳಲಾಗಿದೆ. ಹಣಕಾಸು ಮಂತ್ರಿಗಳು ಈ ಆದಾಯ ಬಿಕ್ಕಟ್ಟಿನ ಬಗ್ಗೆ, ಹಾಗೂ ಅದು ಆಂತರಿಕ ಆರ್ಥಿಕ ಸ್ಥಿತಿಯ ಬಗ್ಗೆ ಏನನ್ನು ಬಿಂಬಿಸುತ್ತದೆ ಎಂಬುದನ್ನು ಗಮನಕ್ಕೆ ತಗೊಂಡಿಲ್ಲ, ಜೊತೆಗೆ ಅವರು ಪ್ರಕಟಿಸಿರುವ ತೆರಿಗೆ ಪ್ರಸ್ತಾವನೆಗಳು ಆದಾಯಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಯಾವ ಉಲ್ಲೇಖವನ್ನೂ ಮಾಡದೇ ಬಿಟ್ಟಿದ್ದಾರೆ. ಆದರೆ 2026–27ರ ನಿರೀಕ್ಷಿತ ಆದಾಯಗಳು 2025–26ರ ಬಜೆಟ್ ಅಂದಾಜುಗಳಷ್ಟೇ ಇರುತ್ತವೆ ಎಂಬುದು ಸ್ವಯಂವೇದ್ಯ. ರಾಷ್ಟ್ರೀಯ ಆದಾಯದಲ್ಲಿ ಸರ್ಕಾರಕ್ಕೆ ಆದಾಯದ ಪಾಲಾಗಿ ಸಿಗುವ ಪ್ರಮಾಣದಲ್ಲಿ ಒಂದು ತೀವ್ರ ಇಳಿಕೆಯಾಗುತ್ತದೆ ಎಂಬುದು ಇದರ ವಾಸ್ತವ ಅರ್ಥ.
ಈ ಪರಿಸ್ಥಿತಿಯಲ್ಲಿ 2025–26 ಮತ್ತು 2026–27ರಲ್ಲಿ ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಗುರಿಯನ್ನು ಸಾಧಿಸುವುದು ಸ್ಪಷ್ಟವಾಗಿ ವೆಚ್ಚ ಕಡಿತದ ಮೇಲೆ ಅವಲಂಬಿತವಾಗಿದೆ—ಮತ್ತು ಇದನ್ನು ಸಾಮಾನ್ಯವಾಗಿ ರೈತರು ಹಾಗೂ ಕಾರ್ಮಿಕರ ಮೇಲೆ ನಗ್ನದಾಳಿಯ ಮೂಲಕ ಸಾಧಿಸಲಾಗುತ್ತಿದೆ. 2025–26ರ ಬಜೆಟ್ ಅಂದಾಜುಗಳೊಂದಿಗೆ ಹೋಲಿಸಿದರೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪಿಎಂ–ಪೋಷಣ್, ಪಿಎಂ–ಶ್ರೀ, ಪಿಎಂ–ಜಯ್, ಪಿಎಂ–ಎಂಎಸ್‌ವೈ, ಪಿಎಂಎವೈ (ಗ್ರಾಮೀಣ ಹಾಗೂ ನಗರ), ಬೆಳೆ ವಿಮಾ ಯೋಜನೆ ಇತ್ಯಾದಿ ಹಲವು ಕೇಂದ್ರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ವೆಚ್ಚಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು ಹಾಗೂ ಈಶಾನ್ಯ ಪ್ರದೇಶಗಳ ಕಲ್ಯಾಣಕ್ಕೆ ನೀಡಿಕೆಗಳಲ್ಲಿಯೂ ಕಡಿತಗಳಾಗಿವೆ. ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳು, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಲ್ಯಾಣ ಕ್ಷೇತ್ರಗಳ ವೆಚ್ಚಗಳಿಗೂ ಕತ್ತರಿ ಹಾಕಲಾಗಿದೆ. ಲಿಂಗಾಧಾರಿತ ಬಜೆಟ್‌ನಲ್ಲಿ ರೂ. 51,144 ಕೋಟಿ ಕಡಿತ ಮಾಡಲಾಗಿದೆ. ಮುಂದಿನ 2026–27ರ ವರ್ಷದಲ್ಲಿ ರಸಗೊಬ್ಬರ, ಆಹಾರ ಮತ್ತು ಪೆಟ್ರೋಲಿಯಂ ಸಬ್ಸಿಡಿಗಳಲ್ಲಿ ಮತ್ತಷ್ಟು ಕಡಿತಗಳನ್ನು ಪ್ರಸ್ತಾಪಿಸಲಾಗಿದೆ. ಸರ್ಕಾರದ ಅಂಕಿಅಂಶಗಳೇ ಕೃಷಿ ಕ್ಷೇತ್ರವು ಹಣ ಕುಸಿತದ ಸನ್ನಿವೇಶವನ್ನು ಅಥವಾ ಹುಟ್ಟುವಳಿಗಳಿಗೆ ಬೆಲೆ ಪಡೆಯುವಲ್ಲಿ ಕುಸಿತವನ್ನು ತೋರಿಸುತ್ತಿರುವ ಸಮಯದಲ್ಲಿ, ಇದು ವಿಶೇಷವಾಗಿ ಕೃಷಿಯ ಮೇಲಿನ ದಾಳಿಯನ್ನು ಸೂಚಿಸುತ್ತದೆ.

ಬಹಳವಾಗಿ ಡಂಗುರ ಸಾರಿದ ಬಂಡವಾಳ ವೆಚ್ಚಗಳ ಹೆಚ್ಚಳವೂ ವೆಚ್ಚ ಕಡಿತಗಳಿಗೆ ಬಲಿಯಾಗಿದ್ದು, 2025–26ರ ಪರಿಷ್ಕೃತ ಅಂದಾಜುಗಳು ಬಜೆಟ್‌ ಅಂದಾಜುಗಳ ಮಟ್ಟಕ್ಕಿಂತ ಕಡಿಮೆಯಾಗಿದೆ. ಮತ್ತೊಂದೆಡೆ, ಸಾರ್ವಜನಿಕ ಉದ್ಯಮಗಳ ಸಂಪನ್ಮೂಲಗಳ ಮೂಲಕ ನಡೆಯುವ ಬಂಡವಾಳ ವೆಚ್ಚಗಳು 2025–26ರಲ್ಲಿ 2024–25ಕ್ಕಿಂತ ಕಡಿಮೆಯಾಗಿದ್ದು, 2026–27ರಲ್ಲಿಯೂ ಕಡಿಮೆಯೇ ಇರಲಿದೆ ಎಂದು ಬಜೆಟ್‌ ಸೂಚಿಸುತ್ತದೆ.
ರಾಜ್ಯ ಸರ್ಕಾರಗಳನ್ನು ಹಾಗೂ ತಮ್ಮ ಜನರ ಆಶಯಗಳನ್ನು ಪೂರೈಸುವ ಅವರ ಸಾಮರ್ಥ್ಯವನ್ನೂ ಮೋದಿ ಸರ್ಕಾರದ ಈ ನಿಲುವು ಉಸಿರುಗಟ್ಟಿಸುತ್ತಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳು, ಹಣಕಾಸು ಆಯೋಗದ ಅನುದಾನಗಳು ಹಾಗೂ ಇತರೆ ವರ್ಗಾವಣೆಗಳ ಮೂಲಕ 2025–26ರಲ್ಲಿ ರಾಜ್ಯಗಳಿಗೆ ನೀಡಲಾಗುವ ಮೊತ್ತದಲ್ಲಿ ಬಜೆಟ್ ಅಂದಾಜುಗಳಿಗೆ ಹೋಲಿಸಿದರೆ ರೂ. 2,03,801 ಕೋಟಿ ಕಡಿತವಾಗಿದೆ. 2026–27ರ ಬಜೆಟ್ ಅಂದಾಜುಗಳು 2025–26ರ ಬಜೆಟ್ ಅಂದಾಜಿಗಿಂತಲೂ ಇನ್ನೂ ರೂ. 59,456 ಕೋಟಿ ಇಳಿಕೆಯನ್ನು ತೋರಿಸುತ್ತವೆ. ಜಿಎಸ್‌ಟಿ ಆದಾಯಗಳ ಈಡೇರಿಕೆ ಚೆನ್ನಾಗಿಲ್ಲದಿರುವುದರಿಂದಾಗಿ ರಾಜ್ಯಗಳು ಈಗಾಗಲೇ ತೀವ್ರ ಹಣಕಾಸು ಕುಗ್ಗಿಕೆಯನ್ನು ಎದುರಿಸುತ್ತಿರುವ ಮತ್ತು ವಿ.ಬಿ–ಜಿ ರಾಮ್ ಜಿ (VB-G RAM G) ಮೂಲಕ ವೆಚ್ಚದ ಹೊರೆಯ ಒಂದು ಭಾಗವನ್ನು ರಾಜ್ಯಗಳ ಮೇಲೇ ದಾಟಿಸಿ ಅವರ ಸಂಪನ್ಮೂಲಗಳ ಮೇಲೆ ಬಹಳಷ್ಟು ಕಡಿತಗಳನ್ನು ಹೇರಿರುವ ಸಮಯದಲ್ಲಿ ಇದು ಸಂಭವಿಸುತ್ತಿದೆ.

ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಮಂತ್ರಿಗಳು, “ಸ್ಥಿರತೆ, ವಿತ್ತೀಯ ಶಿಸ್ತು, ನಿರಂತರ ವೃದ್ಧಿ ಮತ್ತು ಹಗುರ ಹಣದುಬ್ಬರ” ಮೋದಿ ಸರ್ಕಾರದ ಅಧಿಕಾರಾವಧಿಯ ಹೆಗ್ಗುರುತಗಳು ಎಂದು ಹೇಳಿದರು. ಆದರೆ ಅವರು ಹೇಳದೇ ಬಿಟ್ಟಿರುವ ಸಂಗತಿ ಎಂದರೆ, ಈ ಅವಧಿಯಲ್ಲಿ ಕಂಡಿರುವ ಏಕೈಕ ‘ಸ್ಥಿರತೆ’ಯೆಂದರೆ ದುಡಿಯುವ ಜನರಿಗೆ ವ್ಯಾಪಕ ನಿರುದ್ಯೋಗ ಮತ್ತು ಕೆಲಸದಿಂದ ಸಿಗುವ ಸೀಮಿತ ಆದಾಯಗಳ ರೂಪದಲ್ಲಿನ ಸಂಕಷ್ಠಗಳು ಮತ್ತು ‘ನಿರಂತರ ವೃದ್ಧಿ’ ಎಂದರೆ ಶ್ರೀಮಂತರು ಮತ್ತು ಕಾರ್ಪೊರೇಟ್‌ ಕ್ಷೇತ್ರದ ಆದಾಯ ಹಾಗೂ ಸಂಪತ್ತಿನಲ್ಲಿ ಮಾತ್ರ. ಬಜೆಟ್ 2026–27 ಇನ್ನಷ್ಟು ಉತ್ತೇಜಿಸಲಿರುವುದು ಹೆಚ್ಚುತ್ತಿರುವ ಈ ಅಸಮಾನತೆಯನ್ನೇ ಮತ್ತು ಅದು ಭಾರತೀಯ ಅರ್ಥವ್ಯವಸ್ಥೆಯನ್ನು ಕಾಡುತ್ತಿರುವ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳಿಗೆ ಇದೊಂದು ಅತ್ಯಂತ ಅಸಮರ್ಪಕ ಸ್ಪಂದನೆಯೂ ಆಗಿದೆ ಎಂದು ಖೇದ ವ್ಯಕ್ತಪಡಿಸಿದೆ- ಸುರೇಶ್ ಕಲ್ಲಾಗರ ಕಾರ್ಯದರ್ಶಿ

Leave a Reply

Your email address will not be published. Required fields are marked *

error: Content is protected !!