47 ಡಿವೈಎಸ್ಪಿ, 278 ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ- ಉಡುಪಿ ಡಿವೈಎಸ್ಪಿ ದಿನಕರ್ ಚಿತ್ರದುರ್ಗಕ್ಕೆ, ಇನ್ಸ್ಪೆಕ್ಟರ್ ಮಂಜುನಾಥ್ ಬಜ್ಪೆ ಠಾಣೆಗೆ

ಬೆಂಗಳೂರು, ಫೆ.1: ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಪರ್ವ ಮುಂದುವರಿದಿದ್ದು, ಮತ್ತೆ 47 ಡಿವೈಎಸ್ಪಿ, 278 ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜ.30ರಂದು 30 ಡಿವೈಎಸ್ಪಿಗಳನ್ನು ಹಾಗೂ 132 ಇನ್ ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಲಾಗಿತ್ತು.

ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಡುಪಿ ಡಿವೈಎಸ್ಪಿ ದಿನಕರ್ ಪಿ.ಕೆ. ಅವರನ್ನು ಚಿತ್ರದುರ್ಗ ಉಪ ವಿಭಾಗಕ್ಕೆ, ಶೇಖರಪ್ಪ ಎಚ್. ಬೆಳಗಾವಿ ಖಡೇಬಝಾರ್ ಉಪ ವಿಭಾಗಕ್ಕೆ, ರಾಜ್ಯ ಗುಪ್ತ ವಾರ್ತೆಗೆ ವೀರೇಶ್ ಟಿ. ದೊಡ್ಡಮನಿ ಸೇರಿದಂತೆ ಒಟ್ಟು 47 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ.

ಅದೇ ರೀತಿ ಮಲ್ಪೆ ಇನ್ ಸ್ಪೆಕ್ಟರ್ ಮಂಜುನಾಥ್ ಎಂ ಅವರನ್ನು ಬಜ್ಪೆ ಠಾಣೆಗೆ, ಮಂಗಳೂರು ಉತ್ತರ ಠಾಣೆ(ಬಂದರು) ಇನ್ ಸ್ಪೆಕ್ಟರ್ ಜಿ.ಅಝ್ಮತ್ ಅಲಿಯವರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ, ಸುರತ್ಕಲ್ ಪೂರ್ವ ಠಾಣೆಯ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ರನ್ನು ಸಿರ್ಸಿ ಗ್ರಾಮಾಂತರ ಠಾಣೆಗೆ, ಮಂಗಳೂರು ಉತ್ತರ ಸಂಚಾರ ಠಾಣೆ ಇನ್ ಸ್ಪೆಕ್ಟರ್ ಮುಹಮ್ಮದ್ ಸಲೀಂ ಕೆ. ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ವೃತ್ತಕ್ಕೆ, ಬಜ್ಪೆ ಠಾಣೆ ಇನ್ ಸ್ಪೆಕ್ಟರ್ ಸಂದೀಪ್ ಜಿ.ಎಸ್. ರನ್ನು ಭಟ್ಕಳ ಗ್ರಾಮಾಂತರ ವೃತ್ತ, ಮೂಡುಬಿದಿರೆ ಠಾಣೆ ಇನ್ ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಠಾಣೆಗೆ, ಬೆಳ್ತಂಗಡಿ ವೃತ್ತದ ನಾಗೇಶ್ ಕೆ. ಅವರನ್ನು ಕಾರ್ಕಳ ನಗರ ಠಾಣೆ ಸೇರಿದಂತೆ 278 ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

‘ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ನಿಗದಿತ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗ ಬೇಕು’ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಈ ಬಗ್ಗೆ ಡೈರಕ್ಟರ್ ಜನರಲ್ ಮತ್ತು ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಪರವಾಗಿ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಈ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!