ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ : ಮುಖ್ಯಮಂತ್ರಿ ಬಿಎಸ್ ವೈ
ಮಂಗಳೂರು: ಭೂಕುಸಿತ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಲು ₹ 5 ಲಕ್ಷ ಪರಿಹಾರ ನೀಡಲಾಗುವುದು. ಹಾನಿಯಾದ ಮನೆಗಳ ದುರಸ್ತಿಗೆ ₹ 1 ಲಕ್ಷ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 282 ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಈ ಕುಟುಂಬಗಳಿಗೆ ತಲಾ ₹ 5 ಲಕ್ಷ ನೀಡಲಾಗುವುದು’ ಎಂದರು.
ಜಿಲ್ಲಾಧಿಕಾರಿಯವರು ಹದಿನೈದು ದಿನದೊಳಗೆ ನಿವೇಶನ ಗುರುತಿಸಿ, ಸಂತ್ರಸ್ತರಿಗೆ ಮಂಜೂರಾತಿ ಆದೇಶ ನೀಡುವರು. ಅಲ್ಲಿ ಮನೆ ನಿರ್ಮಿಸಿಕೊಳ್ಳಬಹುದು ಎಂದರು.
ತುರ್ತು ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ತಲಾ ₹ 10,000 ನೆರವನ್ನು ಸೋಮವಾರ ಸಂಜೆಯೊಳಗೆ ವಿತರಿಸಲಾಗುವುದು. ಸಂತ್ರಸ್ತ ಕುಟುಂಬಗಳ ಮನೆ ದುರಸ್ತಿ ಮತ್ತು ಹೊಸ ಮನೆ ನಿರ್ಮಾಣ ಆಗುವವರೆಗೆ ಪ್ರತಿ ತಿಂಗಳು ₹ 5,000 ಬಾಡಿಗೆ ವೆಚ್ಚ ನೀಡಲಾಗುವುದು ಎಂದು ತಿಳಿಸಿದರು.
ರಸ್ತೆ ದುರಸ್ತಿ, ತಡೆಗೋಡೆ ನಿರ್ಮಾಣ ಶೀಘ್ರದಲ್ಲೇ ಆರಂಭವಾಗಲಿದೆ. ಬೆಳೆ ಹಾನಿ, ಜಮೀನು ಹಾನಿ ಕುರಿತು ಜಿಲ್ಲಾಧಿಕಾರಿ ವರದಿ ಸಲ್ಲಿಸಲಿದ್ದಾರೆ ಎಂದರು.