ರಂಗಭೂಮಿ ನನ್ನ ಅಂತಃಸತ್ವವನ್ನು ಗಟ್ಟಿಗೊಳಿಸಿತು – ರಾಜಗೋಪಾಲ್ ಶೇಟ್

ಉಡುಪಿ: ನಾನು ರಂಗಭೂಮಿಯಲ್ಲಿ ದೀರ್ಘಕಾಲದಿಂದ ನಟನಾಗಿ ತೊಡಗಿಸಿಕೊಂಡಿದ್ದರಿಂದ ನನಗೆ ಬದುಕನ್ನು ಎದುರಿಸುವ, ಸವಾಲುಗಳನ್ನು ಸ್ವೀಕರಿಸುವ ಧೈರ್ಯ ಬೆಳೆಯಿತು. ಯಾವುದೇ ಅಳುಕಿಲ್ಲದೆ ಎಲ್ಲರೊಂದಿಗೆ ಬೆರೆಯುವ ನನ್ನೊಳಗಿನ ಅಂತಃಸತ್ವವನ್ನು ರಂಗಭೂಮಿ ಗಟ್ಟಿಗೊಳಿಸಿತು. ಹಾಗಾಗಿ ನನಗೆ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಕ್ಕೆ ಹೆಮ್ಮೆಯಿದೆ ಎಂದು ಈ ಬಾರಿಯ ಕರ್ನಾಟಕ ನಾಟಕ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಉಡುಪಿ ಶ್ರೀ ರಾಜಗೋಪಾಲ ಶೇಟ್ ಇವರು ಉಡುಪಿ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು(ರಿ.) ಆಶ್ರಯದಲ್ಲಿ ಜರಗಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅತ್ಯಂತ ಬಡತನದಲ್ಲಿ ಹುಟ್ಟಿ ಬೆಳೆದ ನಾನು ಪ್ರಾರಂಭದ ದಿನಗಳಲ್ಲಿ ಹಾಡುಗಾರನಾಗಿ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ. ಅಚಾನಕಾಗಿ ನಾಟಕ ರಂಗವನ್ನು ನನ್ನ ಕಾಲೇಜು ದಿನಗಳಲ್ಲಿ ಪ್ರವೇಶಿಸಿದೆ. ಈ ತನಕ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ರಂಗ ತುಂಬಾ ಖುಶಿಯನ್ನು ಕೊಟ್ಟಿದೆ. ಮಿತ್ರರನ್ನು ಕೊಟ್ಟಿದೆ. ಹಲವಾರು ರಂಗ ನಿರ್ದೇಶಕರಿಂದ ಹಲವಾರು ಸೂಕ್ಷ್ಮಗಳನ್ನು ಕಲಿತುಕೊಂಡೆ. ಒಟ್ಟಿನಲ್ಲಿ ನನಗೆ ಬದುಕನ್ನು ಆರ್ಥ ಮಾಡಿಕೊಳ್ಳಲು ರಂಗಭೂಮಿ ಕಲಿಸಿದೆ ಎಂದರು.
ಸಾಂಸ್ಕೃತಿಕ ರಾಜಕಾರಣದಲ್ಲಿ ನಾನು ಪಾಲ್ಗೊಳ್ಳದಿದ್ದರೂ ಕೂಡಾ ರಂಗ ಸಂಘಟನೆಗಳು ಕ್ಷುಲ್ಲಕ ಕಾರಣದಿಂದ ಒಡೆಯುವಾಗ ನೋವಾಗುತ್ತದೆ. ಎಲ್ಲಾ ಒಂದಾಗಿ ಇದ್ದರೆ ಏನೋ ಒಳ್ಳೆಯದನ್ನೇ ಕೊಡಬಹುದು ಎಂದು ಅನಿಸಿದರೂ ಒಂದು ಎರಡಾದಾಗ ಎರಡೂ ಕೆಲಸ ಮಾಡುತ್ತದೆ ಅಲ್ಲ ಇದು ಒಳ್ಳೆಯದಲ್ವ ಎಂದು ಅನಿಸಿದ್ದರಿಂದ ನಾನು ಎಲ್ಲಾ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದರು.
ನಂತರ ನಡೆದ ಸಂವಾದದಲ್ಲಿ ತನ್ನ ಬಾಲ್ಯದ ಬದುಕು, ತನ್ನ ಕುಟುಂಬ, ರಂಗ ಪಯಣಗಳ ಬಗ್ಗೆ ಮುಗ್ದವಾಗಿ ಬಿಚ್ಚಿಕೊಂಡರು.
ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಸ್ವಾಗತಿಸಿದರು. ಉಪಾಧ್ಯಕ್ಷರುಗಳಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್, ಶ್ರೀ ಎನ್. ಸಂತೋಷ್ ಬಲ್ಲಾಲ್, ಶೇಟ್ ಅವರನ್ನು ಗೌರವಿಸಿದರು. ನಾಟಕ ವಿಭಾಗದ ಮುಖ್ಯಸ್ಥರಾದ ಶ್ರೀ ಸಂತೋಷ್ ಶೆಟ್ಟಿ ಹಿರಿಯಡ್ಕ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!