ಯುವಕರು ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಕಲಿತಿರಬೇಕು:ರಾಜೀವ್

ಉಡುಪಿ : ದಿನನಿತ್ಯದ ಜೀವನದಲ್ಲಿ ಆಕಸ್ಮಿಕ ಅವಘಡಗಳು ನಡೆದಾಗ ತುರ್ತುಸ್ಥಿತಿಯನ್ನು ಹೇಗೆ ನಿಭಾಯಸಬೇಕೆನ್ನುವ ಬಗ್ಗೆ ಯುವ ಜನರಿಗೆ ತಿಳಿದಿರಬೇಕು ಎಂದು ನವದೆಹಲಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪ್ರಧಾನ ಕಛೇರಿಯ ಆಡಳಿತ ಸಮಿತಿ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ಶನಿವಾರ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಘಟಕದಲ್ಲಿ ಹಮ್ಮಿಕೊಳ್ಳಲಾದ ಸಾಮಾಜಿಕ ತುರ್ತು ಪ್ರತಿಕ್ರಿಯೆ ಸ್ವಯಂ ಸೇವಕ ತರಬೇತಿ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಪ್ರಾಕೃತಿಕ ವಿಕೋಪಗಳಾದಾಗ ಅಥವಾ ಆಕಸ್ಮಿಕ ಅವಘಡಗಳಾದಾಗ ಸಂದರ್ಭಕ್ಕೆ ತುರ್ತಾಗಿ ಪ್ರತಿಕ್ರಿಯಿಸಿ, ಪ್ರಥಮ ಚಿಕಿತ್ಸೆ ನೀಡಿ, ನಾಗರಿಕ ಪ್ರಾಣರಕ್ಷಿಸಲು ಮತ್ತು ಸ್ಥಿತಿಯನ್ನು ನಿಭಾಯಿಸಲು ಈ ದೇಶದ ಯುವಕರು ಸಮರ್ಥರಿರಬೇಕು, ಯಾವ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆನ್ನುವ ಬಗ್ಗೆ ತಿಳಿದಿದ್ದಾಗ ಸಾವಿರಾರು ಜನರ ಪ್ರಾಣವನ್ನುಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೊದಲಿಗೆ ಕನಿಷ್ಠ 100, ತದನಂತರ 1000 ಯುವಕ-ಯುವತಿಯರಿಗೆ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ತರಬೇತಿ ನೀಡಿ, ಅವರನ್ನು ‘ಸರ್ವ್ ಸ್ವಯಂ ಸೇವಕರಾಗಿ’ ನಿಯೋಜಿಸಿಕೊಳ್ಳಲಾಗುವುದು, ಯುವಕರು ಎರಡು ದಿನಗಳ ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸಿನ ನೋಡಲ್ ಅಧಿಕಾರಿ ಗಣಪತಿ ಗೌಡ ಮಾತನಾಡಿ, ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಯುವ ರೆಡ್ ಕ್ರಾಸ್ ವಿಭಾಗವನ್ನು ಸ್ಥಾಪಿಸಿ, ವಿಶ್ವವಿದ್ಯಾನಿಲಯದ ಅಡಿ ಬರುವ ಎಲ್ಲಾ 230 ಕಾಲೇಜುಗಳಲ್ಲಿಯೂ ಘಟಕಗಳನ್ನು ಸ್ಥಾಪಿಸುವ ಚಿಂತನೆ ಇದೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ದೊರೆತಾಗ ಜೀವನದಲ್ಲಿ ಪರಿಪೂರ್ಣ ಯಶಸ್ಸು ದೊರೆಯುತ್ತದೆ, ಸಮಾಜದಿಂದ ಎಲ್ಲವನ್ನೂ ಪಡೆಯುವ ನಾವು ಸಮಾಜಕ್ಕೆ ಏನಾದರೂ ನೀಡುವ ಬದ್ದತೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳುತ್ತಾ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.
ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಘಟಕದ ಸಭಾಪತಿ ಡಾ.ಉಮೇಶ್ ಪ್ರಭು, ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಗೌರವ ಖಜಾಂಜಿ ಟಿ. ಚಂದ್ರಶೇಖರ್, ಸಂಯೋಜಕ ಜಯರಾಮ್ ಆಚಾರ್ಯ, ನೋಡಲ್ ಅಧಿಕಾರಿ ಸಚೇತ್ ಸುವರ್ಣ, ಉದಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!