ಭಾರತೀಯ ಸೇನೆಗೆ ಸೇರಲು ಯುವಕರಿಗೆ ಲೆ.ಕರ್ನಲ್ ಪವನ್ ಕುಮಾರ್ ಶೆಟ್ಟಿ ಕರೆ
ಉಡುಪಿ :ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಭಾರತೀಯ ಸೇನೆಗೆ ಸೇರಲು ಯುವ ಜನತೆ ಮುಂದೆ ಬರಬೇಕೆಂದು ಭಾರತೀಯ ಭೂ ಸೇನೆಯ ಲೆಫ್ಟಿನೆಂಟ್ ಕರ್ನಲ್ ಕೆರಮ ಮೇಲ್ಮನ್ ಪವನ್‌ಕುಮಾರ್ ಶೆಟ್ಟಿ ಹೇಳಿದರು.
ಪಡುಬಿದ್ರಿ ಬಂಟರ ಭವನದಲ್ಲಿ ಭಾನುವಾರ ಪಡುಬಿದ್ರಿ ಬಂಟರ ಯಾನೆ ನಾಡವರ ಸಂಘದ ಯುವ ಬಂಟರ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬೇರೆ ಯಾವುದೇ ಉದ್ಯೋಗದಲ್ಲಿ ಸಿಗದ ಗೌರವ, ಸೌಲಭ್ಯಗಳಲ್ಲದೆ ಅಧಿಕ ಸಂಬಳ, ಜೀವನ ಭದ್ರತೆ ಸೇನೆ ಸೇರ್ಪಡೆಯಿಂದ ದೊರಕುತ್ತದೆ ಎಂದ ಪವನ್‌ಕುಮಾರ್, ಕನ್ನಡಿಗರು ಅತೀ ಕಡಿಮೆ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗುತ್ತಿರುವುದು ವಿಷಾದನೀಯ. ಉತ್ತರ ಭಾರತದ ಅತೀ ಹೆಚ್ಚು ಯುವಕರು ಸೈನ್ಯಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಸೈನ್ಯಕ್ಕೆ ಸೇರುವ ಸಂದರ್ಭ ದೊರಕುವ ತರಬೇತಿಯು ನಮಗೆ ಜೀವನಕ್ಕೆ ಅತೀ ಹೆಚ್ಚು ಮೌಲ್ಯವನ್ನು ದೊರಕಿಸಿಕೊಡುತ್ತದೆ. ನಮ್ಮಲ್ಲಿರುವ ಅದ್ಭುತ ಶಕ್ತಿಯನ್ನು ತೋರಿಸುವುದೇ ಸೈನಿಕ ತರಬೇತಿ ಎಂದವರು ಹೇಳಿದರು.
ಅಂಬಾನಿ ಆಗಲಿಚ್ಛಿಸುವವರು ಸೈನ್ಯಕ್ಕೆ ಸೇರುವುದು ಬೇಡ ಎಂದು ಮಾರ್ಮಿಕವಾಗಿ ಹೇಳಿದ ಅವರು ದೇಶ ಪ್ರೇಮದೊಂದಿಗೆ ಕೆಲಸದ ಭದ್ರತೆ ಮತ್ತು ಜೀವನ ಭದ್ರತೆಗೆ ಭಾರತೀಯ ಸೈನ್ಯದಲ್ಲಿ ಸೇರ್ಪಡೆಯಾಗಬೇಕು. ನಾಯಕತ್ವ ಗುಣ ರಕ್ತದಲ್ಲೇ ಇರುವ ಬಂಟರು ಭಾರತೀಯ ಸೈನ್ಯಕ್ಕೆ ಸೇರುವ ಮೂಲಕ ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಉದ್ಘಾಟನೆ: ಮಂಗಳೂರು ಉತ್ತರ ವಲಯ ಶಾಸಕ ಡಾ.ವೈ.ಭರತ್ ಶೆಟ್ಟಿ ಬಂಟರ ಯುವ ವಿಭಾಗವನ್ನು ಉದ್ಘಾಟಿಸಿ, ಯೌವನದಲ್ಲಿ ಇರುವ ಅಪೂರ್ವ ಶಕ್ತಿಯಾದ ಮುನ್ನುಗ್ಗಬೇಕೆಂಬ ತುಡಿತ ಯುವಕರಲ್ಲಿ ಮಾತ್ರ ಇದೆ. ಸಮಾಜ ಕಟ್ಟಬೇಕೆಂಬ ಯುವ ವಿಭಾಗದ ಉದ್ದೇಶ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಯುವ ಬಂಟರ ವಿಭಾಗದ ಲೋಗೋ ಅನಾವರಣ: ಪಡುಬಿದ್ರಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಯುವ ಬಂಟರ ವಿಭಾಗದ ಲೋಗೋ ಅನಾವರಣಗೊಳಿಸಿ ಶುಭ ಹಾರೈಸಿದರು.
ಉದ್ಯಮಿ ಹಾಗೂ ಸಮಾಜಸೇವಕ ಸುರೇಶ್ ಶೆಟ್ಟಿ ಗುರ್ಮೆ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಕಲ್ಪ ಶುದ್ಧಿಯಿಂದ ಗೆಲುವು ಖಚಿತ ಎಂದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕುರ್ಕಿಲ್‌ಬೆಟ್ಟು ಇನ್ನ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಮುನಿಯಾಲ್ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಪಡುಬಿದ್ರಿ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ವೈ.ಶಶಿಧರ್ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಗೌರವಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಯುವ ಬಂಟರ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಬಹುಮಾನ ವಿತರಣೆ: ಇದೇ ಸಂದರ್ಭ ಐಡಿಬಿಐ ಫೆಡರಲ್ ಮತ್ತು ಬಂಟರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಖಜಾಂಚಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ನೇತ್ರಾವತಿ ಆರ್.ಶೆಟ್ಟಿ ವೇದಿಕೆಯಲ್ಲಿದ್ದರು.
ಯುವ ಬಂಟರ ವಿಭಾಗದ ಕಾರ್ಯದರ್ಶಿ ಸುಜಿತ್ ಶೆಟ್ಟಿ ಪ್ರಸ್ತಾವಿಸಿದರು. ಖಜಾಂಚಿ ಪ್ರಗತ್ ಜಿ.ಶೆಟ್ಟಿ ವಂದಿಸಿದರು. ಪ್ರಸೂದಾ ಶೆಟ್ಟಿ, ಜಯ ಎಸ್ ಶೆಟ್ಟಿ ಪದ್ರ ಮತ್ತು ಡಾ.ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಯುವ ಬಂಟರ ವಿಭಾಗದ ಸದಸ್ಯರಿಮದ ನೃತ್ಯ ಪ್ರದರ್ಶನ, ಮಂಗಳೂರು ಹಾಸ್ಯ ಕಲಾವಿದರಿಂದ ಕುಸಲ್ ಕಾರ್ಯಕ್ರಮ ನಡೆಯಿತು.