ಕಾನನದ ಆಚೆಯ ಉತ್ತರ ರಹಿತ ಪ್ರಶ್ನೆ…..
ಲೇಖಕರು – ದಿನೇಶ್ ಹೊಳ್ಳ
ನಗರದ ಫ್ಲೈ ಓವರ್ ಎತ್ತರ ಎತ್ತರ ಏರುತ್ತಲೇ ಇವೆ, ಹಗಲಿನ ಬೆಳಕಿನ ಥರವೇ ರಾತ್ರಿ ಕೂಡಾ ಜಗ ಜಗಿಸ ಬೇಕೆಂದು ವಿದ್ಯುತ್ ದೀಪಗಳು ಪ್ರಕಾಶ ಹೆಚ್ಚಿಸು ತ್ತಾ ಇವೆ. ನಗರ ಬೆಳೆಯುತ್ತಾ, ಬಡಾವಣೆ ಬೆಳೆಯುತ್ತಾ ನೀರಿನ ದಾಹ ಹೆಚ್ಚುತ್ತಲೇ ಇವೆ, ನಗರದ ಜನರಿಗೆ ಅವಶ್ಯಕತೆಗಳು ಹೆಚ್ಚಾದಂತೆ ದಿನ ಬಳಕೆಯ ವಸ್ತುಗಳ ಖರೀದಿ ಕೂಡಾ ಹೆಚ್ಚಾಗುತ್ತಲೇ ಇವೆ.
ಇದಕ್ಕೆ ಪೂರಕವಾದ ಯೋಜನೆಗಳು, ಯೋಚನೆಗಳು ತಮ್ಮ ಅಟ್ಟಹಾಸ ಮೆರೆಯುತ್ತಾ ಗಾಢವಾಗುತ್ತಿವೆ. ಆದರೆ ನಗರಗಳಿಗೆ ಅಥವಾ ಗ್ರಾಮೀಣ ಪ್ರದೇಶದ ಈ ಅವಶ್ಯಕತೆಗಳ ಪೂರೈಕೆಯ ಹಿಂದೆ ಅಗೋಚರವಾಗಿ ಕಾಡು, ನದಿ,ಕೆರೆ ಬೆಟ್ಟ, ಇನ್ನಿತರ ಜೀವಿಗಳು ಎಷ್ಟು ಬಲಿ ಆಗುತ್ತಿವೆ ಎಂಬುದನ್ನು ಎಲ್ಲಾದರೂ, ಯಾರಾದರೂ ಲೆಕ್ಕ ಇಟ್ಟಿದ್ದಾರಾ ? ಇಂದು ಎಂತೆಂತಹಾ ಟೆಕ್ನಾಲಜಿ ಇದ್ದರೂ, ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕಣ್ಣಿಗೆ ಕಾಣದ ಕೊರೋನ ಎಂಬ ವೈರಸ್ ನಿಂದಾ ಇಡೀ ಜಗತ್ತೇ ಅಡ್ಡಡ್ಡ ಮಲಗಿದೆ.
ಹಾಗಾದರೆ ಈಗ ಇಡೀ ಜಗತ್ತಿನಲ್ಲೇ ಮಾನವ ಎಲ್ಲಕ್ಕಿಂತ ಮುಂದುವರಿದ ಶ್ರೇಷ್ಠ ಜೀವಿ ಎಂಬ ಹಣೆಪಟ್ಟಿ ಎಲ್ಲಿ ಹೋಯಿತು ? ವಿಜ್ಞಾನ, ತಂತ್ರಜ್ಞಾನ ಎಂಬ ರಿಮೋಟ್ ನಿಂದ ಇಡೀ ವಿಶ್ವವನ್ನೇ ಮುಷ್ಟಿಯಲ್ಲಿ ಹಿಡಿದಿಟ್ಟು ಕೊಳ್ಳಬಹುದೆಂಬ ಅಹಂ ಎಲ್ಲಿ ಹೋಯಿತು ? ಪ್ರಕೃತಿಯ ವಿರುದ್ಧ ಹೋಗಿರುವ ನಮಗೆ ಇಂದು ಪ್ರಕೃತಿಯೇ ತನ್ನ ಪ್ರತಾಪದ ಕೊಡುಗೆ ನೀಡುತ್ತಾ ಇದೆ. ಕೊರೋನ ಎಂಬುದು ಒಂದು ಈಗ ಸಣ್ಣ ಪೀಠಿಕೆ ಅಷ್ಟೇ… ಇನ್ನು ಮುಂದಿನ ದಿನಗಳಲ್ಲಿ ನಾವು ಇನ್ನೆಷ್ಟು ನೋವು, ಗಾಯಗಳನ್ನು ಅನುಭವಿಸಲು ಇದೆಯೋ ? ಜಲ ಪ್ರವಾಹ, ಬರ ಪ್ರವಾಹ, ಭೂ ಕುಸಿತ, ಚಂಡ ಮಾರುತ, ಸುನಾಮಿ….ಯಂತಹ ನೈಸರ್ಗಿಕ ದುರಂತಗಳ ಮೆನು ಕಾರ್ಡ್ ನಲ್ಲಿ ಇಂದು ದುರಂತಗಳ ಪಟ್ಟಿ ಹೆಚ್ಚಾಗುತ್ತಲೇ ಇವೆ.
ಆಧುನಿಕತೆ ಎಂಬ ದಾರಿಯಲ್ಲಿ ಮಾನವ ಸಂಭ್ರಮಿಸುತ್ತಾ ಹೋಗುತ್ತಿದ್ದಂತೆಯೇ ಪ್ರಾಕೃತಿಕ ದುರಂತಗಳು ಕೂಡಾ ಮಾನವನ ಹಿಂದೆ ಆಕ್ರಮಿಸುತ್ತ ಬರುತ್ತಿವೆ. ಪರಿಸರ ಸಂರಕ್ಷಣೆ, ಕಾಡು ಉಳಿಸಿ ಎಂಬ ಭಾಷಣ, ಘೋಷಣೆಗಳ ಹಿಂದೆಯೇ ಅಗೋಚರವಾಗಿ ಪರಿಸರ ನಾಶದ ಚಟುವಟಿಕೆಗಳು ಕೂಡಾ ಹೆಚ್ಚಾಗುತ್ತಲೇ ಇವೆ.ಜಗತ್ತಿನ 18 ಸೂಕ್ಷ್ಮ ಜೀವ ವೈವಿಧ್ಯತಾ ಪ್ರದೇಶ ಹಾಗೂ ದಕ್ಷಿಣ ಭಾರತದ ಭದ್ರ ಕೋಟೆ ಎಂದೇ ಗುರುತಿಸಲ್ಪಟ್ಟಿರುವ ಪಶ್ಚಿಮ ಘಟ್ಟ ಇಂದು ತನ್ನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಕಣ್ಣೀರು ಹರಿಸುತ್ತಿದೆ.
ಪ್ರಕೃತಿಯ ರೋದನಕೆ ಕಿವಿಯಾಗುವರು ಯಾರೂ ಇಲ್ಲದೇ ಎಲ್ಲರೂ ತಮ್ಮ ಬದುಕಿನ ಸಂಭ್ರಮದ ಚೌಕಟ್ಟಿನಲ್ಲೇ ಬಿಝಿ ಯಾಗಿರುವರು. ಅರಣ್ಯ ಅತಿಕ್ರಮಣ, ರೆಸಾರ್ಟ್, ಎಸ್ಟೇಟ್ ವಿಸ್ಥರಣೆ, ಟಿಂಬರ್ ಮಾಫಿಯಾ, ಗಣಿಗಾರಿಕೆ, ಜಲ ವಿದ್ಯುತ್ ಯೋಜನೆ, ಕಳ್ಳ ಬೇಟೆ, ಕಾಡ್ಗಿಚ್ಚು, ನದಿ ತಿರುವು ಯೋಜನೆ ಮುಂತಾದ ಅಭಿವೃದ್ದಿ ಎಂಬ ನೆಪದ ಯೋಜನೆಗಳಿಂದ ಪಶ್ಚಿಮ ಘಟ್ಟದ ಕಾಡು, ಗಿರಿ, ಕಣಿವೆ, ನದೀ ಮೂಲ, ವನ್ಯ ಜೀವಿ ಗಳು ತಮ್ಮ ಅಳಿವಿನ ದಾಖಲೆಗೆ ಸಹಿ ಹಾಕುತ್ತ ಬಂದಿರುವ ಕಾರಣ ಇಂದು ಪ್ರಕೃತಿ ವಿಕೋಪಕ್ಕೆ ನಾವು ಹಂತ ಹಂತವಾಗಿ ಬಲಿ ಆಗುತ್ತಲೇ ಇದ್ದೇವೆ.
ಒಂದು ಪ್ರಾಕೃತಿಕ ದುರಂತ ಆಗಿ ಮರೆತು ಬಿಡುವ ಹೊತ್ತಿಗೆ ಇನ್ನೊಂದು ದುರಂತ ಆಗುತ್ತಾ ನಾವು ಪ್ರಕೃತಿ ಮಾತೆಯ ಕೋಪಕ್ಕೆ ಸಿಲುಕುತ್ತಾ ಇರುತ್ತೇವೆ. ಇಷ್ಟೆಲ್ಲಾ ದುರಂತ, ನೋವು, ದುಗುಡ ಏನೇ ಆಗುತ್ತಾ ಇದ್ದರೂ ನಾವು ಇನ್ನೂ ಬದಲಾವಣೆ ಆಗದೇ ಇರುತ್ತಿರುವುದು ಇನ್ನೂ ಒಂದು ದೊಡ್ಡ ದುರಂತ !ಈ ಪ್ರಕೃತಿಯಿಂದ ನಾವೆಷ್ಟು ಉಪಯುಕ್ತತೆಯನ್ನು ಪಡೆದುಕೊಂಡಿದ್ದೇವೆ, ಈ ಪ್ರಕೃತಿ ನಾಶವಾದರೆ ನಾವೆಷ್ಟು ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ನಾವು ಕಲಿತು ನಮ್ಮ ಮಕ್ಕಳಿಗೆ ಕೂಡಾ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇಂದು ನಮ್ಮೆದುರು ಇವೆ. ಪ್ರಕೃತಿಯಿಂದ ನಾವು…ನಮ್ಮಿಂದ ಪ್ರಕೃತಿ ಅಲ್ಲ…ಇದು ನಮ್ಮೆದುರು ಎಚ್ಚರಿಕೆಯ ಫಲಕ.
ಪ್ರಾಕೃತಿಕ ದುರಂತಗಳು ಆದಾಗ ಇದು ಯಾಕೆ ಆಯಿತು ಎಂಬುದರ ಮೂಲ ಕಾರಣ ಕಂಡು ಹಿಡಿದು ಅದಕ್ಕೆ ಪರಿಹಾರ, ಪರ್ಯಾಯ ಕಂಡು ಹುಡುಕಬೇಕು ಹೊರತು ಪ್ರಕೃತಿಯ ಮೇಲೆ ದೋಷಾರೋಪಣೆ ಮಾಡಿ ನಾವು ಸುಮ್ಮನಿರುವುದಿಲ್ಲ. ಜಲ ಸ್ಫೋಟ, ಭೂಕುಸಿತ, ಬರಗಾಲ ಆದಾಗ ನದಿ ಮತ್ತು ಮಳೆಗೆ ಬಯ್ಯುವುದಲ್ಲ. ನದಿಯ ಹರಿಯುವಿಕೆ ಮತ್ತು ಮಳೆಯ ಸುರಿಯುವಿಕೆಗೆ ನಾವೆಷ್ಟು ಸಮಸ್ಯೆಗಳ ತೋರಣ ಕಟ್ಟಿದ್ದೇವೆ ಎಂಬುದರ ಬಗ್ಗೆ ವಿಮರ್ಶೆ ಮಾಡಿ ಪ್ರಕೃತಿ ಸಂರಕ್ಷಣೆಯ ಬಗ್ಗೆ ಜಾಗೃತರಾಗಬೇಕು. ಕೋರೋನ ರೋಗ ಹಾರಾಡುತ್ತಾ ಇದ್ದಾಗ ಲಾಕ್ ಡೌನ್ ಯಾವಾಗ ಅಂತ್ಯ ಆಗುತ್ತವೆ ಎಂಬುದರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ಕೊರೋನ ರೋಗ ಉಗಮ ಹೇಗೆ ಆಯಿತು ? ಎಲ್ಲಿಂದ ಆಯಿತು ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನಗಳು ಆಗಬೇಕು.ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ನಿಸರ್ಗ ಸಂರಕ್ಷಣೆಯ ಪಾಠವನ್ನು ಮಕ್ಕಳಿಗೆ ನೀಡದೇ ಇದ್ದಲ್ಲಿ ಮುಂದೆ ಆಗಲಿರುವ ಪ್ರಾಕೃತಿಕ ದುರಂತಗಳಿಗೆ ನಾವೇ ಕಾರಣ ಆದೀತು ಮತ್ತು ಮುಂದಿನ ದುರಂತಗಳಿಗೆ ನಾವೇ ಆಮಂತ್ರಣ ನೀಡಿ ಆಹ್ವಾನಿಸಿದಂತೆ ಆಗಬಹುದು.