ಕೆಪಿಸಿಸಿ ನೂತನ ಸಾರಥಿ ಡಿಕೆ.ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ
ಬೆಂಗಳೂರು: ಕೆಪಿಸಿಸಿ ನೂತನ ಸಾರಥಿ ಡಿ ಕೆ.ಶಿವಕುಮಾರ್ ಅವಕ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಜು.2ರಂದು ಬೆಳಿಗ್ಗೆ 10.30ಕ್ಕೆ ವಿಶ್ವದಾಖಲೆಯ ಹಾಗೂ ಇಡೀ ರಾಷ್ಟ್ರವೇ ತಿರುಗಿ ನೋಡುವಂತಹ ವರ್ಚುಯಲ್ ಮೂಲಕ ಬರೋಬ್ಬರಿ 10 ಲಕ್ಷ ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ಶಿವಕುಮಾರ್ ಅವರು ಕೆಪಿಸಿಸಿಯ 41ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.
ಕೆಪಿಸಿಸಿ ಕಚೇರಿ ಹಿಂಭಾಗದಲ್ಲಿರುವ ನೂತನ ಸಭಾಂಗಣದಲ್ಲಿ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲು ಪ್ರತಿಜ್ಞಾ ಕಾರ್ಯಕ್ರಮದ ವೇದಿಕೆ ಸಜ್ಜುಗೊಂಡಿದೆ.
ರಾಜ್ಯಾದ್ಯಂತ ಬರೋಬ್ಬರಿ 10 ಲಕ್ಷ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಜೊತೆ ಧ್ವನಿಗೂಡಿಸಿ ಸಂವಿಧಾನ ಪೀಠಿಕೆ ಓದುವ ಹಾಗೂ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಶಿವಕುಮಾರ್ ಪದಗ್ರಹಣಕ್ಕೆ ಸಾಥ್ ನೀಡಲಿದ್ದಾರೆ. ಈ 10 ಲಕ್ಷ ಮಂದಿ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಲಿದ್ದಾರೆ.
ವರ್ಚುಯಲ್ ಜಗತ್ತಿನಲ್ಲಿ ಈ ಭಾರಿ ಪ್ರಮಾಣದಲ್ಲಿ ಜನರು ಪದಗ್ರಹಣ ಕಾರ್ಯಕ್ರಮಕ್ಕೆ ಒಮ್ಮೆಗೇ ನೆರೆಯಲಿರುವುದು ವಿಶ್ವದಾಖಲೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.
ಕಾರ್ಯಕ್ರಮ ವೀಕ್ಷಣೆಗೆ ರಾಜ್ಯಾದ್ಯಂತ 7,800 ಕಡೆ ವ್ಯವಸ್ಥೆ ನಡೆಸಲಾಗಿದ್ದು, ಜ್ಯೂಮ್ ಆ್ಯಪ್ ಮೂಲಕ ನೇರವಾಗಿ ಕಾರ್ಯಕ್ರಮ ವೀಕ್ಷಿಸುವ ಹಾಗೂ ಪ್ರತಿಕ್ರಿಯೆ ವ್ಯಕ್ತಪಡಿಸುವ ತಾಂತ್ರಿಕ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ವರ್ಚುಯಲ್ ಪದಗ್ರಹಣಕ್ಕೆ ಡಿ.ಕೆ.ಶಿವಕುಮಾರ್ ಜು.1ರಂದು ಬುಧವಾರ ಖುದ್ದು ಪ್ರಾಯೋಗಿಕ ಪರೀಕ್ಷೆ ನಡೆಸಿದರು. ಬೆಳಿಗ್ಗೆ 8ಗಂಟೆಗೆ 7,800 ಮಂದಿಗೆ ಲಿಂಕ್ ಕಳುಹಿಸಿ ಮಧ್ಯಾಹ್ನ 12 ಗಂಟೆಯಲ್ಲಿ ಪ್ರಾಯೋಗಿಕ ಪ್ರತಿಜ್ಞಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಈ ಮೂಲಕ ಗುರುವಾರದ ಕಾರ್ಯಕ್ರಮ ಯಾವುದೇ ತಾಂತ್ರಿಕ ಅಡಚಣೆ ಇಲ್ಲದೆ ಸರಾಗವಾಗಿ ನಡೆಸಲು ಎಲ್ಲಾ ವ್ಯವಸ್ಥೆಯನ್ನು ಸ್ವತಃ ಖಾತ್ರಿಪಡಿಸಿಕೊಂಡರು. ಹೀಗಾಗಿ ರಾಜ್ಯದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಎಲ್ಲೆ ಮೀರಿದ್ದು, ಪ್ರತಿನಗರ, ಪಟ್ಟಣದಲ್ಲೂ ಡಿಕೆ.ಶಿವಕುಮಾರ್ ಅವರಿಗೆ ಶುಭ ಕೋರುವ ಬ್ಯಾನರ್’ಗಳು ರಾರಾಜಿಸುತ್ತಿವೆ.