ಕನಕಪುರದ ಬಂಡೆ ಅಲ್ಲ, ವಿಧಾನಸೌಧದ ಮೆಟ್ಟಿಲುಗಳ ಚಪ್ಪಡಿ ಕಲ್ಲು ನಾನಾದರೆ ಸಾಕು: ಡಿಕೆಶಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ‘ಪ್ರತಿಜ್ಞಾ ದಿನ’ ವಿಶೇಷ ಕಾರ್ಯಕ್ರಮದ ಮೂಲಕ ಪದಗ್ರಹಣ ಸ್ವೀಕರಿಸಿದರು. 

ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಧ್ವಜವನ್ನು ಶಿವಕುಮಾರ್ ಗೆ ಹಸ್ತಾಂತರ ಮಾಡಿದರು. ಕಾರ್ಯಾದ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಸಹ ಪದಗ್ರಹಣ ಮಾಡಿದರು.

ಇದೇ ವೇಳೆ ರಾಜ್ಯದ ಗ್ರಾಮ ಪಂಚಾಯ್ತಿ, ನಗರ ಸಭೆ ಹಾಗೂ ಪುರಸಭೆ ಸೇರಿದಂತೆ ಸುಮಾರು 10 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಭಾಗಿ, ಪ್ರತಿಜ್ಞೆ ಸ್ವೀಕರಿಸಿದರು.

ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಸಂಗೀತ ನಿರ್ದೇಶಕ ಸಾಧುಕೋಕಿಲ ಸಂಗೀತ ಸುಧೆಯೊಂದಿಗೆ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ರಂಗು ತಂದಿತು. ಕೆಪಿಸಿಸಿ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮದ ಆರಂಭದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. 

ಸೇವಾದಳ ಘಟಕದಿಂದ ವಂದೇ ಮಾತರಂ ಗೀತೆ ಮೊಳಗಿದ್ದು, ಕೆಪಿಸಿಸಿ ವಿವಿಧ ಘಟಕಗಳು, ಮುಖಂಡರಿಂದ ಜ್ಯೋತಿ ಬೆಳಗಿಸಲಾಯಿತು. ವೇದಿಕೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರಹ್ಮಾನ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

ಉದ್ಘಾಟನಾ ಭಾಷಣದಲ್ಲಿ ಪದಗ್ರಹಣ ಕಾರ್ಯಕ್ರಮ ಕುರಿತು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಸಂದೇಶವನ್ನು ವೇಣುಗೋಪಾಲ್ ವಾಚಿಸಿದರು. “ಎನ್ ಎಸ್ ಯು ಐ ನಿಂದಲೂ ನಾನು ಡಿಕೆ ಶಿವಕುಮಾರ್ ರನ್ನುಬಲ್ಲೆ. ತಳ ಮಟ್ಟದಿಂದ ಬೆಳೆದು ಬಂದು ಇಂದು ಈ ಮಟ್ಟಕ್ಕೇರಿದ್ದಾರೆ. ಸವಾಲುಗಳು ಅವಕಾಶಗಳನ್ನು ಸೃಷ್ಟಿ ಮಾಡುತ್ತವೆ. ಅಂತಹ ಅವಕಾಶಗಳನ್ನು ಶಿವಕುಮಾರ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇಂದು ಬಂಡೆ ತರಹ ಸವಾಲುಗಳನ್ನೆಲ್ಲ ಗೆದ್ದು ನಮ್ಮ ಮುಂದೆ ನಿಂತಿದ್ದಾರೆ ಎಂದರು.
ಗುಜರಾತ್ ಕಾಂಗ್ರೆಸ್ ಶಾಸಕರ ರಕ್ಷಣೆ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ನಿರ್ವಹಿಸಿದ ಸೇವೆ ಎದುರಿಸಿದ್ದ ಸಂಕಷ್ಟಗಳನ್ನು ವೇಣುಗೋಪಾಲ್ ಭಾಷಣದಲ್ಲಿ ಸ್ಮರಿಸಿದರು.

ಕರ್ನಾಟಕದಲ್ಲಿ ಪಕ್ಷಕ್ಕೆ ಒಳ್ಳೆಯ ತಳಹದಿ ಇದೆ. ಒಳ್ಳೆಯ ಪಥದಲ್ಲಿ ಡಿ.ಕೆ.ಶಿವಕುಮಾರ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಕೋವಿಡ್ 19, ಆರ್ಥಿಕ ಪರಿಸ್ಥಿತಿಯ ಸಂಕಷ್ಟದ ನಡುವೆ ರಾಷ್ಟ್ರದ ಜನ ತೊಂದರೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಆಯೋಜಿಸಿರುವ ಡಿಕೆ ಶಿವಕುಮಾರ್ ರನ್ನು ಅಭಿನಂದಿಸುವುದಾಗಿ ವೇಣುಗೋಪಾಲ್ ಹೇಳಿದರು.

ನಾನು ಯಾವ ತಪ್ಪೂ ಮಾಡಿಲ್ಲ. ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ಆದರೆ ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಜಗ್ಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪಕ್ಷಕ್ಕಾಗಿ ನಾನು ಅನೇಕ ತ್ಯಾಗ ಮಾಡಿದ್ದೇನೆ, ಪಕ್ಷವೂ ನನ್ನನ್ನು ಕಡೆಗಣಿಸಿದ್ದರೂ ನಾನು ಪಕ್ಷ ದ್ರೋಹ ಮಾಡಲಿಲ್ಲ. ನನ್ನ ಈ ನಿಷ್ಠೆಗೆ ಈಗ ಬೆಲೆ ಸಿಕ್ಕಿದೆ ಎಂದರು.

ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ, ಆದರೆ ಸವಾಲಿನಿಂದ ಹಿಂದೆ ಸರಿಯುವವನಲ್ಲ. ನನಗೆ ಹಿಂಬಾಲಕರು ಬೇಡ. ಪಕ್ಷವನ್ನು ಬೂತು ಮಟ್ಟದಿಂದ ಕಟ್ಟಿ ಬೆಳೆಸುವುದು ನನ್ನ ಗುರಿ ಎಂದರು.

ನಾನು ಕನಕಪುರದ ಬಂಡೆ ಅಲ್ಲ. ವಿಧಾನಸೌಧದ ಮೆಟ್ಟಿಲುಗಳ ಚಪ್ಪಡಿ ಕಲ್ಲು ನಾನಾದರೆ ಸಾಕು, ಆ ಕಲ್ಲನ್ನು ಮೆಟ್ಟಿಕೊಂಡು ಹಲವಾರು ಮಂದಿ ವಿಧಾನಮಂಡಲಕ್ಕೆ ತೆರಳುವಂತಾಗಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!