ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ
ನವದೆಹಲಿ : ” ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗೆ ಸಹಾಯಕವಾಗಲು ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತದೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು, “ದೇಶದಲ್ಲಿಯೇ ಪ್ಲಾಸ್ಮಾ ಥೆರಪಿ ಪ್ರಯೋಗ ಮಾಡಿದ ಮೊದಲ ರಾಜ್ಯ ದೆಹಲಿ ಆಗಿದೆ. 29 ಜನರ ಮೇಲೆ ಪ್ರಯೋಗ ಮಾಡಲಾಗಿದ್ದು, ಉತ್ತಮವಾಗಿ ಫಲಿತಾಂಶ ಬಂದಿದೆ” ಎಂದರು. “ಕೇಂದ್ರ ಸರ್ಕಾರ ದೆಹಲಿಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಥೆರಪಿ ಮೂಲಕ ಚಿಕಿತ್ಸೆ ನೀಡಲು ಒಪ್ಪಿಗೆ ನೀಡಿದೆ. ಪ್ಲಾಸ್ಮಾ ಥೆರಪಿ ಆದ ರೋಗಿಗಳ ಉಸಿರಾಟದ ಸಮಸ್ಯೆ ನಿವಾರಣೆಯಾಗಿದೆ” ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.
“ದೇಶದಲ್ಲಿಯೇ ದೆಹಲಿಯಲ್ಲಿ ಮೊದಲು ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಪ್ಲಾಸ್ಮಾ ನೀಡಬಹುದಾಗಿದೆ. ವೈದ್ಯರ ಶಿಫಾರಸಿನ ಅನ್ವಯ ಬೇರೆ ರೋಗಿಗೆ ಪ್ಲಾಸ್ಮಾ ಥೆರಪಿ ಮಾಡಲಾಗುತ್ತದೆ” ಎಂದರು. “ಇನ್ಸ್ಟಿಟ್ಯೂಟ್ ಆಫ್ ಲಿವರ್ ಆಂಡ್ ಬಿಲಿಯರಿ ಸೈನ್ಸಸ್ನಲ್ಲಿ ಪ್ಲಾಸ್ಮಾ ಬ್ಯಾಂಕ್ ಇರಲಿದೆ. ಎರಡು ದಿನದಲ್ಲಿ ಈ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ. ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು ತಾವಾಗಿಯೇ ಬಂದು ಪ್ಲಾಸ್ಮಾ ನೀಡಬಹುದಾಗಿದೆ” ಎಂದು ಸಿಎಂ ಸ್ಪಷ್ಟಪಡಿಸಿದರು. “ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ನೀಡಿದರೆ ಉಳಿದವರೂ ಗುಣಮುಖರಾಗಲು ಸಹಾಯಕವಾಗುತ್ತದೆ. ಪ್ಲಾಸ್ಮಾ ನೀಡುವಂತೆ ಇದು ನನ್ನ ಮನವಿಯಾಗಿದೆ” ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.