ಕಾರ್ಕಳ: ಚಲನಚಿತ್ರ ನಟ ಶೇಖರ್ ಭಂಡಾರಿ ಕೊರೋನಾ ಸೋಂಕಿಗೆ ಬಲಿ
ಉಡುಪಿ (ಉಡುಪಿ ಟೈಮ್ಸ್ ವರದಿ ) ಚಲನ ಚಿತ್ರ ನಟ, ಚುಟುಕು ಸಾಹಿತಿ, ಹಾಸ್ಯ ಕವಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶೇಖರ್ ಭಂಡಾರಿ ಕಾರ್ಕಳ (72) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಶೇಖರ ಭಂಡಾರಿ ಕಾರ್ಕಳದಲ್ಲಿಯೇವ ವಿದ್ಯಾಭ್ಯಾಸ ಮುಗಿಸಿದ ಅವರು, ವಿಜಯಾ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನ ಯಶವಂಪತಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತಿ ಪಡೆದಿದ್ದಾರೆ.
ನಾಟಕಗಳಲ್ಲಿ ಅಭಿನಯಿಸುತ್ತಾ ಚಿತ್ರರಂಗ ಪ್ರವೇಶಿಸಿ ಖಳನಟ,ಹಾಸ್ಯ ಪಾತ್ರ,ಪೋಷಕ ಪಾತ್ರ ಹೀಗೆ ಪಾತ್ರಗಳನ್ನು ಮಾಡುತ್ತಾ ಗಮನ ಸೆಳೆದು,ಚುಟುಕು ಸಾಹಿತ್ಯ ಕೃಷಿಗಿಳಿದು ಅಲ್ಲಿಯೂ ತಮ್ಮ ಛಾಪು ಒತ್ತಿ “ಚುಟುಕು ಸಾಹಿತಿ” “ಪ್ರಾಸ ಪ್ರವೀಣ” ನೆಂದು ಹೆಸರು ಗಳಿಸಿ,ಸಮಾಜ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಪ್ಪತ್ತರ ಹರೆಯದಲ್ಲೂ ಲವಲವಿಕೆಯಿಂದ ಇರುವ ಇವರಿಗೆ 2018 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿತ್ತು.
ಶೇಖರ ಭಂಡಾರಿ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಜೆಗಳು ಪ್ರಭುಗಳು, ಇಂದ್ರ ಧನುಷ್, ಸ್ವಲ್ಪ ಅಜೆಸ್ಟ್ ಮಾಡ್ಕೋಳಿ, ಏಕಾಂಗಿ, ಓ ನನ್ನ ನಲ್ಲೆ, ಲವ್, ಧರ್ಮಯೋಧರು, ನನ್ನ ತಂಗಿ, ಕೋಟಿ ಚೆನ್ನಯ್ಯ, ತಮಾಶೆಗಾಗಿ, ಐದೊಂದ್ಲ ಐದು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.