ಉದ್ಯಾವರ : ಮನೆ ಮನೆಯಲ್ಲಿ ವನಮಹೋತ್ಸವ ಆಚರಣೆ
ಉದ್ಯಾವರ (ಉಡುಪಿ ಟೈಮ್ಸ್ ವರದಿ ) : ‘ಪರಿಸರವನ್ನು ಉಳಿಸೋಣ, ಪರಿಸರವನ್ನು ಬೆಳೆಸೋಣ’ ಧ್ಯೇಯ ವಾಕ್ಯದೊಂದಿಗೆ ಭಾರತೀಯ ಕಥೊಲಿಕ್ ಯುವ ಸಂಚಲನ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ನೇತೃತ್ವದಲ್ಲಿ ಕಥೋಲಿಕ್ ಸಭಾ ಉದ್ಯಾವರ ಘಟಕದ ಸಹಕಾರದೊಂದಿಗೆ ದೇವಾಲಯದ ವ್ಯಾಪ್ತಿಯ ಪ್ರತಿ ಮನೆ ಮನೆಯಲ್ಲೂ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯಕ್ಕೆ ಒಳಪಟ್ಟ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯು, ತನ್ನ ಸುವರ್ಣ ಮಹೋತ್ಸವದ 18 ನೇ ಕಾರ್ಯಕ್ರಮವಾಗಿ ಪರಿಸರ ರಕ್ಷಿಸೋಣ, ಬೆಳೆಸೋಣ ಎಂಬ ಧ್ಯೇಯದೊಂದಿಗೆ ಪ್ರತಿ ಮನೆ ಮನೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದೇವಾಲಯದ ವ್ಯಾಪ್ತಿಯ 540 ಮನೆಗಳಲ್ಲಿ ಕುಟುಂಬ ಸದಸ್ಯರು ಜೊತೆಯಾಗಿ ಗಿಡ ನೆಡುವ ಮೂಲಕ ಪರಿಸರ ಬೆಳೆಸುವ ಜೊತೆಯಾದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ, ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅತಿ ವಂ. ಸ್ಟ್ಯಾನಿ ಬಿ ಲೋಬೊ, ಸಹಾಯಕ ಧರ್ಮಗುರು ವಂ.ರೊಲ್ವಿನ್ ಅರಾನ್ನರ ಜೊತೆಗೂಡಿ ದೇವಾಲಯದ ವಠಾರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೋರೋನ ಸಂಕಷ್ಟದ ಸಮಯದಲ್ಲಿ, ಪರಿಸರದ ಜಾಗೃತಿ ಮೂಡಿಸಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಪ್ರಕೃತಿಯನ್ನು ದೇವರು ನಮಗೆ ನೀಡಿದ್ದು, ಅದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶಪಡಿಸುತ್ತಿದ್ದಾನೆ. ಇದರಿಂದ ಮನುಷ್ಯ ಜೀವನದಲ್ಲಿ ಹಲವಾರು ರೋಗಗಳು ಬರುತ್ತಿವೆ. ಇದಕ್ಕಾಗಿ ಪರಿಹಾರವನ್ನು ಹುಡುಕುವ ಜವಾಬ್ದಾರಿಯೂ ನಮ್ಮ ಮೇಲಿದೆ. ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ, ಕೆಥೋಲಿಕ್ ಸಭಾ ಜೊತೆಗೂಡಿ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿದೆ. ಗಿಡ ನೆಡುವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಜೊತೆಯಾಗೋಣ, ಪರಿಸರವನ್ನು ಉಳಿಸೋಣ ಎಂದರು.
ದೇವಾಲಯದ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಬೆಂಗಳೂರು, ಮುಂಬೈ, ಅರಬ್ ಸಹಿತ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಉದ್ಯಾವರದ ಕ್ರೈಸ್ತ ಕುಟುಂಬಗಳು ತಮ್ಮ ಮನೆಯ ಪರಿಸರದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮದಲ್ಲಿ ಜೊತೆಯಾದರು.
ಈ ಸಂದರ್ಭದಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೋರನ್ನ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜಾ, ಐಸಿವೈಎಂ ಅಧ್ಯಕ್ಷ ರೋಯಲ್ ಕಾಸ್ತೆಲಿನೋ, ಪ್ರಮುಖರಾದ ರೊನಾಲ್ಡ್ ಡಿಸೋಜ, ಆಲ್ವಿನ್ ಅಂದ್ರಾದೆ, ವಿಲ್ಫ್ರೆಡ್ ಡಿಸೋಜಾ, ಜೆರಾಲ್ಡ್ ಪಿರೇರ, ಜೂಲಿಯಾ ಡಿಸೋಜಾ, ಗಾಡ್ಫ್ರೀ ಡಿಸೋಜಾ, ರೊಯ್ಸ್ ಫೆರ್ನಾಂಡಿಸ್, ಜೋನ್ ಗೋಮ್ಸ್, ಜೋಸೆಫ್ ಕುಲಾಸೊ, ಎರೋಲ್ ಗೊನ್ಸಾಲ್ವಿಸ್, ಜೂದ್ ನೆಲ್ಸನ್, ಪ್ರೇಮ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.
ಕೆಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಲಾರೆನ್ಸ್ ಡೇಸಾ ಸ್ವಾಗತಿಸಿದರೆ, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡೋರ ಆರೋಜ ವಂದಿಸಿದರು. ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.