ಕರ್ನಾಟಕಕ್ಕೆ ಮಿಡತೆ ದಾಳಿ ಸಾಧ್ಯತೆ – ಎಚ್ ಡಿಕೆ ಆತಂಕ
ಬೆಂಗಳೂರು – ಉತ್ತರ ಭಾರತದ ಕೆಲವು ರಾಜ್ಯಗಳನ್ನು ಈಗಾಗಲೇ ರಕ್ಕಸ ಮಿಡತೆಗಳು ಬಾಧಿಸುತ್ತಿವೆ. ಕರ್ನಾಟಕ ರಾಜ್ಯಕ್ಕೂ ಈ ಮಿಡತೆಗಳು ಆಗಮಿಸುವ ಆತಂಕ ರೈತರನ್ನು ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ.
ಬುಧವಾರ ತಮ್ಮ ಟ್ವಿಟ್ಟರ್ ನ ಖಾತೆಯಲ್ಲಿ ಟ್ವಿಟ್ ಮಾಡಿದ ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ‘ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಮಹಾರಾಷ್ಟ್ರ ಪ್ರವೇಶಿಸಿದ್ದು ಕರ್ನಾಟಕಕ್ಕೂ ಪ್ರವೇಶಿಸುವ ಆತಂಕವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕ್ಷಣಾರ್ಧದಲ್ಲಿ ಬೆಳೆ ತಿಂದು ಹೋಗುವ ಈ ಮಿಡತೆಗಳು ಭವಿಷ್ಯದಲ್ಲಿ ಆಹಾರ ಕೊರತೆಗೆ ಕಾರಣವಾಗುತ್ತವೆ’ ಎಂದು ಮಾಜಿ ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದಾರೆ.
‘ಮಿಡತೆಗಳ ಹಿಂಡು ಸದ್ಯ ಮಹಾರಾಷ್ಟ್ರದ ಅಮರಾವತಿಯಲ್ಲಿವೆ ಎಂಬ ಮಾಹಿತಿ ಇದೆ. ಅಮರಾವತಿ ಭೌಗೋಳಿಕವಾಗಿ ನಮ್ಮ ಬೀದರ್, ಕಲಬುರಗಿ ಜಿಲ್ಲೆಗೆ ಹತ್ತಿರದಲ್ಲಿದೆ. ಪೂರ್ವ ಆಫ್ರಿಕಾ, ಇರಾನ್ ಮರುಭೂಮಿಯಲ್ಲಿ ಕಂಡುಬರುವ ಈ ಮಿಡತೆಗಳು ಪಾಕಿಸ್ತಾನದ ಮೂಲಕ ಭಾರತ ಪ್ರವೇಶಿಸಿವೆ. ಇವುಗಳಿಗೆ ಜಿಲ್ಲೆಗಳನ್ನು ದಾಟುವುದು ಅಸಾಧ್ಯವೇನಲ್ಲ’ ಎಂದು ತಿಳಿಸಿದ್ದಾರೆ.
‘1 ಚದರ ಕಿ.ಮೀ. ಪ್ರದೇಶದಲ್ಲಿ 4 ಕೋಟಿ ಮಿಡತೆಗಳು ಇರುತ್ತವೆ. ತಮ್ಮ ದೇಹ ಗಾತ್ರದದಷ್ಟೇ ಆಹಾರವನ್ನು ಈ ಮಿಡತೆಗಳು ತಿನ್ನುತ್ತವೆ ಎಂದರೆ, ಇವು ಯಾವ ಪ್ರಮಾಣದಲ್ಲಿ ಬೆಳೆ ನಾಶ ಮಾಡುತ್ತವೆ ಎಂಬುದನ್ನು ಲೆಕ್ಕಿಸಬಹುದು. ಹೀಗಾಗಿ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಔಷಧ ಸಿಂಪಡಣೆ ದೊಡ್ಡ ಪ್ರಮಾಣದಿಂದ ನಡೆಯುತ್ತಿದೆ’ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ‘ರಾಜ್ಯಕ್ಕೂ ಇವುಗಳ ಭೀತಿ ಇರುವುದರಿಂದ ಸರ್ಕಾರ ಕೂಡಲೇ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದ ಅಭಿಪ್ರಾಯ ಪಡೆದು ಕಾರ್ಯತಂತ್ರಗಳಿಗೆ ಸಿದ್ಧವಾಗಬೇಕು. ಸಂಭಾವ್ಯ ಅಪಾಯವನ್ನು ಮೊದಲೇ ಹಿಮ್ಮೆಟ್ಟಿಸಬೇಕು. ಬೆಳೆ ತಿಂದು ರೈತರ ಬದುಕು ಅತಂತ್ರ ಮಾಡುವ ಈ ರಕ್ಕಸ ಮಿಡತೆಗಳು ರಾಜ್ಯಕ್ಕೆ ಬಾರದೇ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.