ಸಂಘಟನೆಯಲ್ಲಿ ಸಹಕಾರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ – ರೋಲ್ಫಿ ಡಿಕೋಸ್ತಾ
ಉಡುಪಿ: ಸಂಘಟನೆಯ ಪದಾಧಿಕಾರಿಗಳು ಪರಸ್ಪರ ಸಹಕಾರ ಮನೋಭಾವದಿಂದ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಆ ಸಂಘಟನೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾದ ರೋಲ್ಫಿ ಡಿಕೋಸ್ತಾ ಹೇಳಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಶೋಕಮಾತಾ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಿದ ಆಮ್ಚೊ ಸಂದೇಶ್ ಪತ್ರಿಕಾ ಪ್ರತಿನಿಧಿಗಳಿಗೆ, ಕೋಶಾಧಿಕಾರಿಗಳಿಗೆ ಮತ್ತು ಮಾಧ್ಯಮ ಹಾಗೂ ಪ್ರಚಾರ ಸಮಿತಿಯ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕೆಥೊಲಿಕ್ ಸಭಾ ಸಂಘಟನೆ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಲಿಷ್ಠವಾಗಿ ಬೆಲೆಯಲು ಕಾರಣ ಸದಸ್ಯರ ಮತ್ತು ಪದಾಧಿಕಾರಿಗಳ ಒಗ್ಗಟ್ಟು. ಈ ಒಗ್ಗಟ್ಟು ಮುರಿಯುವ ಪ್ರಯತ್ನ ಕೂಡ ನಡೆದಾಗ ಅದಕ್ಕೆ ಸ್ಪಷ್ಟ ಉತ್ತರ ಸದಸ್ಯರು ನೀಡಲು ಬದ್ದರಾದಾಗ ಅಂತಹ ಸಂಘಟನೆ ಬಹುಕಾಲ ಬಾಳಲು ಸಾಧ್ಯವಿದೆ ಎಂದರು.
ಘಟಕ, ವಲಯಗಳ ಕೋಶಾಧಿಕಾರಿಗಳು ಸಂಘಟನೆಯನ್ನು ಲೆಕ್ಕಪತ್ರವನ್ನು ಯಾವ ರೀತಿಯಲ್ಲಿ ಪಾರದರ್ಶಕವಾಗಿರಿಸಬೇಕು ಎಂದು ಹಿರಿಯ ಲೆಕ್ಕಪರಿಶೋಧಕರಾದ ಪ್ರೀತೇಶ್ ಡೆಸಾ ಮಾಹಿತಿ ನೀಡಿದರೆ, ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡಿನ ಬಗ್ಗೆ ಸಂಚಾಲಕರಾದ ವಿವಿಯನ್ ಕರ್ನೆಲಿಯೋ ಮತ್ತು ವೆರೋನಿಕಾ ಕರ್ನೆಲಿಯೋ ಮಾಹಿತಿಯನ್ನು ನೀಡಿದರು.
ಮಾಧ್ಯಮಗಳ ಉಪಯೋಗ ಯಾವ ರೀತಿಯಲ್ಲಿ ಮಾಡಬೇಕು, ಸಾಮಾಜಿಕ ಜಾಲತಾಣಗಳ ಬಗ್ಗೆ ಮತ್ತು ಫೇಕ್ ನ್ಯೂಸ್ ಬಗ್ಗೆ ವಹಿಸಬೇಕಾದ ಎಚ್ಚರಿಕೆ, ಕಾರ್ಯಕ್ರಮದ ವರದಿಯನ್ನು ಯಾವ ರೀತಿಯಲ್ಲಿ ತಯಾರಿಸಬೇಕು ಎನ್ನುವುದರ ಕುರಿತು ಉಡುಪಿ ಧರ್ಮಪಾಂತ್ಯದ ಮಾಧ್ಯಮ ಸಂಯೋಜಕ ಪತ್ರಕರ್ತ ಮೈಕಲ್ ರೊಡ್ರಿಗಸ್ ಮಾಹಿತಿ ನೀಡಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷ ರೋಬರ್ಟ್ ಮಿನೇಜಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.